‘ಜಾಗತಿಕ ಪ್ರವೃತ್ತಿಗೆ ತಕ್ಕಂತೆ ರಫ್ತು ಮಾದರಿಗಳು ಬದಲಾಗಬೇಕು’

7

‘ಜಾಗತಿಕ ಪ್ರವೃತ್ತಿಗೆ ತಕ್ಕಂತೆ ರಫ್ತು ಮಾದರಿಗಳು ಬದಲಾಗಬೇಕು’

Published:
Updated:
‘ಜಾಗತಿಕ ಪ್ರವೃತ್ತಿಗೆ ತಕ್ಕಂತೆ ರಫ್ತು ಮಾದರಿಗಳು ಬದಲಾಗಬೇಕು’

ಬೆಂಗಳೂರು: ‘ಭಾರತದಿಂದ ಬೇರೆ ದೇಶಗಳಿಗೆ ರಫ್ತು ಮಾಡುವ ಉತ್ಪನ್ನಗಳ ಮಾದರಿಗಳನ್ನು ಜಾಗತಿಕ ಪ್ರವೃತ್ತಿಗೆ ತಕ್ಕಂತೆ ಬದಲಾಯಿಸಬೇಕು’ ಎಂದು ದೆಹಲಿಯ ಪಿಎಚ್‌ಡಿ ಚೇಂಬರ್‌ ಆಫ್‌ ಕಾಮರ್ಸ್‌ ಎಂಡ್ ಇಂಡಸ್ಟ್ರೀಸ್‌ ಅಧ್ಯಕ್ಷ ಅನಿಲ್‌ ಖೇತಾನ್‌ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿದ್ದ ‘ಎಕ್ಸ್‌ಪೋರ್ಟ್‌ ಎಕ್ಸಲೆನ್ಸ್‌ ಅವಾರ್ಡ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಸರಕುಗಳನ್ನು ತಯಾರಿಸಬೇಕು. ವೆಚ್ಚ ಕೂಡ ಕಡಿಮೆ ಇರಬೇಕು. ನಮ್ಮಲ್ಲಿರುವ ವಿದ್ಯುತ್‌ ಸಮಸ್ಯೆಯೂ ರಫ್ತಿನ ಪ್ರಮಾಣ ಕಡಿಮೆಯಾಗಲು ಕಾರಣ’ ಎಂದು ಅವರು ಹೇಳಿದರು.

ಮುಂಬೈ ಎಕ್ಸಿಂ ಬ್ಯಾಂಕ್‌ ನಿರ್ವಹಣಾ ನಿರ್ದೇಶಕ ಡೇವಿಡ್‌ ರಸ್ಕಿನ್‌; ‘ಬೇರೆ ದೇಶದ ಆಮದು ತಜ್ಞರು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಅವರಿಗೆ ನಮ್ಮ ಸರಕುಗಳ ಗುಣಮಟ್ಟ ಮುಖ್ಯ. ಜಾಗತಿಕ ಆವಿಷ್ಕಾರದ ಸೂಚ್ಯಂಕದಲ್ಲಿ ಭಾರತ 60ನೇ ಸ್ಥಾನದಲ್ಲಿದೆ. ಉತ್ತಮ ಸೇವೆಗಳನ್ನು ನೀಡುವುದರಲ್ಲಿ ಚೀನಾಕ್ಕಿಂತ ಶೇ 15ರಷ್ಟು ಮಾತ್ರ ಹಿಂದಿದೆ. ಇಲ್ಲಿನ ಪ್ರವಾಸೋದ್ಯಮ, ಆಸ್ಪತ್ರೆ, ಬಾಲಿವುಡ್‌ ಸಂಗೀತದ ಆಡಿಯೊಗಳನ್ನು ವಿದೇಶಿಯರು ಹೆಚ್ಚು ಇಷ್ಟಪಡುತ್ತಾರೆ’ ಎಂದು ಹೇಳಿದರು.

ಸಾಧಕರಿಗೆ ಪ್ರಶಸ್ತಿ: ವಿವಿಧ ವಿಭಾಗಗಳ 43 ಸಾಧಕರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಸೇವೆ ವಿಭಾಗದಲ್ಲಿ ಸಿಂಧು ಕಾರ್ಗೊ ಸರ್ವಿಸಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಾಲರಾಜು ಅವರಿಗೆ ಹಾಗೂ ಅತ್ಯುತ್ತಮ ಸಾಫ್ಟ್‌ವೇರ್‌ ರಫ್ತು ವಿಭಾಗದಲ್ಲಿ ದಿಯಾ ಸಿಸ್ಟಮ್ಸ್‌ನ ಕೇಶವಮೂರ್ತಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಸ್ಟಾರ್‌ ಎಕ್ಸ್‌ಪೋರ್ಟರ್‌ ಪ್ರಶಸ್ತಿಯನ್ನು ಹಿಮಾಂತ್‌ಸಿಂಗ್‌ಕಾ ಸೈಯದ್‌ ಲಿಮಿಟೆಡ್‌ನ ಜಾಯ್‌ ಸುನಿಲ್‌ ಅವರಿಗೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry