ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್ಪಸಂಖ್ಯಾತರಿಗೆ ಅನುದಾನದ ಭರವಸೆ: ಬಿಜೆಪಿ ಪ್ರತಿಭಟನೆ

ಜಂಟಿ ಹೋರಾಟಕ್ಕೆ ಕೈಜೋಡಿಸದ ಜೆಡಿಎಸ್‌
Published 6 ಡಿಸೆಂಬರ್ 2023, 15:52 IST
Last Updated 6 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ವಿಧಾನಸಭೆ: ‘ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗ ಅಲ್ಪಸಂಖ್ಯಾತರಿಗೆ ₹ 10,000 ಕೋಟಿ ಅನುದಾನ ನೀಡುವುದಾಗಿ ಸದನದ ಹೊರಗೆ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ. ಸುನೀಲ್‌ ಕುಮಾರ್‌, ‘ಅಧಿವೇಶನ ನಡೆಯುತ್ತಿರುವಾಗ ಮುಖ್ಯಮಂತ್ರಿಯವರು ಯಾವುದೋ ಸಭೆ, ಸಮಾರಂಭದಲ್ಲಿ ₹ 10,000 ಕೋಟಿ ಅನುದಾನ ಘೋಷಿಸಿದ್ದಾರೆ. ಸದನಕ್ಕೆ ಬೆಲೆ ಇಲ್ಲವೆ? ಸದನದ ಹಕ್ಕುಚ್ಯುತಿ ಆಗಿದ್ದು, ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

‘ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಹಾರ ಕೊಡಿ ಎಂದರೆ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತೀರಿ. ಮುಸ್ಲಿಮರಿಗೆ ₹ 10,000 ಕೋಟಿ ಕೊಡಲು ಎಲ್ಲಿದೆ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಕೇಳಿದರು.

ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ನಾನು ಆ ಸಭೆಯಲ್ಲಿದ್ದೆ. ಮುಖ್ಯಮಂತ್ರಿಯವರು ಹಾಗೆ ಹೇಳಿಲ್ಲ. ಹಂತ ಹಂತವಾಗಿ ₹ 10,000 ಕೋಟಿಯಷ್ಟು ಅನುದಾನ ಒದಗಿಸುವುದಾಗಿ ಹೇಳಿದ್ದಾರೆ. ಅವರಿಂದ ಯಾವ ನಿಯಮ ಉಲ್ಲಂಘನೆಯೂ ಆಗಿಲ್ಲ’ ಎಂದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್‌ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‌ನ ಹಲವರು ಮುಖ್ಯಮಂತ್ರಿಯವರ ಹೇಳಿಕೆಯನ್ನು ಬೆಂಬಲಿಸಿದರು. 

‘ಸಿದ್ದರಾಮಯ್ಯ ಹೇಳಿರುವುದು ನಿಜ. ನಾನು ವಿಡಿಯೊ ತುಣುಕನ್ನು ವೀಕ್ಷಿಸಿದ್ದೇನೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. ಅವರ ಹೇಳಿಕೆ ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಗದ್ದಲಕ್ಕೆ ಇಳಿದರು.

ಸಿಟ್ಟಾದ ಅಶೋಕ, ‘ನೀವು 135 ಜನ ಇರಬಹುದು. ನಾವೂ 85 ಜನರಿದ್ದೇವೆ. ನಮ್ಮ ತಾಕತ್ತನ್ನೂ ತೋರಿಸುತ್ತೇವೆ. ಮುಖ್ಯಮಂತ್ರಿಯವರು ಮಾತನಾಡುವಾಗ ಅಡ್ಡಿಪಡಿಸಲು ಗೊತ್ತು’ ಎಂದು ಸವಾಲು ಹಾಕಿದರು.

ತಾಕತ್ತಿನ ಮಾತು ವಾಕ್ಸಮರಕ್ಕೆ ಕಾರಣವಾಯಿತು. ಗದ್ದಲದ ಮಧ್ಯೆಯೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT