ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 5.42 ಕೋಟಿ ಮತದಾರರು

Published 16 ಮಾರ್ಚ್ 2024, 15:35 IST
Last Updated 16 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 5.42 ಕೋಟಿ ಮತದಾರರು ಮತ ಚಲಾಯಿಸುವ ಅರ್ಹತೆ ಹೊಂದಿದ್ದು, 2019ರ ಚುನಾವಣೆಗೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ 31.55 ಲಕ್ಷದಷ್ಟು ಹೆಚ್ಚಳವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇಕಡ 6.18ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಪುರುಷ ಮತದಾರರ ಸಂಖ್ಯೆಯಲ್ಲಿ ಶೇ 5.12ರಷ್ಟು, ಮಹಿಳಾ ಮತದಾರರ ಸಂಖ್ಯೆಯಲ್ಲಿ ಶೇ 7.26ರಷ್ಟು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಸಂಖ್ಯೆಯಲ್ಲಿ ಶೇ 1.94ರಷ್ಟು ಏರಿಕೆಯಾಗಿದೆ’ ಎಂದು ವಿವರ ನೀಡಿದರು.

ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ 70.28ರಷ್ಟು ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. 18ರಿಂದ 19 ವರ್ಷ ವಯಸ್ಸಿನ 11.24 ಲಕ್ಷ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

2024ರ ಜನವರಿ 1ರಂದು ಪ್ರಕಟಿಸಿದ್ದ ಅಂತಿಮ ಮತದಾರರ ಪಟ್ಟಿಗೆ ಹೋಲಿಸಿದರೆ ಈಗ 4.22 ಲಕ್ಷ ಮತದಾರರು ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗುವ ದಿನದ ಹತ್ತು ದಿನಗಳ ಮೊದಲಿನವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ತಿದ್ದುಪಡಿ ಮಾಡಿಸಲು ಅವಕಾಶ ಇದೆ ಎಂದರು.

58,834 ಮತಗಟ್ಟೆಗಳು: ಒಟ್ಟು 58,834 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಈ ಪೈಕಿ 21,595 ಮತಗಟ್ಟೆಗಳು ನಗರ ಪ್ರದೇಶಗಳಲ್ಲಿ, 37,239 ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರಲಿವೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ (2,911) ಮತಗಟ್ಟೆಗಳಿರಲಿವೆ, ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ (1,842) ಮತಗಟ್ಟೆಗಳಿರಲಿವೆ ಎಂದು ಮೀನಾ ತಿಳಿಸಿದರು.

2.79 ಲಕ್ಷ ಮತಗಟ್ಟೆ ಸಿಬ್ಬಂದಿಯ ಅಗತ್ಯವಿದೆ. 3.51 ಲಕ್ಷ ಮತಗಟ್ಟೆ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಲಭ್ಯವಿದ್ದಾರೆ. 28 ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿದಂತೆ 1,792 ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಳಿಸಲಾಗಿದೆ ಎಂದರು.

ನೀತಿಸಂಹಿತೆ ಉಲ್ಲಂಘನೆ ತಡೆ ಮತ್ತು ಚುನಾವಣಾ ಅಕ್ರಮ ತಡೆಗೆ 2,357 ಕ್ಷಿಪ್ರ ಪಡೆಗಳು, 2,669 ಸ್ಥಿರ ಕಣ್ಗಾವಲು ತಂಡಗಳು, 647 ವಿಡಿಯೊ ಕಣ್ಗಾವಲು ತಂಡಗಳು, 258 ಲೆಕ್ಕಪರಿಶೋಧಕ ತಂಡಗಳು ಮತ್ತು 257 ವಿಡಿಯೊ ವೀಕ್ಷಣೆ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಮನೆಯಿಂದ ಮತದಾನಕ್ಕೆ ಅವಕಾಶ: 85 ವರ್ಷಕ್ಕಿಂತ ಹೆಚ್ಚು ವಯಸ್ಸಾದ 5.70 ಲಕ್ಷ ಮತ್ತು 6.12 ಲಕ್ಷ ಅಂಗವಿಕಲ ಮತದಾರರಿದ್ದಾರೆ. ಇವರೆಲ್ಲರಿಗೂ ಮನೆಯಿಂದ ಮತ ಚಲಾಯಿಸಲು ಅವಕಾಶವಿದೆ. ಮನೆಯಿಂದ ಮತದಾನಕ್ಕೆ ಅವಕಾಶ ಕೋರಿ ಮನವಿ ಸಲ್ಲಿಸುವ ಪ್ರಕ್ರಿಯೆ ಭಾನುವಾರದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.

11,000 ರಾಜ್ಯದಲ್ಲಿ ಶತಾಯುಷಿ ಮತದಾರರು

31,74,098 ಅತಿಹೆಚ್ಚು ಮತದಾರರಿರುವ ಕ್ಷೇತ್ರ– ಬೆಂಗಳೂರು ಉತ್ತರ

15,72,958 ಅತಿ ಕಡಿಮೆ ಮತದಾರರಿರುವ ಕ್ಷೇತ್ರ– ಉಡುಪಿ– ಚಿಕ್ಕಮಗಳೂರು

ವಿದ್ಯುನ್ಮಾನ ಮತಯಂತ್ರಗಳ ವಿವರ

1,10,946 ಬ್ಯಾಲೆಟ್ ಯೂನಿಟ್‌

77,667 ಕಂಟ್ರೋಲ್‌ ಯೂನಿಟ್‌

82,575 ವಿವಿಪ್ಯಾಟ್‌ ಯಂತ್ರಗಳು

₹ 537 ಕೋಟಿ ಮೌಲ್ಯದ ನಗದು ವಸ್ತುಗಳ ವಶ

ಚುನಾವಣಾ ಅಕ್ರಮ ತಡೆಗೆ ಪೊಲೀಸ್‌ ಆದಾಯ ತೆರಿಗೆ ಅಬಕಾರಿ ವಾಣಿಜ್ಯ ತೆರಿಗೆ ಇಲಾಖೆಗಳು ಮತ್ತು ಮಾದಕವಸ್ತು ನಿಯಂತ್ರಣ ಬ್ಯುರೊಗಳು 2023ರ ಆಗಸ್ಟ್‌ನಿಂದಲೇ ನಿಗಾ ವಹಿಸಿದ್ದವು. ಈವರೆಗೆ ಒಟ್ಟು ₹ 537.51 ಕೋಟಿ ಮೌಲ್ಯದ ನಗದು ಚಿನ್ನಾಭರಣ ಮದ್ಯ ಮಾದಕವಸ್ತು ಮತ್ತು ಉಚಿತ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮನೋಜ್‌ ಕುಮಾರ್‌ ಮೀನಾ ಮಾಹಿತಿ ನೀಡಿದರು.

₹ 151.6 ಕೋಟಿ ನಗದು ₹ 42.14 ಕೋಟಿ ಮೌಲ್ಯದ 8.09 ಲಕ್ಷ ಲೀಟರ್‌ ಮದ್ಯ ₹ 126.47 ಕೋಟಿ ಮೌಲ್ಯದ 57767 ಕೆ.ಜಿ. ಮಾದಕವಸ್ತು ₹ 71.43 ಕೋಟಿ ಮೌಲ್ಯದ 482.67 ಕೆ.ಜಿ. ಚಿನ್ನ ₹ 93 ಲಕ್ಷ ಮೌಲ್ಯದ 660 ಕೆ.ಜಿ. ಬೆಳ್ಳಿ ₹ 144.90 ಕೋಟಿ ಮೌಲ್ಯದ ಉಚಿತ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 4710 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದರು.

ಚುನಾವಣಾ ಅಕ್ರಮ ತಡೆಗೆ ಪೊಲೀಸ್‌ ಇಲಾಖೆಯಿಂದ 172 ಅಬಕಾರಿ ಇಲಾಖೆಯಿಂದ 40 ತನಿಖಾ ಠಾಣೆಗಳನ್ನು ತೆರೆಯಲಾಗಿದೆ. ಅಂತರರಾಜ್ಯ ಗಡಿಗಳಲ್ಲಿ 29 ತನಿಖಾ ಠಾಣೆಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಮತದಾನ ಹೆಚ್ಚಳಕ್ಕೆ ಉತ್ತೇಜನ

2019ರ ಲೋಕಸಭಾ ಚುನಾವಣೆಯಲ್ಲಿ ಶೇಕಡ 65ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಉತ್ತೇಜಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮನೋಜ್‌ ಕುಮಾರ್‌ ಮೀನಾ ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಬಿಎಂಪಿ ಪ್ರದೇಶ ಮತ್ತು ಕಲ್ಯಾಣ ಕರ್ನಾಟಕದ ಕೆಲವೆಡೆ ಕಡಿಮೆ ಮತದಾನವಾಗಿತ್ತು. ಶೇಕಡ 30ಕ್ಕಿಂತ ಕಡಿಮೆ ಮತದಾನವಾಗಿದ್ದ 5000 ಮತಗಟ್ಟೆಗಳನ್ನು ಗುರುತಿಸಿದ್ದು ಅಲ್ಲಿ ಮತದಾನಕ್ಕೆ ಪ್ರೇರೇಪಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT