ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ಜೆ ಮೀಸಲಾತಿಯಿಂದ 24 ಜಿಲ್ಲೆಗಳಿಗೆ ಅನ್ಯಾಯ

ಹೋರಾಟ ನಡೆಸಲು ಹಸಿರು ಪ್ರತಿಷ್ಠಾನದ ಸಮಾಲೋಚನಾ ಸಭೆಯಲ್ಲಿ ನಿರ್ಧಾರ
Published 13 ಮೇ 2024, 18:24 IST
Last Updated 13 ಮೇ 2024, 18:24 IST
ಅಕ್ಷರ ಗಾತ್ರ

ಬೆಂಗಳೂರು: 371–ಜೆ ಮೀಸಲಾತಿಯನ್ನು ರಾಜ್ಯದ ಎಲ್ಲ ಭಾಗಗಳ ಹುದ್ದೆಗಳ ಭರ್ತಿಗೆ ಅನ್ವಯಿಸುವುದರಿಂದ ಕರ್ನಾಟಕದ ಇತರ ಪ್ರದೇಶಗಳಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.

ಹಸಿರು ಪ್ರತಿಷ್ಠಾನ ಈಚೆಗೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

371–ಜೆ ತಿದ್ದುಪಡಿಯ ಸೌಲಭ್ಯಕ್ಕೆ ಸಹಮತ ನೀಡಿದ ನೌಕರರನ್ನು ಮಾತ್ರ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಸಹಮತ ನೀಡದ ಆ ಭಾಗದ ನೌಕರರನ್ನು ಕರ್ನಾಟಕದ ಕೋಟಾಕ್ಕೆ ಸೇರಿಸಲಾಗಿದೆ. ಇದರಿಂದ ಉಳಿದ 24 ಜಿಲ್ಲೆಗಳಿಗೆ ಅನ್ಯಾಯವಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಿಧಾನದ 371–ಜೆ ವಿಧಿಯಲ್ಲಿ ರಾಜ್ಯಮಟ್ಟದ ಹುದ್ದೆಗಳಿಗೆ ಮೀಸಲಾತಿ ರೂಪಿಸಲು ಅವಕಾಶವಿಲ್ಲದೇ ಇದ್ದರೂ ಕೋಟಾ ನಿಗದಿಪಡಿಸಲಾಗಿದೆ. ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಬಾರದ ಬಿಡಿಎ, ಬಿಬಿಎಂಪಿಯಂಥ ಕಚೇರಿಗಳಲ್ಲಿಯೂ ಕಲ್ಯಾಣ ಕರ್ನಾಟಕ ಕೋಟಾ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಖಾಲಿ ಹುದ್ದೆಗಳನ್ನು ತುಂಬಲು ಆದ್ಯತೆ ನೀಡಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಎಲ್ಲ ಕಡೆ ಕಲ್ಯಾಣ ಕರ್ನಾಟಕದ ನೌಕರರೇ ಹೆಚ್ಚಾಗುತ್ತಿದ್ದಾರೆ ಎಂದು ದೂರಿದರು.

ಬಡ್ತಿ ನೀಡುವಾಗ ಜ್ಯೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ಮಾಡುವ ಬದಲು ಒಂದೇ ಮಾಡುತ್ತಿರುವುದರಿಂದ ಕರ್ನಾಟಕದ ಇತರ ಭಾಗದ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಆ ಬಳಿಕವೂ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ. ಕುಮಾರ್‌, ಪೋಷಕ ಕೆ.ಸಿ.ಶಿವರಾಮ್, ಉಪಾಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್, ಒಕ್ಕಲಿಗರ ಮುಖಂಡರಾದ ಕೆ. ಪ್ರಕಾಶ್‌ ಗೌಡ, ಮಂಜುನಾಥ ರೆಡ್ಡಿ, ಸಿ.ಎ. ದೇವರಾಜ್‌, ಪ್ರೇಮಕುಮಾರ್ ತಮ್ಮಣ್ಣ, ಸಂಶೋಧಕ ತಲಕಾಡು ಚಿಕ್ಕರಂಗೇಗೌಡ, ಕಾರ್ಮಿಕ ಮುಖಂಡ ಎ.ಎಸ್‌. ಗೋವಿಂದೇಗೌಡ, ಗೋವಿಂದರಾಜು ಪಟೇಲ್, ರವೀಶ್ ಗೌಡ, ಮಹೇಶ್ ಎಂ.ಇ.ಎಸ್, ಲಕ್ಷ್ಮಣಗೌಡ, ಗಬ್ಬಾಡಿ ಕಾಡೇಗೌಡ, ನಾಗರತ್ನ, ಯಶೋದಾ,  ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT