ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಮೊದಲ ಬಾರಿಗೆ ಟ್ರಾವೆಲೇಟರ್‌

ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‌ನಲ್ಲಿ ನಿರ್ಮಾಣಗೊಳ್ಳಲಿದೆ 250 ಮೀಟರ್‌ ದೂರದ ಸ್ವಯಂಚಾಲಿತ ಸ್ಕೈವಾಕ್‌
Published 20 ಮಾರ್ಚ್ 2024, 23:10 IST
Last Updated 20 ಮಾರ್ಚ್ 2024, 23:10 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಇದೇ ಮೊದಲ ಬಾರಿಗೆ ಮೆಟ್ರೊ ನಿಲ್ದಾಣಗಳ ನಡುವೆ ಎತ್ತರಿಸಿದ ಸ್ವಯಂಚಾಲಿತ ಪಾದಚಾರಿ ಮಾರ್ಗವನ್ನು(ಸ್ಕೈವಾಕ್‌ ಟ್ರಾವೆಲೇಟರ್‌) ನಿರ್ಮಿಸಲಾಗುತ್ತಿದೆ.

ಕೇಂದ್ರ ರೇಷ್ಮೆ ಮಂಡಳಿ (ಸಿಎಸ್‌ಬಿ) ಜಂಕ್ಷನ್‌ನಲ್ಲಿರುವ ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ನಿಲ್ದಾಣ ಮತ್ತು ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗದ ನಿಲ್ದಾಣಗಳ ನಡುವೆ ಟ್ರಾವೆಲೇಟರ್‌ ನಿರ್ಮಿಸಲಾಗುತ್ತಿದೆ. ಈ ಎರಡು ನಿಲ್ದಾಣಗಳ ನಡುವೆ 250 ಮೀಟರ್‌ ಅಂತರ ಇದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ನಡೆದುಕೊಂಡು ಹೋಗಲು ತುಸು ದೂರವಾಗುವುದರಿಂದ ಸ್ಕೈವಾಕ್‌ ಟ್ರಾವೆಲೇಟರ್‌ ಅಳವಡಿಸುವ ಯೋಜನೆಯನ್ನು ಬಿಎಂಆರ್‌ಸಿಎಲ್‌ ರೂಪಿಸಿದೆ.

ಆರ್‌.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಮೆಟ್ರೊ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ರೈಲು ಸಂಚಾರದ ಪರೀಕ್ಷೆಗಳೂ ನಡೆಯುತ್ತಿವೆ. ಈ ವರ್ಷದ ಅಂತ್ಯದ ಒಳಗೆ ರೈಲು ಸಂಚಾರ ಆರಂಭಗೊಳ್ಳಲಿದೆ. ಕಸ್ತೂರಿನಗರದ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಕಾಮಗಾರಿಗಳು ನಡೆಯುತ್ತಿದ್ದು, ಎರಡು ವರ್ಷಗಳ ಒಳಗೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.

ಎರಡೂ ಮಾರ್ಗಗಳಲ್ಲಿ ಸಂಚಾರ ಶುರುವಾದಾಗ ಟ್ರಾವೆಲೇಟರ್‌ ಕೂಡ ಆರಂಭಗೊಳ್ಳಲಿದೆ. ಎರಡೂ ನಿಲ್ದಾಣಗಳ ನಡುವಿನ ಪ್ರಮುಖ ಕೊಂಡಿಯಾಗಿ ಸ್ಕೈವಾಕ್‌ ಟ್ರಾವೆಲೇಟರ್‌ ಕೆಲಸ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ಏನಿದು ಟ್ರಾವೆಲೇಟರ್‌?:

ಮಾಲ್‌ಗಳಲ್ಲಿ, ರೈಲು, ಮೆಟ್ರೊ ನಿಲ್ದಾಣಗಳಲ್ಲಿ ಹತ್ತಿ ಇಳಿಯಲು ಎಸ್ಕಲೇಟರ್‌ಗಳಿರುತ್ತವೆ. ಇದೇ ಮಾದರಿಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸ್ಕೈವಾಕ್‌ ಟ್ರಾವೆಲೇಟರ್‌ ನಿರ್ಮಿಸಲಾಗುತ್ತದೆ. ಅದರ ಮೇಲೆ ಪ್ರಯಾಣಿಕರು ನಿಂತುಕೊಂಡರೆ ಸ್ವಯಂ ಚಾಲಿತವಾಗಿ ಮುಂದಕ್ಕೆ ಚಲಿಸುತ್ತದೆ. ವಿಮಾನ ನಿಲ್ದಾಣಗಳಲ್ಲಿ ಅಂತರ ಹೆಚ್ಚಿರುವ ಟರ್ಮಿನಲ್‌ಗಳ ನಡುವೆ ಸ್ಕೈವಾಕ್‌ ಟ್ರಾವೆಲೇಟರ್‌ ಅಳವಡಿಸಿರುತ್ತಾರೆ. ಅದೇ ವ್ಯವಸ್ಥೆಯನ್ನು ಮೆಟ್ರೊ ನಿಲ್ದಾಣದಲ್ಲೂ ಅಳವಡಿಸಲಾಗುತ್ತಿದೆ ಎಂದು ‘ನಮ್ಮ ಮೆಟ್ರೊ’ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚವಾಣ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಟ್ರಾವೆಲೇಟರ್‌ ಪ್ರಸ್ತಾವ

ಮಹಾತ್ಮ ಗಾಂಧಿ ರಸ್ತೆಯಲ್ಲಿ (ಎಂ.ಜಿ. ರೋಡ್‌) ಮೆಟ್ರೊ ನೇರಳೆ ಮಾರ್ಗದ ನಿಲ್ದಾಣವಿದೆ. ಇಲ್ಲೇ ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವು ಹಾದು ಹೋಗುತ್ತಿದ್ದು ಪಕ್ಕದಲ್ಲಿಯೇ ಗುಲಾಬಿ ಮಾರ್ಗದ ನಿಲ್ದಾಣವು ನಿರ್ಮಾಣಗೊಳ್ಳುತ್ತಿದೆ. ನೇರಳೆ ಮತ್ತು ಗುಲಾಬಿ ಮಾರ್ಗಗಳ ನಿಲ್ದಾಣಗಳ ನಡುವೆ ಟ್ರಾವೆಲೇಟರ್‌ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವ ಇದೆ. ಅಲ್ಲಿ ಎರಡು ನಿಲ್ದಾಣಗಳ ನಡುವೆ ಭೂಗತ ಪಾದಚಾರಿ ಮಾರ್ಗ ಇರಲಿದೆ. ಇದೇ ಗುಲಾಬಿ ಮಾರ್ಗದಲ್ಲಿ ನ್ಯೂ ಬಂಬೂಬಜಾರ್‌ ಮೆಟ್ರೊ ನಿಲ್ದಾಣದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗೆ 1 ಕಿ.ಮೀ. ಅಂತರವಿದೆ. ಇಲ್ಲಿ ಟ್ರಾವೆಲೇಟರ್‌ ನಿರ್ಮಿಸಬೇಕು ಎಂಬ ಪ್ರಸ್ತಾವವೂ ಇದೆ. ಜಾಗದ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಟ್ರಾವೆಲೇಟರ್‌ ಸೌಲಭ್ಯ ಒದಗಿಸುವುದು ಕಷ್ಟವಾಗಬಹುದು. ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಯೋಜನೆ ಇದೆ. ಆದರೂ ಟ್ರಾವೆಲೇಟರ್‌ ಅಗತ್ಯದ ಕುರಿತು ಬಿಎಂಆರ್‌ಸಿಎಲ್‌ ಅಧ್ಯಯನ ನಡೆಸಲಿದೆ ಎಂದು ತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ವಿಮಾನ ನಿಲ್ದಾಣದಲ್ಲಿ ಇರುವ ಟ್ರಾವೆಲೇಟರ್
ದೆಹಲಿಯ ವಿಮಾನ ನಿಲ್ದಾಣದಲ್ಲಿ ಇರುವ ಟ್ರಾವೆಲೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT