ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಯದ ಕೆರೆಗೆ ₹22.4 ಕೋಟಿ ವೆಚ್ಚ

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಶ್ರೀಗಂಧ ಕಾವಲು ಕೆರೆ ಅಭಿವೃದ್ಧಿ
Published 18 ಆಗಸ್ಟ್ 2023, 23:22 IST
Last Updated 18 ಆಗಸ್ಟ್ 2023, 23:22 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ಈ ಕೆರೆ ಉಳಿಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಸ್ಥಳೀಯರ ಹೋರಾಟದಿಂದ ಅಲ್ಪ‍ಸ್ವಲ್ಪ ಉಳಿದಿರುವ ಶ್ರೀಗಂಧ ಕಾವಲು ಕೆರೆಗೆ ₹22.4 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೆ, ನೀರು ಹರಿದುಬರುವ ಹಾದಿಯೇ ಇದಕ್ಕಿಲ್ಲ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಶ್ರೀಗಂಧ ಕಾವಲು ಕೆರೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೂ (ಎಸ್‌ಡಬ್ಲುಎಂ) ಕೆರೆ ಅಭಿವೃದ್ಧಿಗೂ ಯಾವ ಸಂಬಂಧ ಎನ್ನುವ ಅನುಮಾನ ಕಾಡುತ್ತಿದೆ. ಆದರೆ, ಶ್ರೀಗಂಧ ಕಾವಲು ಕೆರೆ ಸೇರಿದಂತೆ ಹೊಸಕೆರೆಹಳ್ಳಿ ಕೆರೆ, ಮಲ್ಲತ್ತಹಳ್ಳಿ ಕೆರೆಗಳನ್ನೂ ‘ಶುಭ್ರ ಬೆಂಗಳೂರು’ ಯೋಜನೆಯಡಿ ಎಸ್‌ಡಬ್ಲುಎಂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

ನಾಗರಿಕರ ಹೋರಾಟದಿಂದ ಹೊಸಕೆರೆಹಳ್ಳಿ ಕೆರೆಯಲ್ಲಿ ರಸ್ತೆ ಮಾಡುವ ಕೆಲಸ ಸೇರಿದಂತೆ ಹಲವು ಕಾಮಗಾರಿಗಳು ಸ್ಥಗಿತಗೊಂಡಿವೆ. ಮಲ್ಲತ್ತಹಳ್ಳಿ ಕೆರೆಯ ಕಾಮಗಾರಿ ಹೈಕೋರ್ಟ್‌ ನಿಗಾದಲ್ಲಿದೆ. ಆದರೆ, ಶ್ರೀಗಂಧ ಕಾವಲು ಕೆರೆಯ ಅಭಿವೃದ್ಧಿ ಕಾಮಗಾರಿಗೆ ತಡೆಯಿಲ್ಲದೆ ನಡೆಯುತ್ತದೆ. ಕೆರೆಗೆ ನೀರಿನ ಹರಿವು ಇಲ್ಲದೆ, ಅಲಂಕಾರಿಕ ಪ್ರದೇಶವಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಯಶವಂತಪುರ ಹೋಬಳಿ ಶ್ರೀಗಂಧ ಕಾವಲು ಗ್ರಾಮದ ಸರ್ವೆ ನಂ. 15ರಲ್ಲಿ 6 ಎಕರೆ 33 ಗುಂಟೆ ಪ್ರದೇಶದಲ್ಲಿ ಶ್ರೀಗಂಧ ಕಾವಲು ಕೆರೆ ಇದೆ ಎಂದು ಕಂದಾಯ ದಾಖಲೆಗಳಿವೆ. ಅಮ್ಮ ಭಗವಾನ್‌ ಸೇವಾ ಸಮಿತಿ ಟ್ರಸ್ಟ್‌ 7 ಗುಂಟೆ ಒತ್ತುವರಿ ಮಾಡಿಕೊಂಡಿದ್ದು, ರಸ್ತೆಗಾಗಿ ಸುಮಾರು 3 ಗುಂಟೆ ಒತ್ತುವರಿಯಾಗಿದೆ. ಕೆರೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಿಲ್ಲ. ಬದಲಿಗೆ, ಶಾಲೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕೆರೆ ಅಂಗಳದಲ್ಲೇ ಆಗಿದೆ. ಕೆರೆಗೆ ಒಳಹರಿವಾದ ವೃಷಭಾವತಿ ಕಣಿವೆಯ ಕಾಲುವೆ ಸಮಿತಿ ಟ್ರಸ್ಟ್‌ ಕಟ್ಟಡ ಹಾಗೂ ನಿರ್ಮಾಣವಾಗುತ್ತಿರುವ ಶಾಲೆಯ ಹೊರಭಾಗದಲ್ಲಿ ಹಾದುಹೋಗುವಂತೆ ಮಾಡಲಾಗಿದೆ. 

ಅಭಿವೃದ್ದಿಗೊಂಡಿರುವ ಶ್ರೀಗಂಧ ಕಾವಲು ಕೆರೆಗೆ ಪಕ್ಕದಲ್ಲಿರುವ ಜಮನ್‌ ಲಾಲ್‌ ಬಜಾಜ್‌ ಸೇವಾ ಟ್ರಸ್ಟ್‌ಗೆ ಸೇರಿದ ಜಮೀನಿನಿಂದ ನೀರು ಹರಿದುಬರಬೇಕು.  ಆದರೆ, ಅಲ್ಲಿ ಕಾಲುವೆ ಇಲ್ಲ. ಅವರು ಪೂರ್ಣಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿದರೆ ಅಲ್ಪ ನೀರೂ ಬರುವುದಿಲ್ಲ. ಅದನ್ನೇ ಒಳಹರಿವು ಎಂದು  ‘ಶುಭ್ರ ಬೆಂಗಳೂರು’ ಯೋಜನೆಯಡಿ ಎಸ್‌ಡಬ್ಲುಎಂ ಕೆರೆಯನ್ನು ಅಭಿವೃದ್ಧಿಪಡಿಸಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಕೇಳಿದರೆ, ‘ನಾಲ್ಕು ಬೋರ್‌ವೆಲ್‌ಗಳಿವೆ, ಅವುಗಳಿಂದಲೇ ಕೆರೆ ತುಂಬಿಸುತ್ತೇವೆ’ ಎನ್ನುತ್ತಾರೆ.

ಹೊಸಕೆರೆಹಳ್ಳಿ ಕೆರೆಯಲ್ಲಿ ರಸ್ತೆ ನಿರ್ಮಿಸಿದ ಎಂಜಿನಿಯರ್‌ಗಳೇ ಎಸ್‌ಡಬ್ಲುಎಂ ಹಾಗೂ ಕೆರೆಗಳ ವಿಭಾಗದ ಎಂಜಿನಿಯರ್‌ ಹುದ್ದೆಗಳನ್ನು ಹೊಂದಿದ್ದರು. ಅವರೇ ಈ ಕೆರೆಯ ಅಭಿವೃದ್ಧಿ ಯೋಜನೆ ತಯಾರಿಸಿದ್ದಾರೆ. ಆದರೆ ಅವರೆಲ್ಲ ಇದೀಗ ಅಮಾನತಿನಲ್ಲಿದ್ದಾರೆ. ಆದರೆ, ಆ ಯೋಜನೆಗಳಿಗೆ ಅನುಮೋದನೆ ನೀಡಿರುವ ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಶ್ರೀಗಂಧ ಕಾವಲು ಕೆರೆ ಪರಿಸ್ಥಿತಿ ಹೀಗಿದೆಯಲ್ಲ ಎಂಬ ಪ್ರಶ್ನೆಗೆ, ‘ನಾವು ಇರಲಿಲ್ಲ, ಅವರು ಇದ್ದರು. ಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂಬ ಸಬೂಬು ಹೇಳುತ್ತಿದ್ದಾರೆ. ವಿಶೇಷ ಆಯುಕ್ತರ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹ.

ಶ್ರೀಗಂಧ ಕಾವಲು ಕೆರೆಗೆ ಒಳಹರಿವು ಎಂದು ತೋರಿರುವ ಖಾಸಗಿ ಜಮೀನಿನಲ್ಲಿರುವ ಹಳ್ಳ
ಶ್ರೀಗಂಧ ಕಾವಲು ಕೆರೆಗೆ ಒಳಹರಿವು ಎಂದು ತೋರಿರುವ ಖಾಸಗಿ ಜಮೀನಿನಲ್ಲಿರುವ ಹಳ್ಳ

‘ಹೈಟೆಕ್‌ ಪಾರ್ಕ್‌’ ಆದ ಕೆರೆ

ಶ್ರೀಗಂಧದ ಕಾವಲು ಕೆರೆ ‘ಇಲ್ಲ’ ಎಂದೆನಿಸಿದ್ದರು. ಕೆರೆಯೇ ಅಲ್ಲ ಮೈದಾನ ಎಂದು ದಾಖಲಿಸಲು ಪ್ರಯತ್ನಿಸಿದ್ದರು. ಸ್ಥಳೀಯರೆಲ್ಲ ಸೇರಿಕೊಂಡು ಹೋರಾಟ ಮಾಡಿ ಕೆರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಆದರೆ ಕೆರೆಯ ಸಂಪೂರ್ಣ ವಿಸ್ತೀರ್ಣ ಅಲ್ಲಿಲ್ಲ. ಒತ್ತುವರಿ ತೆರವು ಮಾಡಿಲ್ಲ. ನೀರನ್ನು ಹಿಡಿದಿಡುವ ಸಾಮರ್ಥ್ಯ ಕಡಿಮೆಯಾಗಿದೆ. ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ‘ಹೈಟೆಕ್‌ ಪಾರ್ಕ್‌’ನಂತೆ ಮಾಡಲಾಗಿದ್ದು ಕೆರೆಯ ಮೂಲ ಅಸ್ತಿತ್ವ ಕಳೆದುಕೊಂಡಿದೆ. ಒಳಹರಿವನ್ನೇ ಹೊಂದಿರದೆ ಕೆರೆ ಉಳಿಯಲು ಹೇಗೆ ಸಾಧ್ಯ ಎಂದು ಸ್ಥಳೀಯ ನಿವಾಸಿ ಶೋಭಾ ಭಟ್‌ ಪ್ರಶ್ನಿಸಿದರು.

ಹೊಣೆಗಾರಿಕೆ ಯಾರದ್ದು?

ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಶ್ರೀಗಂಧದ ಕಾವಲು ಕೆರೆ ಅಭಿವೃದ್ಧಿ ಯೋಜನೆ ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ (ಎಸ್‌ಡಬ್ಲುಎಂ) ಯಾಕೆ ಹೋಯಿತು ಎಂಬುದರ ಬಗ್ಗೆ ಎಂಜಿನಿಯರ್‌ಗಳಲ್ಲೇ ಗೊಂದಲವಿದೆ. ‘ಶುಭ್ರ ಬೆಂಗಳೂರು’ ಯೋಜನೆಯಲ್ಲಿ ಎಸ್‌ಡಬ್ಲುಎಂ ಕೆರೆ ಅಭಿವೃದ್ಧಿ ಕೈಗೊಂಡಿದೆ. ನಂತರ ಸಮಸ್ಯೆಯಾಗಿ ಕೆರೆಗಳ ವಿಭಾಗಕ್ಕೆ ಹೋಗಿ ಮತ್ತೆ ಎಸ್‌ಡಬ್ಲುಎಂಗೇ ಬಂದಿದೆ. ‘ಹಿಂದೆ ಇದ್ದ ಅಧಿಕಾರಿಗಳು ಮಾಡಿದ್ದಾರೆ. ನಾವು ಈಗ ಬಂದಿದ್ದೇವೆ ಪರಿಶೀಲಿಸಬೇಕು’ ಎಂಬುದು ಈಗಿರುವ ಅಧಿಕಾರಿಗಳ ಮಾತು. ಹೊಣೆಗಾರಿಕೆಯನ್ನು ಒಬ್ಬರು ಮತ್ತೊಬ್ಬರ ಮೇಲೆ ಹಾಕುತ್ತಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ಮಾತ್ರ ಇಲ್ಲಿ ಅನಗತ್ಯವಾಗಿ ವೆಚ್ಚವಾಗಿರುವುದಕ್ಕೆ ಸ್ಥಳದ ಪರಿಸ್ಥಿತಿಯೇ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT