ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾರ್ಖಾನೆ ಮಾಲೀಕರ ಬೆದರಿಸಿ ಸುಲಿಗೆ: ಮೂವರ ಬಂಧನ

Published 21 ಮಾರ್ಚ್ 2024, 17:11 IST
Last Updated 21 ಮಾರ್ಚ್ 2024, 17:11 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ಪದಾರ್ಥ ತಯಾರಿಕೆ ಕಾರ್ಖಾನೆ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರವಿಚಂದ್ರನ್, ರಮೇಶ್ ಹಾಗೂ ಪವನ್ ಕುಮಾರ್ ಬಂಧಿತರು. ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿ ಹೆಸರಿನಲ್ಲಿ ಆರೋಪಿಗಳು ಕಾರ್ಖಾನೆ ಮಾಲೀಕರನ್ನು ಬೆದರಿಸಿದ್ದರು. ಬಂಧಿತರಿಂದ ₹ 1,870 ನಗದು, ಮೂರು ಮೊಬೈಲ್ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಕಾರ್ಖಾನೆಯೊಂದಕ್ಕೆ ಮಾರ್ಚ್ 18ರಂದು ಹೋಗಿದ್ದ ಆರೋಪಿಗಳು, ‘ಕೆಲಸಗಾರರು ತಲೆಗೆ ಯಾವುದೇ ಸುರಕ್ಷಿತ ಟೋಪಿ ಧರಿಸಿಲ್ಲ. ಕೂದಲುಗಳು ಆಹಾರ ಪದಾರ್ಥದಲ್ಲಿ ಸೇರ್ಪಡೆಯಾಗುತ್ತಿವೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆಯಾಗಲಿದೆ’ ಎಂದಿದ್ದರು. ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಮಾಲೀಕರನ್ನು ಬೆದರಿಸಿದ್ದರು.’

‘ಪ್ರಕರಣ ದಾಖಲಿಸಬಾರದೆಂದರೆ ಹಣ ನೀಡುವಂತೆ ಆರೋಪಿಗಳು ಬೇಡಿಕೆ ಇರಿಸಿದ್ದರು. ಹೆದರಿದ್ದ ಮಾಲೀಕ, ₹6 ಸಾವಿರ ನೀಡಿದ್ದರು. ಸ್ಥಳದಿಂದ ಹೊರಟು ಹೋಗಿದ್ದ ಆರೋಪಿಗಳು, ಮಾರ್ಚ್ 20ರಂದು ಪುನಃ ಕಾರ್ಖಾನೆಗೆ ಬಂದಿದ್ದರು. ₹9 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಹಣವಿಲ್ಲವೆಂದು ಹೇಳಿದ್ದ ಮಾಲೀಕ, ₹4 ಸಾವಿರ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಅನುಮಾನಗೊಂಡ ಮಾಲೀಕ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮಾನವ ಹಕ್ಕುಗಳ ರಕ್ಷಣಾ ಸಮಿತಿ ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿ ಹೆಸರಿನಲ್ಲಿ ಆರೋಪಿಗಳು ಹಲವರನ್ನು ಬೆದರಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT