ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇ ಸರ್ಕಾರದ ಚಾಳಿ ಮುಂದುವರಿಸಿದ ಕಾಂಗ್ರೆಸ್‌: ಎಎಪಿ ಆರೋಪ

Published 28 ಮೇ 2024, 16:00 IST
Last Updated 28 ಮೇ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದಿನ ಬಿಜೆಪಿ ಸರ್ಕಾರದಂತೆಯೇ ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವು ಶೇ 40ರಷ್ಟು ನೀಡುವ ಕಮಿಷನ್‌ ವಿಚಾರದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜತೆಗೆ ಆಟವಾಡುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷವು ದೂರಿದೆ.

‘ಕಾಂಗ್ರೆಸ್‌ ಸಹ ‘ಶೇ 40 ಕಮಿಷನ್‌ ಸರ್ಕಾರ’ದ ಚಾಳಿಯನ್ನೇ ಮೈಗೂಡಿಸಿಕೊಂಡಿದೆ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರ ನಡೆದಿದೆ. ಡೆತ್‌ನೋಟ್‌ನಲ್ಲಿ ಸಚಿವರೊಬ್ಬರ ಹೆಸರು ಉಲ್ಲೇಖಿಸಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಚಿವರನ್ನು ತಕ್ಷಣವೇ ಸಂಪುಟದಿಂದ ಕಿತ್ತು ಹಾಕಬೇಕು’ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಮಾತನಾಡಿ, ‘ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ಮಂತ್ರಿ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅಧಿಕಾರಿಯ ಆತ್ಮಹತ್ಯೆ ಪ್ರಕರಣ, ರಾಜ್ಯ ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳುತ್ತಿದ್ದರು. ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ, ಡೆತ್‌ನೋಟ್‌ನಲ್ಲಿ ಪ್ರಕರಣದ ವಿವರವನ್ನು ಉಲ್ಲೇಖಿಸಿದ್ದಾರೆ. ತಕ್ಷಣವೇ ಆ ಸಚಿವರನ್ನು ಸಂಪುಟದಿಂದ ತೆಗೆದು ಹಾಕಿ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT