ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೇ ಕನ್ನ ಹಾಕಿದ್ದ ಪಾತ್ರೆ ಕಳ್ಳ!

‘ಮುರುಗನ್‌ ಗ್ಯಾಂಗ್‌’ನ ಮೂವರ ಬಂಧನ * ₹ 30 ಲಕ್ಷ ಮೌಲ್ಯದ ಚಿನ್ನ ಜಪ್ತಿ
Last Updated 6 ಅಕ್ಟೋಬರ್ 2018, 18:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಪೊಲೀಸರು ಚೆನ್ನೈ ಸೆಂಟ್ರಲ್‌ ಜೈಲಿನಲ್ಲಿದ್ದ ಕುಖ್ಯಾತ ಕಳ್ಳ ದಿನಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 1 ಕೆ.ಜಿ ಚಿನ್ನ ಹಾಗೂ 1,300 ಗ್ರಾಂ ಬೆಳ್ಳಿ ವಸ್ತುಗಳು ಜಪ್ತಿಯಾಗಿವೆ.

ತಮಿಳುನಾಡಿನ ತಿರುನಲ್ವೇಲಿಯ ದಿನಕರ್‌ ವಿರುದ್ಧ ಬೈಯಪ್ಪನಹಳ್ಳಿ, ಆವಲಹಳ್ಳಿ, ಆನೇಕಲ್, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಮಡಿವಾಳ ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿದ್ದವು. 2012ರಲ್ಲಿ ಮಡಿವಾಳ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆನಂತರ ಈತ ಮತ್ತೆ ರಾಜಧಾನಿ ಪೊಲೀಸರಿಗೆ ಸಿಕ್ಕಿರಲಿಲ್ಲ.

‘ದಿನಕರ್‌ನನ್ನು ಬಾಡಿ ವಾರಂಟ್ ಮೇಲೆ ಕರೆತರಲಾಗಿದೆ. ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಆತನ ಸಹಚರರಾದ ಕಾಳಿದಾಸ್ (36) ಹಾಗೂ ಲೋಕನಾಥನ್‌ನನ್ನೂ (52) ಬಂಧಿಸಿದ್ದೇವೆ. ಈ ಗ್ಯಾಂಗ್‌ನ ಮುಖಂಡ ಮುರುಗನ್‌ನ ಪತ್ತೆಗೆ ಸಿಬ್ಬಂದಿ ಬಲೆ ಬೀಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಹೇಳಿದರು.

ಮೊದಲು ಪಾತ್ರೆ ಕಳ್ಳ: ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಿನಕರ್‌, ಅಂಗಡಿಯಲ್ಲಿ ಪಾತ್ರೆಗಳನ್ನು ಕದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ಅಲ್ಲಿ ಆತನಿಗೆ ಕುಖ್ಯಾತ ಕಳ್ಳ ಮುರುಗನ್‌ನ ಪರಿಚಯವಾಯಿತು. ಬಿಡುಗಡೆ ಬಳಿಕ ಇಬ್ಬರೂ ಒಟ್ಟಾಗಿ ಕಳ್ಳತನ ಮಾಡಲು ಶುರು ಮಾಡಿದರು.

ಗ್ಯಾಸ್‌ ಕಟರ್, ಸಿಲಿಂಡರ್, ಹಾರೆ ಸೇರಿದಂತೆ ಕೃತ್ಯಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಕಾರಿನಲ್ಲಿ ಹಾಕಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಿದ್ದ ಆರೋಪಿಗಳು, 2008ರಲ್ಲಿ ಮೂರು ಬ್ಯಾಂಕ್‌ಗಳಿಗೆ ಕನ್ನ ಹಾಕಿ ಲಾಕರ್‌ಗಳನ್ನೇ ಹೊತ್ತೊಯ್ದಿದ್ದರು. ಈ ಪ್ರಕರಣದಲ್ಲಿ ಮುರುಗನ್ ಬಂಧನವಾಗುತ್ತಿದ್ದಂತೆಯೇ ದಿನಕರ್ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದಿದ್ದ.

ಕೂಡ್ಲು ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಆತ, ತನ್ನ ಇತರೆ ಗ್ಯಾಂಗ್‌ ಸದಸ್ಯರನ್ನು ಕರೆಸಿಕೊಂಡು ಇಲ್ಲೂ ಕಳ್ಳತನ ಪ್ರಾರಂಭಿಸಿದ. ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. 2012ರಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ಬಳಿಕ ದಿನಕರ್ ತಮಿಳುನಾಡಿನಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದರು.

ಕನ್ನಡ ಬರಲ್ಲ ಎಂದಿದ್ದ

‘ವಿಚಾರಣೆ ವೇಳೆ ತಮಿಳಿನಲ್ಲೇ ಮಾತನಾಡುತ್ತಿದ್ದ ದಿನಕರ್, ತನಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ್ದ. ಆದರೆ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ಅವರು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಕನ್ನಡದಲ್ಲೇ ಉತ್ತರ ನೀಡಿದ. ಹೆಚ್ಚಿನ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆತ ನಮ್ಮ ಬಳಿ ಸುಳ್ಳು ಹೇಳಿದ್ದ’ ಎಂದು ಪೊಲೀಸರು ಹೇಳಿದರು.

ತಮಿಳುನಾಡು ಪೊಲೀಸ್‌ಗೆ ಸಿಕ್ಕಿಬಿದ್ದ

ಇದೇ ಏಪ್ರಿಲ್ 9ರಂದು ನಗರಕ್ಕೆ ಬಂದಿದ್ದ ಗ್ಯಾಂಗ್, ಬೈರಸಂದ್ರ ನಿವಾಸಿ ಕೆ.ಶಿವಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿತ್ತು. ಸಿ.ಸಿ. ಟಿ.ವಿ ಕ್ಯಾಮೆರಾ ಪರಿಶಿಲಿಸಿದಾಗ ಮುರುಗನ್ ಗ್ಯಾಂಗ್ ಎಂದು ಗೊತ್ತಾಯಿತು. ಇತ್ತೀಚೆಗೆ ತಮಿಳುನಾಡು ಪೊಲೀಸರು ದಿನಕರ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಆ ಮಾಹಿತಿ ಸಿಕ್ಕ ಕೂಡಲೇ ನ್ಯಾಯಾಲಯದ ಅನುಮತಿ ಪಡೆದು ಆತನನ್ನು ವಶಕ್ಕೆ ಪಡೆಯಲಾಯಿತು. ಆದರೆ, ಆಂಧ್ರ ಜೈಲಿನಲ್ಲಿದ್ದ ಮುರುಗನ್, ಜಾಮೀನಿನ ಮೇಲೆ ಬಿಡುಗಡೆಯಾಗಿ ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT