ಬುಧವಾರ, ಮಾರ್ಚ್ 3, 2021
25 °C
ಫೆಬ್ರುವರಿ 20ರಿಂದ ಉದ್ಯಾನನಗರಿಯಲ್ಲೇ ನಡೆಯಲಿದೆ ಪ್ರದರ್ಶನ

ಎಲ್ಲ ಊಹಾಪೋಹಗಳಿಗೆ ತೆರೆ: ಬೆಂಗಳೂರಿನಲ್ಲೇ ಉಳಿದ ಏರ್‌ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ಸ್ಥಳಾಂತರಕ್ಕೆ ಸಂಬಂಧಿಸಿದ ಎಲ್ಲ ಊಹಾಪೋಹಗಳಿಗೆ ರಕ್ಷಣಾ ಸಚಿವಾಲಯ ಕೊನೆಗೂ ತೆರೆ ಎಳೆದಿದೆ. ಏಷ್ಯಾದ ಈ ಅತಿದೊಡ್ಡ ವೈಮಾನಿಕ ಸಂತೆಯನ್ನು ಎಂದಿನಂತೆ ಈ ಬಾರಿಯೂ ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ.

‘ಏರೋ ಇಂಡಿಯಾ’ ಈ ಸಲ ‘ಉದ್ಯಾನನಗರಿ’ಯಿಂದ ಬೇರೆಡೆ ಹಾರಲಿದೆ ಎಂಬ ದಟ್ಟವದಂತಿ ಹಬ್ಬಿತ್ತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಲ್ಲದೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರದರ್ಶನವನ್ನು ಬೇರೆಡೆ ಸ್ಥಳಾಂತರ ಮಾಡದಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಒತ್ತಾಯಿಸಿದ್ದರು. ರಕ್ಷಣಾ ಸಚಿವರು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಪ್ರದರ್ಶನ ನಡೆಯುವ ಸ್ಥಳದ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳದಿದ್ದರಿಂದ ವದಂತಿಗೆ ರೆಕ್ಕೆ–ಪುಕ್ಕಗಳು ಮೂಡಿದ್ದವು.

‘ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯು ಬೆಂಗಳೂರಿನಲ್ಲಿ 2019ರ ಫೆಬ್ರುವರಿ 20ರಿಂದ 24ರವರೆಗೆ ನಡೆಯಲಿದೆ. ರಕ್ಷಣಾ ಕ್ಷೇತ್ರದ ವೈಮಾಂತರಿಕ್ಷ ಕೈಗಾರಿಕೆಗಳಿಗೆ ಸಂಬಂಧಿಸಿದ ಕಂಪನಿಗಳು ಐದು ದಿನಗಳು ನಡೆಯುವ ಈ ಪ್ರದರ್ಶನದಲ್ಲಿ ಭಾಗವಹಿಸಲಿವೆ’ ಎಂದು ರಕ್ಷಣಾ ಸಚಿವಾಲಯ ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

‘ಈ ಪ್ರದರ್ಶನವು ದೇಶದೊಳಗಿನ ವೈಮಾನಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ಭಾರತದಲ್ಲೇ ತಯಾರಿಸಿ ಎಂಬ ಧ್ಯೇಯವನ್ನು ಸಾಕಾರಗೊಳಿಸುವುದಕ್ಕೂ ನೆರವಾಗಲಿದೆ’ ಎಂದು ಆಶಾವಾದವನ್ನೂ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಲಖನೌನಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಬೇಕು’ ಎಂದು ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದರು. ಉತ್ತರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಕ್ಷಣಾ ಕಾರಿಡಾರ್ ಯೋಜನೆಗೂ ಇದರಿಂದ ಉತ್ತೇಜನ ಸಿಗಲಿದೆ ಎಂದು ಅವರು ಪ್ರತಿಪಾದಿಸಿದ್ದರು.

ಗುಜರಾತ್‌, ರಾಜಸ್ಥಾನ, ಒಡಿಶಾ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ಈ ಪ್ರದರ್ಶನ ಏರ್ಪಡಿಸಲು ಮುಂದೆ ಬಂದಿವೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ಪ್ರದರ್ಶನ ಸ್ಥಳಾಂತರಗೊಳ್ಳಲಿದೆ ಎಂಬ ಆತಂಕ ಎದುರಾದಾಗ ರಾಜ್ಯದ ರಾಜಕೀಯ ಪಕ್ಷಗಳ ಪ್ರಮುಖರು, ತಜ್ಞರು, ಮಾಜಿ ಸೈನಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲೇ ಈ ಪ್ರದರ್ಶನವನ್ನು ಮುಂದುವರಿಸಬೇಕು ಎಂಬುದನ್ನು ಕಾರಣ ಸಮೇತ ವಿವರಿಸಿದ್ದರು.

ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದು, ‘ಬೆಂಗಳೂರು ನಗರವು ಈಗಾಗಲೇ ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದ ಭಾರಿ ಉದ್ದಿಮೆಗಳ ಕೇಂದ್ರವಾಗಿದೆ. ಹಾಗಾಗಿ ಏರ್‌ ಷೋ ಏರ್ಪಡಿಸಲು ಇದೇ  ಸೂಕ್ತ ತಾಣ’ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು. ಏರ್‌ ಷೋಗೆ ಅಗತ್ಯ ನೆರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದ್ದರು.

ಬೆಂಗಳೂರು ಸೂಕ್ತ ತಾಣ: ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಅತ್ಯಂತ ಸೂಕ್ತ ತಾಣ ಎನ್ನುವುದು ತಜ್ಞರ ಅಭಿಪ್ರಾಯವೂ ಆಗಿದೆ.

‘ಇಲ್ಲಿ ಪ್ರತಿಸಲ ಪ್ರದರ್ಶನ ಏರ್ಪಡಿಸಿದಾಗಲೂ ರಕ್ಷಣಾ ಇಲಾಖೆಗೆ ₹ 30 ಕೋಟಿಯಿಂದ ₹ 35 ಕೋಟಿಗಳಷ್ಟು ಲಾಭವಾಗಿದೆ. ಪ್ರದರ್ಶನವನ್ನು ಬೇರೆಡೆ ಸ್ಥಳಾಂತರಿಸಿದ್ದರೆ ಆರ್ಥಿಕ ಹೊರೆ ಬೀಳುತ್ತಿತ್ತು’ ಎನ್ನುತ್ತಾರೆ ರಕ್ಷಣಾ ಪ್ರದರ್ಶನ ಸಂಸ್ಥೆಯ ಮಾಜಿ ನಿರ್ದೇಶಕ ಮಯಸ್ಕರ್‌ ದೇವ್‌ ಸಿಂಗ್‌.

‘ಪ್ರದರ್ಶನಕ್ಕೆ ಅಗತ್ಯವಾದ ವೈಮಾನಿಕ ನೆಲೆ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣ ಬೆಂಗಳೂರಿನಲ್ಲಿದೆ. ಯಲಹಂಕದ ವಾಯುನೆಲೆಯನ್ನು ತರಬೇತಿ ನೀಡಲು ಮಾತ್ರ ಬಳಸಲಾಗುತ್ತದೆ. ಹಾಗಾಗಿ ವಾಯುಪಡೆಯ ಬೇರೆ ನೆಲೆಗಳಿಗೆ ಹೋಲಿಸಿದರೆ ಇಲ್ಲಿನ ಕಾರ್ಯಾಚರಣೆ ತೀವ್ರತೆ ಕಡಿಮೆ ಇರುತ್ತದೆ. ಹೀಗಾಗಿ ಈ ನಗರವೇ ಪ್ರದರ್ಶನಕ್ಕೆ ತಕ್ಕ ತಾಣ’ ಎನ್ನುತ್ತಾರೆ ಏರ್‌ ಮಾರ್ಷಲ್‌ (ನಿವೃತ್ತ) ಬಿ.ಕೆ. ಪಾಂಡೆ.

‘ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಸಲು ಅತ್ಯುತ್ತಮ ಸ್ಥಳ ಬೇಕಾಗುತ್ತದೆ. ಅದು ಬೆಂಗಳೂರಿನಲ್ಲಿ ಮಾತ್ರ ಇದೆ’ ಎಂಬುದು ಇಂಟರ್‌ನ್ಯಾಷನಲ್‌ ‘ಫೌಂಡೇಷನ್‌ ಫಾರ್‌ ಏವಿಯೇಷನ್‌, ಏರೋಸ್ಪೇಸ್‌ ಅಂಡ್‌ ಡೆವೆಲಪ್‌ಮೆಂಟ್‌’ನ (ಐಎಫ್‌ಎಎಡಿ) ಅಧ್ಯಕ್ಷ ಸನತ್‌ ಕೌಲ್‌ ಅವರ ಅಭಿಪ್ರಾಯ.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 1996ರಲ್ಲಿ ಮೊಟ್ಟ ಮೊದಲ ಬಾರಿಗೆ ‘ಏರೋ ಇಂಡಿಯಾ’ ಪ್ರದರ್ಶನ ನಡೆದಿತ್ತು. ಆ ಬಳಿಕದ ಎಲ್ಲ ಪ್ರದರ್ಶನಗಳೂ ಇಲ್ಲೇ ನಡೆದಿವೆ.

**

‘ಕಾಂಗ್ರೆಸ್‌ ನಾಯಕರು ಕ್ಷಮೆ ಕೋರಲಿ’

‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ನಾಯಕರ ಕುತಂತ್ರದಿಂದಾಗಿ ಏರೋ ಇಂಡಿಯಾ ಸ್ಥಳಾಂತರದ ಗೊಂದಲ ಸೃಷ್ಟಿಸಲಾಗಿತ್ತು ಎಂಬುದು ಈಗ ದೃಢಪಟ್ಟಿದೆ. ಅಪಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕ್ಷಮೆ ಕೋರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದರು.

**

ಟ್ವಿಟರ್‌ನಲ್ಲೂ ‘ಏರೋ ಇಂಡಿಯಾ’ ಹಾರಾಟ

ಏರೋ ಇಂಡಿಯಾ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಪ್ರದರ್ಶನವನ್ನು ಇಲ್ಲಿಯೇ ಮುಂದುವರಿಸುತ್ತಿರುವುದಕ್ಕೆ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ.

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರತಿಷ್ಠಿತ ಏರೋ ಇಂಡಿಯಾ 2019 ಅನ್ನು ನಮ್ಮ ಬೆಂಗಳೂರಿನಲ್ಲೇ ಮುಂದುವರಿಸುವ ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇನೆ. 1996ರಿಂದಲೂ ನಡೆಸುತ್ತಾ ಬರುತ್ತಿರುವ ಈ ಪ್ರದರ್ಶನ ಯಶಸ್ವಿಯಾಗುವುದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.

ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಸುಳ್ಳು ಹೇಳುವ ನಿಸ್ಸೀಮರು ಮತ್ತೊಮ್ಮೆ ಎಡವಿದ್ದಾರೆ. ‘ಏರೋ ಇಂಡಿಯಾ 2019’ ಮತ್ತೆ ನಮ್ಮ ಬೆಂಗಳೂರಿನಲ್ಲೇ

–ಅನಂತ ಕುಮಾರ್‌, ಕೇಂದ್ರ ಸಚಿವ

‘ಏರೋ ಇಂಡಿಯಾ 2019’ರ ಬಗ್ಗೆ ನಿರ್ಧಾರ ತಳೆಯಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳು ಬೇಕಾಯಿತು. ಬೆಂಗಳೂರು, ಭಾರತದಲ್ಲಿ ವೈಮಾಂತರಿಕ್ಷ ಉದ್ದಿಮೆ ಕ್ಷೇತ್ರದಲ್ಲಿ ನಂಬರ್‌ 1 ಸ್ಥಾನದಲ್ಲಿದೆ ಎಂದು ಮತ್ತೆ ಮತ್ತೆ ಸಾರಿ ಹೇಳುವುದಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು

–ನಿವೇದಿತ್‌ ಆಳ್ವ

ಎಲ್ಲ ಊಹಾಪೋಹಗಳನ್ನು ಸುಳ್ಳಾಗಿಸಿದ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದ. ಬೆಂಗಳೂರಿನ ಸಲುವಾಗಿ ನಡೆದ ಹೋರಾಟಕ್ಕೆ ಬೆಂಬಲ ನೀಡಿದವರಿಗೂ ಕೃತಜ್ಞತೆ

–ಶೋಭಾ ಕರಂದ್ಲಾಜೆ, ಸಂಸದೆ

ಕರ್ನಾಟಕದ ಹೆಮ್ಮೆಯಾಗಿರುವ ‘ಏರೋ ಇಂಡಿಯಾ’ ಪ್ರದರ್ಶನವನ್ನು ಇಲ್ಲೇ ಉಳಿಸಿಕೊಳ್ಳುವ ನಿರ್ಧಾರವನ್ನು ಸ್ವಾಗತಿಸುತ್ತೇನೆ

–ಜಯಮಾಲಾ, ಸಚಿವೆ

ಒಳ್ಳೆಯದೇ. ರಫೇಲ್‌ ಯುದ್ಧ ವಿಮಾನ ಖರೀದಿ ವಿಷಯದಲ್ಲೂ ಇದೇ ರೀತಿ ಆಗಲಿ. ಅದನ್ನು ಎಚ್‌ಎಎಲ್‌ನಿಂದ ಕಿತ್ತುಕೊಳ್ಳಬೇಡಿ

–ರಾಘು ದೊಡ್ಡೇರಿ

ಇದೊಂದು ಒಳ್ಳೆಯ ಬೆಳವಣಿಗೆ. ಅಂತರರಾಷ್ಟ್ರೀಯ ಪ್ರದರ್ಶನಗಳು ರಾಜ್ಯಗಳ ನಡುವಿನ ಸಂಗೀತ ಕುರ್ಚಿಗೆ ವಸ್ತುಗಳಾಗಬಾರದು. ಲಖನೌದಲ್ಲಿ ಈ ಪ್ರದರ್ಶನ ಏರ್ಪಡಿಸುವುದಕ್ಕೆ ಪೂರಕ ಮೂಲಸೌಕರ್ಯಗಳಿಲ್ಲ

–ಭಾಸ್ಕರ್‌ ಖನುಂಗೊ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು