ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿದ್ದುಪಡಿ ಕಾಯ್ದೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ

72 ಗಂಟೆಗಳ ‘ಶ್ರಮಿಕ ವರ್ಗದ ಮಹಾಧರಣಿ’ ಅಂತ್ಯ
Published 28 ನವೆಂಬರ್ 2023, 16:06 IST
Last Updated 28 ನವೆಂಬರ್ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ 72 ಗಂಟೆಗಳ ಕಾಲ ನಡೆದ ದುಡಿಯುವ ವರ್ಗದ ಮಹಾಧರಣಿ ಮಂಗಳವಾರ ಸಂಜೆ ಅಂತ್ಯವಾಯಿತು.

ಮಹಾಧರಣಿಯ ಅಂತಿಮ ದಿನ ಹಲವು ನಿರ್ಣಯ ಕೈಗೊಂಡ ಹೋರಾಟಗಾರರು, ಕರಾಳ ಕಾಯ್ದೆಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ರೈತರ ಅನ್ನಕ್ಕೆ ವಿಷ ಹಾಕುವ ಕೆಲಸ ಮಾಡುತ್ತಿದೆ. ಕೇಂದ್ರ ಜಾರಿಗೆ ತರಲು ಬಯಸುತ್ತಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂತಿದ್ದುಪಡಿ ಕಾಯ್ದೆ ಎಲ್ಲವೂ ಕಾರ್ಪೊರೇಟ್ ಕುಳಗಳ ದಾಹ ತಣಿಸುವ ಸಂಚುಗಳಾಗಿದ್ದು, ಎಲ್ಲ ಕಾಯ್ದೆಗಳನ್ನೂ ವಾಪಸ್‌ ಪಡೆಯುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಮಹಾಧರಣಿಯಲ್ಲಿ ಕೈಗೊಳ್ಳಲಾಯಿತು.

ಜನರ ಆದಾಯ ಹೆಚ್ಚಿಸುವುದು, ವೆಚ್ಚಗಳಲ್ಲಿ ಕಡಿತ, ಜೀವನದ ಸುರಕ್ಷತೆ, ಆಳ್ವಿಕೆಯಲ್ಲಿ ಬದಲಾವಣೆ ಮತ್ತು ಪ್ರತಿಭಟಿಸುವ ಸ್ವಾತಂತ್ರ್ಯ ಕಲ್ಪಿಸುವಂತೆ ಆಗ್ರಹಿಸಲಾಯಿತು. 

ಬಗರ್‌ಹುಕುಂ ಸಾಗುವಳಿದಾರರು, ಭೂಸ್ವಾಧೀನಕ್ಕೆ ಒಳಗಾದವರು, ವಸತಿ ರಹಿತರು, ನಷ್ಟಕ್ಕೆ ಒಳಗಾದ ರೈತರಿಗೆ ಸಹಾಯ ನೀಡಬೇಕು ಎಂದು ಒತ್ತಾಯಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಗೆ ಬರೆದಿರುವ ಪತ್ರದಲ್ಲಿ ಹೋರಾಟದ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಡಿ.19ರಂದು ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಭೆ ಮುಂದೂಡದೇ ಅಂದೇ ಸಭೆ ನಡೆಸಬೇಕು. 19 ಹಕ್ಕೊತ್ತಾಯಗಳ ಕುರಿತು ಚರ್ಚಿಸಿ ಶ್ರಮಿಕ ವರ್ಗಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಕೆ.ಮಹಾಂತೇಶ್ ಮಾತನಾಡಿ, ‘ಮೂರು ವರ್ಷಗಳ ಹಿಂದೆ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಕೇಂದ್ರ ಸರ್ಕಾರ ಹೇಳಿ, ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಈಗ ಮಾತು ತಪ್ಪಿದೆ‘ ಎಂದು ಆಕ್ರೋಶ ಹೊರಹಾಕಿದರು.

ಐಎನ್‌ಟಿಯುಸಿ ಮುಖಂಡ ಶಾಮಣ್ಣ ರೆಡ್ಡಿ ಮಾತನಾಡಿ, ವಲಸೆ ಕಾರ್ಮಿಕರಿಗೆ ವಸತಿ ನೀಡುವುದಕ್ಕೆ ನಿರಾಕರಿಸಲಾಗುತ್ತಿದೆ. ವಸತಿ ರಹಿತರಿಗೆ ಮನೆ ಹಾಗೂ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ವಿಜಯ ಭಾಸ್ಕರ್, ಎಎಪಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಸಿದ್ದನಗೌಡ ಪಾಟೀಲ್ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT