ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಇಲ್ಲದೇ ಆರು ಖಾಸಗಿ ವಿ.ವಿ.ಮಸೂದೆ ಅಂಗೀಕಾರ

Last Updated 21 ಫೆಬ್ರುವರಿ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ಆರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ ಮಸೂದೆಗಳಿಗೆ ಚರ್ಚೆಯನ್ನೇ ನಡೆಸದೇ ಒಪ್ಪಿಗೆ ನೀಡಲಾಯಿತು.

ಜಿ.ಎಂ.ವಿಶ್ವವಿದ್ಯಾಲಯ, ಕಿಷ್ಕಿಂದ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ಸಪ್ತಗಿರಿ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ಮತ್ತು ಟಿ.ಜಾನ್‌ ವಿಶ್ವವಿದ್ಯಾಲಯಗಳ ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿತು.

ಈ ಮಸೂದೆಗಳಿಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತರಾತುರಿಯಲ್ಲಿ ಈ ಮಸೂದೆ ಮಂಡಿಸಲಾಗಿದೆ. ಇದರಲ್ಲಿ ಸಾಕಷ್ಟು ಲೋಪಗಳಿವೆ. ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದರಿಂದ ಮಸೂದೆಗಳನ್ನು ಹಿಂದಕ್ಕೆ ಪಡೆಯಲಾಗಿತ್ತು.

ಕಳೆದ ವಾರ ಈ ಮಸೂದೆಗಳನ್ನು ಪರ್ಯಾಲೋಚನೆಗೆ ಮಂಡಿಸಿದಾಗ ಸಾಕಷ್ಟು ಸದಸ್ಯರಿಲ್ಲದ ಕಾರಣ ಮುಂದೂಡಲಾಗಿತ್ತು. ಆಗ ಸದನದಲ್ಲಿ ಕೋರಂ ಕೂಡ ಇರಲಿಲ್ಲ. ಸಚಿವರು ಸೇರಿ 13 ಸದಸ್ಯರು ಮಾತ್ರ ಸದನದಲ್ಲಿ ಹಾಜರಿದ್ದರು. ಇದಕ್ಕೆ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌, ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಜೆಡಿಎಸ್‌ನ ಸಾ.ರಾ.ಮಹೇಶ್ ಮತ್ತು ವೆಂಕಟರಾವ್‌ ನಾಡಗೌಡ ಅವರು ಬೇರೊಂದು ದಿನ ಕೈಗೆತ್ತಿಕೊ‌ಳ್ಳುವಂತೆ ಸೂಚಿಸಿದರು.

ಆದರೆ, ಮಂಗಳವಾರ ಸಂಜೆ ಪರ್ಯಾಲೋಚನೆ ಕೈಗೆತ್ತಿಕೊಂಡಾಗ ಯಾವುದೇ ಸದಸ್ಯರು ಚರ್ಚೆಗೆ ಮುಂದಾಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಆರೂ ಮಸೂದೆಗಳಿಗೆ ಅಂಗೀಕಾರ ದೊರಕಿತು. ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಮಸೂದೆಗೆ ಒಪ್ಪಿಗೆ ನೀಡಿದ್ದಕ್ಕಾಗಿ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರು ಸರ್ಕಾರವನ್ನು ಬಹಿರಂಗವಾಗಿ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT