ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್ ರಸ್ತೆ ಬಳಿ ಅಪಘಾತ: ಕಲಘಟಗಿ ಮೂಲದ ಯುವಕ ಸಾವು

ಅಣ್ಣ–ತಮ್ಮ ಬೈಕ್‌ನಲ್ಲಿ ಹೊರಟಿದ್ದರು
Published 20 ಮೇ 2024, 15:29 IST
Last Updated 20 ಮೇ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್ ರಸ್ತೆಯ ಮಂಗನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ವಿನಾಯಕ್ ಪಲ್ಲೇದ (20) ಎಂಬುವವರು ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಅಣ್ಣ ಗಿರೀಶ್‌ ಪಲ್ಲೇದ ಸಹ ಗಾಯಗೊಂಡಿದ್ದಾರೆ.

‘ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ವಿನಾಯಕ್ ಹಾಗೂ ಗಿರೀಶ್, ಮಾಗಡಿ ರಸ್ತೆಯಲ್ಲಿರುವ ಕಾಲೇಜೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಜೊತೆಗೆ, ಜಿಗಣಿ ಬಳಿಯ ಕಂಪನಿಯೊಂದರಲ್ಲಿ ಅರೆಕಾಲಿಕ ಕೆಲಸದಲ್ಲಿದ್ದರು. ಜಿಗಣಿಯಲ್ಲಿಯೇ ಕೊಠಡಿಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು’ ಎಂದು ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ವಿನಾಯಕ್ ಹಾಗೂ ಗಿರೀಶ್, ಬೈಕ್‌ನಲ್ಲಿ ಜಿಗಣಿ ಕಡೆಯಿಂದ ಮಾಗಡಿ ರಸ್ತೆ ಬಳಿಯ ಕಾಲೇಜಿಗೆ ಸೋಮವಾರ ಬೆಳಿಗ್ಗೆ ಹೊರಟಿದ್ದರು. ಬೆಳಿಗ್ಗೆ 7.55 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ’ ಎಂದು ತಿಳಿಸಿದರು.

‘ವಿನಾಯಕ್ ಅವರು ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಗಿರೀಶ್ ಕುಳಿತುಕೊಂಡಿದ್ದರು. ನೈಸ್‌ ರಸ್ತೆಯಲ್ಲಿ ಮಂಗನಹಳ್ಳಿ ಸಮೀಪ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಬೈಕ್ ಸಮೇತ ಉರುಳಿಬಿದ್ದ ವಿನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಗಿರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಪಘಾತದ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಲಾರಿ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು, ಚಾಲಕನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT