ಶನಿವಾರ, ಜೂನ್ 19, 2021
26 °C
ಒಂದು ವಸತಿ ಖರೀದಿಸಿದರೆ ಶೇ 5ರಷ್ಟು, ಗುಂಪು ಖರೀದಿಗೆ ಶೇ 10ರಷ್ಟು ರಿಯಾಯಿತಿ

ಬಿಡಿಎ ಫ್ಲ್ಯಾಟ್‌ ಖರೀದಿದಾರರಿಗೆ ಭಾರಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಮ್ಮಘಟ್ಟ ಹಾಗೂ ಕಣಮಿಣಿಕೆಯಲ್ಲಿ ಮೈಸೂರು ರಸ್ತೆಯ ಬಳಿ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ ಪ್ಲ್ಯಾಟ್‌ ಖರೀದಿಸುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಿಯಾಯಿತಿ ಪ್ರಕಟಿಸಿದೆ.

ಬಿಡಿಎ ಅಧ್ಯಕ್ಷ ಜಿ.ಪರಮೇಶ್ವರ ಅವರು ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯ ಬಳಿಕ ಶುಕ್ರವಾರ ಈ ವಿಷಯ ಪ್ರಕಟಿಸಿದರು.

‘ಒಂದು ಫ್ಲ್ಯಾಟ್‌ ಖರೀದಿಸುವವರಿಗೆ ಶೇ 5ರಷ್ಟು ಹಾಗೂ 10 ಅಥವಾ ಅದಕ್ಕಿಂತ ಹೆಚ್ಚು ಫ್ಲ್ಯಾಟ್‌ ಖರೀದಿಸುವವರಿಗೆ ಶೇ 10ರಷ್ಟು ರಿಯಾಯಿತಿ ನೀಡಲಾಗುವುದು. ಇಲ್ಲಿನ ವಸತಿಗಳು ಬೇಗ ಮಾರಾಟವಾದಷ್ಟೂ ಮತ್ತಷ್ಟು ಹೊಸ ಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸಲು ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು.

‘ಕೊಮ್ಮಘಟ್ಟದಲ್ಲಿ 2ಬಿಎಚ್‌ಕೆಯ 500 ಫ್ಲ್ಯಾಟ್‌ಗಳು ಹಾಗೂ ಕಣಮಿಣಿಕೆಯ ವಸತಿ ಸಮುಚ್ಚಯದಲ್ಲಿ 950 ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯ ಇವೆ. ಇವುಗಳಿಗೆ ₹ 25 ಲಕ್ಷದಿಂದ ₹ 35 ಲಕ್ಷದವರೆಗೆ ಬೆಲೆ ಇದೆ. ಇಲ್ಲಿ ನಿರ್ಮಿಸಿರುವ 3 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಈ ರಿಯಾಯಿತಿ ಅನ್ವಯ ಆಗದು’ ಎಂದು ಎಂಜಿನಿಯರಿಂಗ್‌ ಅಧಿಕಾರಿ ಎನ್‌.ಜಿ.ಗೌಡಯ್ಯ ತಿಳಿಸಿದರು.

ತುಮಕೂರು ರಸ್ತೆ ದಾಸನಪುರ ಹೋಬಳಿಯಲ್ಲಿ ಬಿಡಿಎ ಈ ಹಿಂದೆ 452 ವಿಲ್ಲಾಗಳನ್ನು ನಿರ್ಮಿಸಿತ್ತು. ಇವೆಲ್ಲವೂ ಮಾರಾಟವಾಗಿದೆ. ಈಗ ಇದೇ ಹೋಬಳಿಯ ಹೊನ್ನಿಗೆರೆಯಲ್ಲಿ ಮತ್ತೆ 323 ವಿಲ್ಲಾಗಳನ್ನು ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ಬಿಡಿಎ ನಿರ್ಮಿಸಲಿದೆ. ಇದರಲ್ಲಿ 320 1 ಬಿಎಚ್‌ಕೆ ಫ್ಲ್ಯಾಟ್‌ಗಳು ಇರಲಿವೆ. ಈ ಯೋಜನೆಗೆ ಸಭೆ ಅನುಮತಿ ನೀಡಿದೆ.

‘ವಿಲ್ಲಾಗಳಿಗೆ ಜನರಿಂದ ಹೆಚ್ಚು ಬೇಡಿಕೆ ಇದೆ. ಹೀಗಾಗಿ‌ ಇನ್ನಷ್ಟು ವಿಲ್ಲಾಗಳನ್ನು ನಿರ್ಮಿಸುವ ₹ 250 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದ್ದೇವೆ’ ಎಂದು ಅಧ್ಯಕ್ಷರು ತಿಳಿಸಿದರು.

ಕಾರಂತ ಬಡಾವಣೆಗೆ ಮರುಜೀವ: ಹೆಸರಘಟ್ಟ ರಸ್ತೆ ಬಳಿಯಲ್ಲಿ ಡಾ.ಶಿವರಾಮ ಕಾರಂತರ ಬಡಾವಣೆ ಅಭಿವೃದ್ಧಿಪಡಿಸುವ ಪ್ರಸ್ತಾವ ಮತ್ತೆ ಜೀವ ಪಡೆದಿದೆ. ಈ ಬಡಾವಣೆ ಸಲುವಾಗಿ 17 ಗ್ರಾಮಗಳಲ್ಲಿ 3,564 ಎಕರೆ ಜಮೀನು ಸ್ವಾಧೀನ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು.

ಈ ಯೋಜನೆಯನ್ನು ಕೈಬಿಡಬಾರದು. ಮೂರು ತಿಂಗಳೊಳಗೆ ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

‘ಈ ಬಡಾವಣೆಯ ಪ್ರಸ್ತಾವವನ್ನು ಬಿಡಿಎ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ಈ ಯೋಜನೆಯನ್ನು ಮುಂದುವರಿಸುತ್ತೇವೆ’ ಎಂದು ಪರಮೇಶ್ವರ ತಿಳಿಸಿದರು.

ಹಳೇ ಮದ್ರಾಸ್ ರಸ್ತೆ ಸಮೀಪದ ಕೋನದಾಸಪುರದಲ್ಲಿ 165 ಎಕರೆ ಜಾಗದಲ್ಲಿ ‘ಇನ್ನೊವೇಟಿವ್ ಸಿಟಿ’ ನಿರ್ಮಿಸುವುದಕ್ಕೂ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಈ ಯೋಜನೆ ರೂಪಿಸಲಾಗಿತ್ತು. ಆದಷ್ಟು ಶೀಘ್ರವೇ ಇದರ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಲ್ಲಿಸುವಂತೆ ಖಾಸಗಿ ಕಂಪನಿಯೊಂದಕ್ಕೆ ಸೂಚಿಸಿದ್ದೇವೆ. ಡಿಪಿಆರ್ ಸಿದ್ಧವಾದ ಬಳಿಕವಷ್ಟೇ ಈ ಯೋಜನೆಯ ವೆಚ್ಚದ ವಿವರ ತಿಳಿಯಲಿದೆ’ ಎಂದರು. 

ಬನಶಂಕರಿ ಬಡಾವಣೆಯ ಆರನೇ ಹಂತದಲ್ಲಿ 6ಎಕರೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ನಿರ್ಧಾರಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 

ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ 25ರಂದು
‘ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ 5 ಸಾವಿರ ನಿವೇಶನಗಳನ್ನು ಕಂಪ್ಯೂಟರ್‌ ರ‍್ಯಾಂಡಮೈಸೇಷನ್‌ ಮೂಲಕ ಹಂಚಿಕೆ ಮಾಡಲಾಗುತ್ತದೆ. ಇದೇ 25ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಪ್ರಕ್ರಿಯೆಯನ್ನು ನಡೆಸಿಕೊಡಲಿದ್ದಾರೆ’ ಎಂದು ಪರಮೇಶ್ವರ ತಿಳಿಸಿದರು.

15,171 ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ನಿವೇಶನ ಹಂಚಿಕೆಗೆ ಅರ್ಹತೆ ಪಡೆದವರ ತಾತ್ಕಾಲಿಕ ಪಟ್ಟಿಯನ್ನು ಜೂನ್‌ 29ರಂದು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಜಾಗತಿಕ ತಾಪಮಾನ ಶೃಂಗಸಭೆಗೆ ಪರಮೇಶ್ವರ
‘ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಇದೇ 10ರಿಂದ ನಡೆಯಲಿರುವ ಜಾಗತಿಕ ತಾಪಮಾನ ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು. ‘ಪರಿಸರ ಮಾಲಿನ್ಯದಿಂದಾಗಿ ಬದಲಾಗುತ್ತಿರುವ ಹವಾಮಾನದ ಕುರಿತು ಮೂರು ದಿನಗಳು ನಡೆಯಲಿರುವ ಈ ಶೃಂಗಸಭೆಯಲ್ಲಿ ಚಿಂತನ ಮಂಥನ ನಡೆಯಲಿದೆ. ವಿಶ್ವದ ವಿವಿಧ ದೇಶಗಳ ರಾಜಕೀಯ ನೇತಾರರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಪ್ರವಾಸಕ್ಕೆ ರಾಜಕೀಯವನ್ನು ಥಳಕು ಹಾಕುವುದು ತರವಲ್ಲ’ ಎಂದರು.

***

ಅಂಕಿ ಅಂಶ
* ₹25 ಲಕ್ಷ -860 ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ನಿಗದಿತ ಬೆಲೆ (ಕೊಮ್ಮಘಟ್ಟ ಹಾಗೂ ಕಣಮಿಣಿಕೆಯಲ್ಲಿ)
* ₹30 ಲಕ್ಷ -ಕಣಮಿಣಿಕೆಯಲ್ಲಿ 1,060 ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ನಿಗದಿತ ಬೆಲೆ
 * ₹32 ಲಕ್ಷ -ಕೊಮ್ಮಘಟ್ಟದಲ್ಲಿ 1,060 ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳ ನಿಗದಿತ ಬೆಲೆ
 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು