ಮೇಡಂ, ಕಸದ ಸಮಸ್ಯೆಗೆ ಏನಿದೆ ಪರಿಹಾರ?

7

ಮೇಡಂ, ಕಸದ ಸಮಸ್ಯೆಗೆ ಏನಿದೆ ಪರಿಹಾರ?

Published:
Updated:

ಬೆಂಗಳೂರು: ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ಕಲ್ಪಿಸಿರುವ ಅವಕಾಶಕ್ಕೆ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದಿರುವ ದೂರುಗಳಲ್ಲಿ ಕಸ ವಿಲೇವಾರಿ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ. ರಾಜಕಾಲುವೆಯ ಹೂಳು ಎತ್ತದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಮನವಿಗಳು ಬಂದಿವೆ. ಮೇಯರ್‌ಗೆ ಜನ ಸಲ್ಲಿಸಿರುವ ಕೆಲವು ಅಹವಾಲುಗಳು ಇಲ್ಲಿವೆ.

ಬೀದಿನಾಯಿ ನಿಯಂತ್ರಿಸಿ

ಟಿ.ದಾಸರಳ್ಳಿಯ ಮಹೇಶ್ವರಮ್ಮ ದೇವಸ್ಥಾನದ ಹತ್ತಿರ ಮತ್ತು ಶಿವನ ದೇವಾಲಯದ ಸುತ್ತಮುತ್ತ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಓಡಾಡುವಾಗ ಮೈಮೇಲೆ ಎಗರಿ, ಕಚ್ಚಲು ಬರುತ್ತವೆ. ನಾಯಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಶೀಘ್ರವೇ ಕ್ರಮ ಕೈಗೊಳ್ಳಿ.

–ಮುನಿಸ್ವಾಮಪ್ಪ, ದಾಸರಹಳ್ಳಿ

ಚರಂಡಿ ಹೂಳೆತ್ತಿ

ಜೆ.ಪಿ.ನಗರದ ಡಾಲರ್ಸ್‌ ಕಾಲೊನಿಯಲ್ಲಿ ಕಳೆದ ಮೂರು ತಿಂಗಳಿನಿಂದ ಚರಂಡಿ ಬಾಯ್ದೆರೆದುಕೊಂಡೇ ಇದೆ. ರಾಜಕಾಲುವೆಗೆ ಅದನ್ನು ಸಂಪರ್ಕಿಸಿಲ್ಲ. ಹೂಳು ತೆಗೆದಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ. ಮಳೆ ಬಂದಾಗಲೆಲ್ಲ ಚರಂಡಿ ತುಂಬಿ, ಕೊಳಚೆ ನೀರೆಲ್ಲ ಹೊರಗೆ ನುಗ್ಗುತ್ತದೆ. ಆದಷ್ಟು ಬೇಗ ಚರಂಡಿ ದುರಸ್ತಿಗೊಳಿಸಿ.

–ಮಂಜುನಾಥ, ಜೆ.ಪಿ.ನಗರ

ರಸ್ತೆ ದುರಸ್ತಿಗೆ ಆದ್ಯತೆ ನೀಡಿ

ರಸ್ತೆ ತಿರುವುಗಳಲ್ಲಿ ಸರಿಯಾಗಿ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ತಿರುವುಗಳಲ್ಲಿ ಜಾರುವ ಸಂಭವವೇ ಹೆಚ್ಚು. ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿದ್ದಾರೆ. ಆದರೆ, ಸಮತಟ್ಟಾಗಿಲ್ಲ. ಇದರಿಂದ ವಾಹನ ಸವಾರರಿಗೆ ತುಂಬಾ ಅನನುಕೂಲವಾಗಿದೆ. ಮಳೆಗಾಲದಲ್ಲಿ ರಸ್ತೆ ದುರಸ್ತಿ ಮಾಡಿದರೆ ಸರಿಯಾದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಬದಲಿಗೆ ಇನ್ನಷ್ಟು ಅಪಘಾತಗಳಿಗೆ ದಾರಿ ಮಾಡಿಕೊಡುತ್ತದೆ. ದುರಸ್ತಿ ಕಾರ್ಯ ಸಂಪೂರ್ಣ ಮುಗಿಯುವವರೆಗೂ ಉಸ್ತುವಾರಿ ವಹಿಸಿ.

– ನಂದಿನಿ ಎಸ್‌., ಗಂಗಾನಗರ‌

ನಡುರಸ್ತೆಯ ಕಸ ವಿಂಗಡಣೆ ತಪ್ಪಿಸಿ

ಜೆ.ಪಿ.ನಗರದ 7ನೇ ಹಂತದ ಅನೇಕ ಮುಖ್ಯ ರಸ್ತೆಗಳಲ್ಲಿ, ಬಿಗ್ ಬಜಾರ್ ಸಮೀಪದ ಬಸ್ ನಿಲ್ದಾಣ ಹಾಗೂ ಪೆಟ್ರೋಲ್ ಬಂಕ್ ಬಳಿ‌ ತ್ಯಾಜ್ಯ ವಿಂಗಡಣೆ ನಡು ರಸ್ತೆಯಲ್ಲಿಯೇ ನಡೆಯುತ್ತದೆ. ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚಾಗಿದೆ. ಕೊಳೆತ ಕಸದ ವಾಸನೆ ಅಸಹನೀಯ. ಈ ಬಗ್ಗೆ ಗಮನಹರಿಸಿ.

–ಜಗದೀಶ್ ಮಲ್ನಾಡ್, ಜೆ.ಪಿ.ನಗರ

ಸ್ವಚ್ಛತೆಗೆ ಆದ್ಯತೆ ನೀಡಿ

ನಗರದ ಎಲ್ಲಾ ಬೀದಿಗಳಲ್ಲಿ ‌ಸ್ವಚ್ಛತಾ ಕಾರ್ಯ ನಿರ್ವಹಿಸುವುದರ ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ‌ಬೇಕು. ಪರಿಸರವನ್ನು ಹಾನಿ ಮಾಡುವ ತ್ಯಾಜ್ಯ ವಸ್ತುಗಳನ್ನು ನಿಷೇಧಿಸಿ. ಹೆಚ್ಚು ಗಿಡ–ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ. ಪರಿಸರಕ್ಕೆ ಹಾನಿ ಮಾಡುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

–ಶ್ರೀನಿವಾಸ್ ಎಂ., ವಿಜಯನಗರ

‌ಕೋತಿ ಹಾವಳಿ ತಪ್ಪಿಸಿ

ವಿಜಯನಗರದ ಗ್ರಂಥಾಲಯದಿಂದ ರೆಮ್ಕೊ ಬಡಾವಣೆಯ ಪಾರ್ಕ್‌ವರೆಗೂ ಕೋತಿಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ಕೈಗೊಂ‌‌ಡಿಲ್ಲ. ಕೋತಿಗಳ ಹಾವಳಿಯಿಂದ ಮುಕ್ತಿ ನೀಡಿ.

–ಸುಮಾ ಶಶಿಕುಮಾರ್‌, ಆರ್.ಪಿ.ಸಿ ಬಡಾವಣೆ

ದಿನಕ್ಕೆರಡು ಬಾರಿ ಕಸ ಸಂಗ್ರಹಿಸಿ

ಕಸವನ್ನು ರಸ್ತೆಯಲ್ಲಿ ಎಸೆದು ಹೋಗುವವರನ್ನು ನಿಯಂತ್ರಿಸಲು ಹಾಗೂ ದಿನಕ್ಕೆರಡು ಬಾರಿ ಮನೆಗಳಿಂದ ಕಸವನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿ. ಹಸಿ ಕಸವನ್ನು ಗೊಬ್ಬರವಾಗಿಸಿ, ಅದನ್ನು ರಸ್ತೆಯ ಇಕ್ಕೆಲಗಳಲ್ಲಿರುವ ಗಿಡ–ಮರಗಳು ಮತ್ತು ಉದ್ಯಾನಗಳಿಗೆ ಉಪಯೋಗಿಸುವ ವ್ಯವಸ್ಥೆಯನ್ನು ಪ್ರತಿ ಬಡಾವಣೆಯಲ್ಲೂ ಮಾಡಬೇಕು. ಮಳೆ ನೀರು ಸಂಗ್ರಹ, ಇಂಗುಗುಂಡಿಗಳ ನಿರ್ಮಾಣ ಮಾಡಿ. ರಾಜಕಾಲುವೆಗಳನ್ನು ಸ್ವಚ್ಛವಾಗಿಡಿ.

–ನಾಗರಾಜ ಬೆಳ್ಕಿ, ಹೊಸಕೆರೆಹಳ್ಳಿ

ಪೌರ ಕಾರ್ಮಿಕರತ್ತ ಗಮನಹರಿಸಿ

ಪೌರ ಕಾರ್ಮಿಕರಿಗೆ ಗುಣಮಟ್ಟದ ಶೂ, ಕೈಗವಸು, ಮುಖಗವಸು ನೀಡಿ. ಕಾರ್ಮಿಕರು ಕಡ್ಡಾಯವಾಗಿ ಇವುಗಳನ್ನು ಧರಿಸಿಕೊಂಡೇ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಿ. ಅವರ ಆರೋಗ್ಯದ ಬಗ್ಗೆ ಗಮನಹರಿಸಿದರೆ, ಅವರೂ ಖುಷಿಯಿಂದ ಕೆಲಸ ಮಾಡುತ್ತಾರೆ. ನಗರದಲ್ಲಿರುವ ರಾಶಿ ಕಸಕ್ಕೆ ಬೇಗ ಮುಕ್ತಿ ಸಿಗಬಹುದು.

–ಮನೋಜ್‌, ಅಂದ್ರಹಳ್ಳಿ

ಸಂಪೂರ್ಣ ಕೆಲಸ ನಡೆಯಬೇಕು

ನಗರದ ಮುಖ್ಯ ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಂಡ ಕೂಡಲೇ ಅದಕ್ಕಾಗಿ ಉಪಯೋಗಿಸಿಕೊಂಡ ಕಲ್ಲುಗಳು ಹಾಗೂ ಮರಳನ್ನು ತಕ್ಷಣ ತೆರವುಗೂಳಿಸಬೇಕು. ಇಂತಹ ಕೆಲಸ ಅರ್ಧಕ್ಕೆ ಬಿಟ್ಟಿರುವುದರಿಂದ ವಾಹನ ಸವಾರರಿಗೆ ಬಹಳ ಕಷ್ಟವಾಗುತ್ತಿದೆ. ಇದರಿಂದ ಟ್ರಾಫಿಕ್ ಕಿರಿಕಿರಿ ಕೂಡ ಹೆಚ್ಚಾಗುತ್ತದೆ.

–ಮುರಳಿ ಜಿ.ಎಲ್., ಶ್ರೀನಿವಾಸ್ ನಗರ

ಸಂಚಾರ ದಟ್ಟಣೆ ನಿಯಂತ್ರಿಸಿ

ಯಲಹಂಕದ ಬೈಪಾಸ್‌ನಲ್ಲಿರುವ ರೈತರ ಸಂತೆ ಬಳಿ ವಾಹನ ಚಲಾಯಿಸುವುದೇ ದೊಡ್ಡ ಸಮಸ್ಯೆ. ಕೈಗಾಡಿ ವ್ಯಾಪಾರಸ್ಥರು ರಸ್ತೆಯಲ್ಲಿಯೇ ನಿಂತು ವ್ಯಾಪಾರ ಮಾಡುತ್ತಾರೆ. ಅಲ್ಲದೆ, ತರಕಾರಿ ಖರೀದಿಗೆ ಬರುವ ಚಿಲ್ಲರೆ ವ್ಯಾಪಾರಸ್ಥರು ತಮ್ಮ ಕಾರುಗಳು ಹಾಗೂ ಟೆಂಪೊಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿರುತ್ತಾರೆ. ಇದರಿಂದ ಸುರಭಿ ಬಡಾವಣೆ ಕಡೆಗೆ ಚಲಿಸುವ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಶಾಲೆಗೆ ಮಕ್ಕಳನ್ನು ಬಿಡುವ ಸಮಯದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಿ.

–ಅಂಬರೀಷ್, ಯಲಹಂಕ

ತ್ಯಾಜ್ಯ ಬಿಸಾಡುವವರಿಗೆ ಗತಿ ಕಾಣಿಸಿ

ನಗರದ ವಿವಿಧೆಡೆ ಕೋಳಿ ಮಾಂಸದ ಅಂಗಡಿಯವರು ದಿನದ ವ್ಯಾಪಾರ– ವಹಿವಾಟು ಮುಗಿಸಿದ ನಂತರ ಅಂಗಡಿಯ ಕಸವನ್ನು ಎಲ್ಲೆಂದರಲ್ಲಿ ಮೂಟೆ ಕಟ್ಟಿ ಬಿಸಾಡುತ್ತಾರೆ. ನೂತನವಾಗಿ ಮನೆ ಕಟ್ಟುವವರು, ಹಳೆ ಮನೆಯನ್ನು ಕೆಡವಿದ ನಂತರ, ತ್ಯಾಜ್ಯ ವಸ್ತುಗಳನ್ನು ರಸ್ತೆಯಲ್ಲಿಯೇ ಹಾಕುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ.

–ಚಂದ್ರಶೇಖರ್

ಕೆರೆಗಳ ಅಭಿವೃದ್ಧಿ ಮಾಡಿ

ಹಲವು ವರ್ಷಗಳಿಂದ ಕೆರೆಗಳ ಅಭಿವೃದ್ಧಿ ಮಾಡುತ್ತಲೇ ಇರುವ ಬಿಬಿಎಂಪಿ, ಇಲ್ಲಿವರೆಗೂ ಒಂದು ಕೆರೆಯನ್ನೂ ಸರಿಯಾದ ಕ್ರಮದಲ್ಲಿ, ಸಂಪೂರ್ಣವಾಗಿ ಅಭಿವೃದ್ಧಿಪಡಿಸಿಲ್ಲ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಶೀಘ್ರವೇ ಅವುಗಳ ಅಭಿವೃದ್ಧಿಗೆ ಮುಂದಾಗಿ. ಕೆರೆಯನ್ನೇ ಅಭಿವೃದ್ಧಿ ಮಾಡಲು ಆಗಿಲ್ಲವೆಂದರೆ, ನಗರದ ಅಭಿವೃದ್ಧಿ ಹೇಗೆ ಸಾಧ್ಯ? ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಲೇ ಇದೆ. ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ.

–ವಿನೋದ್‌ ಬಿ.

ಪುನಃ ಸಸಿ ನೆಡಬೇಕು

ವಿಜಯನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಸಾಕಷ್ಟು ಮರಗಳ ಹನನ ನಡೆದಿದೆ. ಮರ ಉರುಳಿದ ಜಾಗದಲ್ಲಿ ಪುನಃ ಸಸಿ ನೆಡಬೇಕು. ಅವುಗಳ ಪೋಷಣೆಗೆ ವಾರ್ಡ್ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಬೇಕು. ಉತ್ತರಾಖಂಡ ಹೈಕೋರ್ಟ್ ಆದೇಶದಂತೆ ಮರಗಳಿಗೂ ಮಾನವನಂತೆ ಬದುಕುವ ಹಕ್ಕು ರಾಜ್ಯದಲ್ಲೂ ಜಾರಿಗೆ ಬರಲಿ.

ಮಂಜುನಾಥ ಪಾಲವೆ, ವಿಜಯನಗರ

ಸಂಚಾರ ಸುಗಮಗೊಳಿಸಿ

ಟ್ಯಾನರಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೈಗೊಳ್ಳಿ. ಇಲ್ಲಿ ಅಕ್ರಮ ಪಾರ್ಕಿಂಗ್, ಅಂಗಡಿಗಳಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಮರಜ್ಯೋತಿ ಬಡಾವಣೆಯ ರಾಜಕಾಲುವೆಗೆ ಜನ ನಿತ್ಯ ಕಸ ಎಸೆಯುತ್ತಾರೆ. ಇದರಿಂದ ಕಾಲುವೆ ಹೂಳು ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು. ಈ ಬಗ್ಗೆ ಗಮನವಹಿಸಿ.

–ಮಂಜುನಾಥ್‌, ಥಣಿಸಂದ್ರ 

ಆಸೆ ಈಡೇರಿಸುವಿರಾ...

ನಗರದ ಯಾವುದೇ ಪಾದಚಾರಿ ರಸ್ತೆಯ ಮೇಲೆ ಕನಿಷ್ಠ ನೂರು ಮೀಟರ್ ಆದರೂ ಸರಾಗವಾಗಿ ನಡೆಯುವ ಆಸೆ. ಹಿರಿಯ ನಾಗರಿಕರು ಎಡವದೆ, ಬೀಳದೆ ನಡೆಯುವುದನ್ನು ನೋಡುವಾಸೆ. ಪಾದಚಾರಿ ಮಾರ್ಗಗಳ ಮೇಲೆ ಸ್ವಲ್ಪವೂ ಜಾಗವಿಲ್ಲದೆ ತಮ್ಮದೇ ಸ್ವತ್ತು ಎಂಬಂತೆ ಅಡಿಗಡಿಗೂ ಶಾಶ್ವತವಾಗಿ ನೆಲೆಯೂರಿರುವ ಅಂಗಡಿಗಳ ಮಾಲೀಕರ ಕೆಂಗಣ್ಣಿಗೆ ಗುರಿಯಾಗದೆ ನಡೆಯುವ ಆಸೆ. ಆದಷ್ಟು ಬೇಗ ನನ್ನ ಈ ಆಸೆ ಈಡೇರಬಹುದಲ್ಲವೆ?

–ಎಂ.ಎಸ್. ಕೃಷ್ಣಮೂರ್ತಿ, ಬನಶಂಕರಿ 3ನೇ ಹಂತ

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !