ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ತಿರಂಗಾ ಯಾತ್ರೆ: ಕಾರ್ಯಕರ್ತರು ವಶಕ್ಕೆ

Published 4 ಮಾರ್ಚ್ 2024, 19:32 IST
Last Updated 4 ಮಾರ್ಚ್ 2024, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಂಬ್ ಸ್ಫೋಟ ಹಾಗೂ ಪಾಕಿಸ್ತಾನ್ ಪರ ಘೋಷಣೆ ಘಟನೆಗಳನ್ನು ಖಂಡಿಸಿ’ ನಗರದಲ್ಲಿ ತಿರಂಗಾ ಯಾತ್ರೆ ನಡೆಸಲು ಮುಂದಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದು, ಸಂಜೆ ಬಿಟ್ಟು ಕಳುಹಿಸಿದ್ದಾರೆ.

ನಗರದ ಪುರಭವನ ಎದುರು ಸೇರಿದ್ದ ಕಾರ್ಯಕರ್ತರು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ತಿರಂಗಾ ಯಾತ್ರೆ ನಡೆಸಲು ಸಿದ್ಧರಾಗಿದ್ದರು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಧೀರಜ್ ಮುನಿರಾಜು, ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಪುರಭವನ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಸ್ಥಳದಲ್ಲಿದ್ದ ಪೊಲೀಸರು, ‘ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಯಾವುದೇ ಭಾಗದಲ್ಲಿ ಪ್ರತಿಭಟನೆ ಹಾಗೂ ರ‍್ಯಾಲಿ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಹೈಕೋರ್ಟ್ ಆದೇಶವಿದೆ. ನಿಮ್ಮ ತಿರಂಗಾ ಯಾತ್ರೆಗೆ ಅನುಮತಿ ಇಲ್ಲ. ದಯವಿಟ್ಟು ಯಾತ್ರೆ ಕೈಬಿಡಿ’ ಎಂದು ಕೋರಿದರು.

ಅದಕ್ಕೆ ಒಪ್ಪದ ಕಾರ್ಯಕರ್ತರು, ‘ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ, ನಮ್ಮ ಯಾತ್ರೆ ತಡೆಯಲು ಬಂದಿದ್ದಿರಾ’ ಎಂದು ಪ್ರಶ್ನಿಸಿದರು. ಬಳಿಕ, ಕಾರ್ಯಕರ್ತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದರು.

ರಾಷ್ಟ್ರಧ್ವಜ ಕಸಿದುಕೊಂಡು ಹೋದ ಪೊಲೀಸರು: ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ‘ಶಾಂತಿಯುತವಾಗಿ ನಡೆಸಲಾಗುತ್ತಿದ್ದ ಯಾತ್ರೆಯನ್ನು ಪೊಲೀಸರು ಅಕ್ರಮವಾಗಿ ತಡೆದಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ಕುಮ್ಮಕು ಇದೆ. ಪೊಲೀಸರು ನಮ್ಮ ಬಳಿಯ ರಾಷ್ಟ್ರಧ್ವಜವನ್ನು ಕಸಿದುಕೊಂಡು, ಅಗೌರವದಿಂದ ನಡೆದುಕೊಂಡಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT