ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗಿನ ಮೇಲೆ 500 ಗ್ರಾಂ ತೂಕದ ಗಡ್ಡೆ

ಕಿಮ್ಸ್ ಆಸ್ಪತ್ರೆಯಲ್ಲಿ 48 ವರ್ಷದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Last Updated 22 ಜನವರಿ 2022, 17:05 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರ ಮೂಗಿನ ಮೇಲೆ ಬೆಳೆದಿದ್ದ 500 ಗ್ರಾಂ ತೂಕದ ಗಡ್ಡೆಯನ್ನು (‌ರೈನೋಫಿಮಾ)ಇಲ್ಲಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದಾರೆ.

48 ವರ್ಷದ ಟೈಲರ್‌ ಒಬ್ಬರಿಗೆ 10 ವರ್ಷಗಳ ಹಿಂದೆ ಮೂಗಿನ ಮೇಲೆ ಕಾಣಿಸಿಕೊಂಡಿದ್ದ ಗಡ್ಡೆ, ದೊಡ್ಡದಾಗಿ ಬೆಳೆದಿತ್ತು. ಇದರಿಂದ ಅವರ ಮುಖದ ಸ್ವರೂಪ ಬದಲಾಗಿದ್ದಲ್ಲದೇ, ಉಸಿರಾಟ ಸೇರಿದಂತೆ ದೈನಂದಿನ ಜೀವನ ನಿರ್ವಹಣೆಗೂ ಸಮಸ್ಯೆ ಎದುರಾಗಿತ್ತು. ಮಾನಸಿಕವಾಗಿಯೂ ಕುಗ್ಗಿದ್ದ ಅವರಿಗೆ, ಕಿಮ್ಸ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಜಗನ್ನಾಥ್ ಬಿ. ಅವರ ಮಾರ್ಗದರ್ಶನದಲ್ಲಿ ಡಾ. ಸ್ಮಿತಾ ಎಸ್‌.ಜಿ ಹಾಗೂ ಡಾ. ಸುಹಾಸಿನಿ ಎಚ್. ಅವರುರೈನೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ₹ 2 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆಗೆ ₹ 35 ಸಾವಿರ ವೆಚ್ಚವಾಗಿದೆ. ಇದರಲ್ಲಿ ಔಷಧದ ವೆಚ್ಚವೂ ಸೇರಿದೆ.

‘ವ್ಯಕ್ತಿಯ ಮೂಗಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಾಗ ಅವರು ಪ್ರಾರಂಭಿಕ ದಿನಗಳಲ್ಲಿ ಕಡೆಗಣಿಸಿದ್ದರು. ವರ್ಷಗಳು ಕಳೆದಂತೆ ‌ಇದು ದೊಡ್ಡದಾಗಿ ಬೆಳೆದಿತ್ತು. ಕ್ಯಾನ್ಸರ್ ಅಲ್ಲದ ಈ ಗಡ್ಡೆಯನ್ನು ತೆಗೆಯಲು 45 ನಿಮಿಷ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಒಂದು ವಾರ ಆಸ್ಪತ್ರೆಯಲ್ಲಿ ಆರೈಕೆಯಲ್ಲಿದ್ದರು. ಅವರ ಮೂಗು ಮೊದಲಿನ ಸ್ವರೂಪಕ್ಕೆ ಮರಳಿದೆ. ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಗಡ್ಡೆ ಬೆಳೆಯುವುದಕ್ಕೆ ಕಾರಣವಾಗುವ ಕೋಶಗಳನ್ನು ತೆಗೆದುಹಾಕಿರುವುದರಿಂದ ಈ ಸಮಸ್ಯೆ ಮರುಕಳಿಸುವುದಿಲ್ಲ’ ಎಂದುಡಾ. ಸುಹಾಸಿನಿ ಎಚ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಗಡ್ಡೆಯು ಆಲೂಗಡ್ಡೆಯ ರೀತಿಯಲ್ಲಿ ಬೆಳೆಯುತ್ತದೆ. ಇದಕ್ಕೆ ನಿಖರ ಕಾರಣವಿಲ್ಲ. ಹೆಚ್ಚಾಗಿ ಮೂಗಿನ ಮೇಲೆ ಕಾಣಿಸಿಕೊಳ್ಳುತ್ತದೆ. ಶೇ 2ರಿಂದ ಶೇ 5 ರಷ್ಟು ಮಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶಸ್ತ್ರಚಿಕಿತ್ಸಾ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಈ ಸಮಸ್ಯೆ ಎದುರಿಸುವವರು ಅದನ್ನು ತೆಗೆಸಲು ಹಿಂದೇಟು ಹಾಕುತ್ತಾರೆ. ನಾವು ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT