ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ ದಾನಿಗಳ ಕೊರತೆ: ಬಿಎಂಎಸ್‌ಟಿ ಫೌಂಡೇಷನ್

ವಿಶ್ವ ರಕ್ತ ಕ್ಯಾನ್ಸರ್ ದಿನದ ಪ್ರಯುಕ್ತ ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ಜಾಗೃತಿ
Published 28 ಮೇ 2024, 16:02 IST
Last Updated 28 ಮೇ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ರಕ್ತ ಕ್ಯಾನ್ಸರ್ ದಿನದ ಪ್ರಯುಕ್ತ ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ನಗರದಲ್ಲಿ ರಕ್ತದ ಕ್ಯಾನ್ಸರ್ ಹಾಗೂ ರಕ್ತದ ಆಕರ ಕೋಶ (ಬ್ಲಡ್ ಸ್ಟೆಮ್ ಸೆಲ್) ದಾನದ ಬಗ್ಗೆ ಜಾಗೃತಿ ಮೂಡಿಸಿತು.  

ನಗರದ ಮಾಲ್‌ಗಳಲ್ಲಿ ಫೌಂಡೇಷನ್ ಸದಸ್ಯರು ಭಿತ್ತಿ ಪತ್ರ ಪ್ರದರ್ಶನ, ನೃತ್ಯ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದರು. ಇದೇ ವೇಳೆ ರಕ್ತದ ಆಕರ ಕೋಶ ದಾನ ಮಾಡುವಂತೆಯೂ ನೆರದಿದ್ದವರಿಗೆ ಫೌಂಡೇಷನ್ ಸದಸ್ಯರು ಮನವಿ ಮಾಡಿಕೊಂಡು, ದಾನಿಗಳ ನೋಂದಣಿ ಅಭಿಯಾನವನ್ನೂ ನಡೆಸಿದರು. ಜನರಿಗೆ ರಕ್ತ ಕ್ಯಾನ್ಸರ್ ಕುರಿತ ಪ್ರಶ್ನೆಗಳನ್ನೂ ಕೇಳಲಾಯಿತು.

ಈ ವೇಳೆ ಮಾತನಾಡಿದ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍, ‘ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷ ರಕ್ತದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಶೇ 0.09 ಮಂದಿ ಮಾತ್ರ ರಕ್ತದ ಆಕರ ಕೋಶ ದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ರಕ್ತ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ದಾನಿಗಳ ಕೊರತೆ ದೊಡ್ಡ ಸವಾಲಾಗಿದೆ. ರಕ್ತದ ಕ್ಯಾನ್ಸರ್‌ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರಕೋಶ ಸಹಾಯಕ. ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನ ಮಾಡುವ ಮೂಲಕ ರೋಗಿಗಳ ಚೇತರಿಕೆಗೆ ನೆರವಾಗಬೇಕು’ ಎಂದು ಹೇಳಿದರು.

‘ದಾನಿಗಳಿಂದ ಪಡೆದ ರಕ್ತದ ಆಕರ ಕೋಶಗಳನ್ನು ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ರಕ್ತದ ಆಕರಕೋಶ ಅಗತ್ಯವಿರುವ ರೋಗಿಗಳಿಗೆ ಕುಟುಂಬದಲ್ಲಿ ಹೊಂದಾಣಿಕೆಯಾಗಬಲ್ಲ ದಾನಿಗಳು ಸಿಗುವುದು ಶೇ 30 ರಷ್ಟು ಮಾತ್ರ. ಉಳಿದವರು ಸಂಬಂಧಿಗಳಲ್ಲದ ದಾನಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT