ಗುರುವಾರ , ನವೆಂಬರ್ 21, 2019
20 °C

‘ಬಿರುದು ನೀಡುವುದು ಸರ್ಕಾರದ ಕೆಲಸವಲ್ಲ’

Published:
Updated:
Prajavani

ಬೆಂಗಳೂರು: ಕರ್ನಾಟಕದಲ್ಲಿ ಟಿಪ್ಪು ವಿಷಯ ಪಠ್ಯದಿಂದ ತೆಗೆಯುವ ಚರ್ಚೆ ನಡೆಯುತ್ತಿದ್ದರೆ, ರಾಜಸ್ಥಾನದಲ್ಲಿ ಸಾವರ್ಕರ್‌ ಹೆಸರಿನ ಹಿಂದಿರುವ ‘ವೀರ’ ಎಂಬ ಬಿರುದನ್ನು ಪಠ್ಯದಿಂದ ತೆಗೆಯಲಾಗಿದೆ. ಈ ವಿಚಾರಗಳೆರಡೂ ಸಾಹಿತ್ಯ ಉತ್ಸವದಲ್ಲಿ ಮುನ್ನೆಲೆಗೆ ಬಂದವು. 

‘ಸಾವರ್ಕರ್‌: ಮಿಸ್‌ಅಂಡರ್‌ಸ್ಟುಡ್‌ ಮೆಸಾಯ’ ಕೃತಿಯ ಕುರಿತ ಸಂವಾದದಲ್ಲಿ ವಿಚಾರ ಪ್ರಸ್ತಾಪಿಸಿದ ಲೇಖಕ ವಿಕ್ರಮ್‌ ಸಂಪತ್‌, ‘ಟಿಪ್ಪು ಸುಲ್ತಾನ್‌ ವಿಷಯನ್ನು ಪಠ್ಯದಿಂದ ತೆಗೆಯುವ ವಿಚಾರ ಮೂರ್ಖತನ. ಸಾವರ್ಕರ್‌ ಅವರನ್ನು ವೀರ್‌ ಸಾವರ್ಕರ್‌ ಎಂದೇ ಕರೆಯುತ್ತಿದ್ದರು. ವ್ಯಕ್ತಿಯೊಬ್ಬನ ಹೆಸರಿನ ಹಿಂದೆ ಅಥವಾ ಮುಂದೆ ಬಿರುದು ಸೇರಿಸುವುದು ಸರ್ಕಾರ ಅಥವಾ ರಾಜಕೀಯ ಪಕ್ಷಗಳಕೆಲಸವಲ್ಲ. ಬ್ರಿಟಿಷರು ಸಾವರ್ಕರ್‌ ಲೇಖನಿಗೆ ಹೆದರುತ್ತಿದ್ದರು. ಬಿಡುಗಡೆಗೊಳಿಸಿದರೆ ಮತ್ತೆಲ್ಲಿ ಕ್ರಾಂತಿ ಎಬ್ಬಿಸುತ್ತಾನೋ ಎಂಬ ಭಯ ಅವರಲ್ಲಿತ್ತು. ಸ್ವಾತಂತ್ರ್ಯ ಹೋರಾಟಗಾರರು ಜೈಲಿನಲ್ಲಿ ಅನುಭವಿಸಿದ ಸಂಕಷ್ಟಗಳ ಬಗ್ಗೆ ಪಠ್ಯದಲ್ಲಿ ಉಲ್ಲೇಖವಿಲ್ಲ’ ಎಂದರು.

ಯಾರೂ ಅರ್ಥೈಸಿಕೊಂಡಿಲ್ಲ: ‘ಸಾವರ್ಕರ್‌ ಅವರನ್ನು ಒಪ್ಪುವವರು ಹಾಗೂ ವಿರೋಧಿಸುವವರಿಗೆ ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಚುನಾವಣೆ ಬಂದಾಗ ಸಾವರ್ಕರ್‌ ಬಿಸಿ ಬಿಸಿ ಚರ್ಚೆಯ ವಿಷಯವಾಗುತ್ತಾರೆ. ಎಡಪಂಥೀಯರು ಹಾಗೂ ಬಲಪಂಥೀಯರೂ ಸಾವರ್ಕರ್‌ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸಾವರ್ಕರ್‌ ಅವರನ್ನು ಎಷ್ಟು ಅರ್ಥೈಸಿಕೊಳ್ಳಬೇಕಾಗಿತ್ತೋ, ಅಷ್ಟನ್ನು ಬಲಪಂಥೀಯರು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜಾತಿ ವ್ಯವಸ್ಥೆ, ದನದ ಬಗ್ಗೆ ಸಾವರ್ಕರ್‌ ಹೊಂದಿದ್ದ ನಿಲುವನ್ನು ಇವರು ಒಪ್ಪುವುದಿಲ್ಲ. ತಮಗೆ ಬೇಕಾದ ತರ್ಕವನ್ನು ಮುಂದಿಟ್ಟುಕೊಂಡು ಸಮರ್ಥಿಸಿಕೊಳ್ಳುತ್ತಾರೆ. ಸಾವರ್ಕರ್‌ ಬರಹಗಳು ಮರಾಠಿಯಲ್ಲಿದ್ದು, ಎಡಪಂಥೀಯರೂ ಇವುಗಳನ್ನು ಓದಿ ಅರ್ಥೈಸಿಕೊಂಡಿಲ್ಲ’ ಎಂದು ಅವರು ಹೇಳಿದರು.   

‘ಭಾರತರತ್ನ ಯಾರಿಗೆ ಸಿಗಬೇಕು, ಯಾರಿಗೆ ಸಿಗಬಾರದು ಎನ್ನುವುದರ ಬಗ್ಗೆ ನಿರ್ಧರಿಸಲು ನಾವು ಯಾರು. ಇಂತಹ ಅತ್ಯುನ್ನತ ಪ್ರಶಸ್ತಿಗಳು ಕುಟುಂಬ, ಸಿದ್ಧಾಂತವನ್ನು ಮೀರಿ ನಿಲ್ಲಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಅನ್‌ಬ್ರೋಕನ್‌’ನಲ್ಲಿ ಛಲದ ಕಥೆ
‘ನನ್ನಿಂದ ಕೆಲ ಅಡಿ ದೂರದಲ್ಲಿ ಬಾಂಬ್‌ ಸಿಡಿದಿತ್ತು. ಅದರ ತೀವ್ರತೆಗೆ ಫುಟ್‌ಬಾಲ್‌ನಂತೆ 20 ಮೀಟರ್‌ ದೂರಕ್ಕೆ ಎಸೆಯಲ್ಪಟ್ಟಿದ್ದೆ. ಬೆಂಕಿಗೆ ಮೈಮೇಲಿನ ಬಟ್ಟೆ ಅರ್ಧ ಸುಟ್ಟು, ಚರ್ಮಕ್ಕೆ ಅಂಟಿಕೊಂಡಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ನನಗೆ ಆ ಕ್ಷಣ ಮನಸ್ಸಿನಲ್ಲಿ ತೋಚಿದ್ದು, ಪ್ರೀತಿಯ ಸಂದೇಶ ಹೊತ್ತು ತಂದ ಮನುಷ್ಯರೇ ಇಂತಹ ಹೇಯ ಕೃತ್ಯವೆಸಗಲು ಹೇಗೆ ಸಾಧ್ಯ ಎಂಬುದು...’

ಬೆಲ್ಜಿಯಂನ ಬ್ರುಸೆಲ್ಸ್‌ನ ವಿಮಾನ ನಿಲ್ದಾಣದಲ್ಲಿ 2016 ಮಾರ್ಚ್‌ 22ರಂದು ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಬದುಕುಳಿದ ಪಂಜಾಬ್‌ ಮೂಲದ ನಿಧಿ ಚಾಪ್ಹೇಕರ್‌ ಮಾತುಗಳಿವು.

ಸಾಹಿತ್ಯೋತ್ಸವದಲ್ಲಿ ಅನುಭವ ಹಂಚಿಕೊಂಡ ನಿಧಿ, ‘ಸಾಧಿಸುವ ಛಲವಿದ್ದರೆ ಎಂಥ ಘಟನೆಗಳಿಂದಾದರೂ ಹೊರಬರಬಹುದು. ಘಟನೆ ನಂತರ 24ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದೇನೆ. ದೇಹದಲ್ಲಿ ಇನ್ನೂ ಉಕ್ಕಿನ ಸರಳುಗಳಿವೆ. ಶಸ್ತ್ರಚಿಕಿತ್ಸೆ ವೇಳೆ ಕುಟುಂಬ ಸದಸ್ಯರ ಜತೆ ನಾನು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಒಬ್ಬಂಟಿಯಾಗಿ ಹೋಗಿ ದಾಖಲಾಗುತ್ತಿದ್ದೆ. ನಾವು ನಮ್ಮ ಆತ್ಮವನ್ನು ಬಿಟ್ಟಾಗ ‘ಕಳೇಬರ’ ಆಗುತ್ತೇವೆಯೇ ವಿನಃ ಆತ್ಮ ನಮ್ಮ ದೇಹವನ್ನು ಬಿಟ್ಟಾಗಲ್ಲ. ಬದಲಾವಣೆ ತರುವಂಥ ವಿಶ್ವಾಸ ಎಲ್ಲರಲ್ಲೂ ಇರಬೇಕು’ ಎಂದರು.

ಜನರಿಗೆ ‘ಐಟಿ’ಹಾಸದ ಪಾಠ
ಐಟಿ ಸಿಟಿ ಬೆಂಗಳೂರು ಸೇರಿದಂತೆ ದೇಶದಲ್ಲಿ ಐಟಿ ಕ್ಷೇತ್ರದ ಇತಿಹಾಸದ ಬಗ್ಗೆ ಸಂಪೂರ್ಣ ವಿವರ ಕೈಬೆರಳ ತುದಿಯಲ್ಲೇ ಲಭ್ಯವಿದೆ. ಇದರ ಪ್ರಾತ್ಯಕ್ಷಿಕೆ ಸಾಹಿತ್ಯೋತ್ಸವಕ್ಕೆ ಬಂದ ಜನರಿಗೆ ದೊರೆಯಿತು. ಕ್ರಿಸ್‌ ಗೋಪಾಲಕೃಷ್ಣನ್‌ ರೂಪಿಸಿರುವಂತಹ ‘ಇತಿಹಾಸ’, ಹಿಸ್ಟರಿ ಆಫ್‌ ಇಂಡಿಯನ್‌ ಐಟಿ ಆ್ಯಪ್‌ನಲ್ಲಿ ಆರು ದಶಕಗಳ ಹಿಂದೆ ಸ್ಥಾಪನೆಯಾದ ಮೊದಲ ಕಂಪ್ಯೂಟರ್‌ನಿಂದ ಹಿಡಿದು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಸ್ತುತ ಬೆಳವಣಿಗೆ, ಭವಿಷ್ಯದ ಬಗ್ಗೆ ವಿವರಗಳಿವೆ. ಐಟಿ ಕ್ಷೇತ್ರದ 44 ದಿಗ್ಗಜರ ಅನುಭವ, ನೂರಾರು ಐಟಿ ಸಂಸ್ಥೆಗಳ ವಿವರ ಇದರಲ್ಲಿ ಲಭ್ಯ.

ವಡೆನ ‘ವಡಾ’ ಮಾಡಿದ್ರಿ...
ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಕನ್ನಡೇತರರಿಗೆ ಕನಿಷ್ಠ ಕೆಲ ಕನ್ನಡ ವಾಕ್ಯವನ್ನಾದರೂ ಕಲಿಸಬೇಕು ಎನ್ನುವ ಉದ್ದೇಶದಿಂದ ‘ನಮ್ದು ಕೆ’ ತಂಡದ ಯುವಕರು ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. 

‘ಬೆಂಗಳೂರಿನಲ್ಲಿರುವ ಕನ್ನಡಿಗ ಕನಿಷ್ಠ 5–6 ಭಾಷೆ ಕಲಿತಿರಬೇಕು. ಬೆಳಗ್ಗೆ ಕ್ಷೌರದಂಗಡಿಗೆ ಹೋದರೆ ಹಿಂದಿ, ಕಚೇರಿಗೆ ಹೋದರೆ ತೆಲುಗು ಅಥವಾ ತಮಿಳ್‌, ಸಂಜೆ ತಿಂಡಿಗೆ ಹೋದರೆ ಮತ್ತೊಂದು ಭಾಷೆ.. ಆದರೆ, ಕನ್ನಡೇತರರು ‘ಕನ್ನಡ್‌ ಗೊತ್ತಿಲ್ಲ’ ಎಂಬ ಎರಡು ಪದ ಕಲಿತರೆ ಸಾಕು. ಇವರು ದೋಸೆಯನ್ನು ದೋಸಾ ಮಾಡಿದ್ರು, ವಡೆಯನ್ನು ವಡಾ ಮಾಡಿದ್ರು, ದೀಪಿಕಾ ಪಡುಕೋಣೆಯನ್ನು ‘ಪಡುಕೋಣ್‌’ ಮಾಡಿದ್ರು, ಹಾಗೇ ಕನ್ನಡವನ್ನು ಕನ್ನಡ್‌ ಮಾಡಿದ್ರು’... ಹೀಗೆ ತಂಡದ ಸದಸ್ಯರು ಹಾಸ್ಯದ ಮೂಲಕ ಕನ್ನಡೇತರರಿಗೆ ಕನ್ನಡ ಕಲಿಸುವ ಮಹತ್ವವನ್ನು ಸಾರಿದರು.  

ಪ್ರತಿಕ್ರಿಯಿಸಿ (+)