ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಬಿಜೆಪಿ ಪ್ರತಿಭಟನೆ

ಬೆಂಗಳೂರು ಅಭಿವೃದ್ಧಿಗೆ ತಕ್ಷಣವೇ ₹1 ಸಾವಿರ ಕೋಟಿ ಬಿಡುಗಡೆಗೆ ಬಿಜೆಪಿ ಆಗ್ರಹ
Published 28 ಮೇ 2024, 16:01 IST
Last Updated 28 ಮೇ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಆರೋಪಿಸಿ ಬಿಜೆಪಿ ನಗರ ಘಟಕದಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಮೂವರು ವಿದ್ಯಾರ್ಥಿನಿಯರ ಕೊಲೆಯಾಗಿದೆ. ಬೀದಿಗಳಲ್ಲಿ ಗಲಾಟೆಗಳು ನಡೆಯುತ್ತಿವೆ. ಕಿಡಿಗೇಡಿಗಳಿಗೆ ಕಾನೂನು ಭಯವೇ ಇಲ್ಲವಾಗಿದೆ ಎಂದು ಆರೋಪಿಸಿದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಲಾಯಿತು.

‘ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು ಹಾಗೂ ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ರಸ್ತೆಗಳು ಅಧ್ವಾನವಾಗಿದ್ದು, ಹಿರಿಯರು ನೆಮ್ಮದಿಯಿಂದ ಓಡಾಡಲು ಸಾಧ್ಯವಿಲ್ಲವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ದೂರಿದರು.

‘ಯಾವುದೇ ಅಧಿಕಾರಿಗಳು ಆತ್ಮಹತ್ಯೆ ಹಾದಿ ಹಿಡಿಯುವುದು ಬೇಡ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ’ ಎಂದು ಹೇಳಿದರು.

‘ಬೆಂಗಳೂರಿನ ಅಭಿವೃದ್ಧಿಗೆ ಕೂಡಲೇ ₹1,000 ಕೋಟಿ ಹಣ ಬಿಡುಗಡೆ ಮಾಡಬೇಕು. ಮಳೆ ಬರುವ ಮುನ್ನವೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಅಗತ್ಯ ಕಾಮಗಾರಿ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ನಾಯಕ ಆರ್‌.ಅಶೋಕ ಆಗ್ರಹಿಸಿದರು.

‘ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಕಡೆಗಣಿಸಿದೆ. ರಸ್ತೆಗಳಲ್ಲಿ ಗುಂಡಿ, ಕಸದ ರಾಶಿ ಎಲ್ಲೆಡೆ ಕಾಣುತ್ತಿದೆ. ಪೌರಕಾರ್ಮಿಕರಿಗೆ ಹಾಗೂ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ’ ಎಂದು ಹೇಳಿದರು.

ಶಾಸಕ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ‘ಆಶಾದಾಯಕ, ಭರವಸೆದಾಯಕ ನಗರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ಸರ್ಕಾರಕ್ಕೆ ಪ್ರಜ್ಞೆ ಇದೆಯೇ’ ಎಂದು ಪ್ರಶ್ನಿಸಿದರು.

ಶಾಸಕರಾದ ಬೈರತಿ ಬಸವರಾಜ್, ಕೆ.ಗೋಪಾಲಯ್ಯ, ಮುನಿರತ್ನ, ವಿಶ್ವನಾಥ್, ಮುನಿರಾಜು, ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಹಾಜರಿದ್ದರು.

Quote - ಶಿವಮೊಗ್ಗದಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ. ಮುಖ್ಯಮಂತ್ರಿ ಡಿಸಿಎಂ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಡಿ.ವಿ.ಸದಾನಂದಗೌಡ ಮಾಜಿ ಮುಖ್ಯಮಂತ್ರಿ

Quote - ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಬೆಂಗಳೂರಿನ ಅಭಿವೃದ್ದಿಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ನಗರದ ಜನರೇ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

Quote - ಇದು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರ. ಗುತ್ತಿಗೆದಾರರ ರಕ್ತ ಹೀರುವ ಸರ್ಕಾರವಾಗಿದೆ. ಸಿ.ಎನ್.ಅಶ್ವತ್ಥ ನಾರಾಯಣ ಶಾಸಕ

Cut-off box - ‘ಅಧಿಕಾರಿ ಸಾವಿಗೆ ಸರ್ಕಾರ ಕಾರಣ’ ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವರೇ ಕಾರಣ. ₹187 ಕೋಟಿ ಹಗರಣ ನಡೆದಿದ್ದು ಇದಕ್ಕೆ ಯಾರೆಲ್ಲ ಕಾರಣವೆಂದು ಅಧಿಕಾರಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಲೂಟಿ ನಡೆದಿದೆ. ಹಣ ಲೂಟಿ ಹೊಡೆದ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಹಿಂದೆ ಕಾಂಗ್ರೆಸ್‌ ಕೆ.ಎಸ್‌.ಈಶ್ವರಪ್ಪ ಅವರ ರಾಜೀನಾಮೆ ಕೇಳಿತ್ತು. ಈಗ ಸಚಿವರು ಮುಖ್ಯಮಂತ್ರಿ ರಾಜೀನಾಮೆ ಕೊಡಲಿ’ ಎಂದು ಆರ್‌.ಅಶೋಕ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT