ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗೀರಥಿ ಹೆಗಡೆಗೆ ಶ್ರೀಮತಿ ಸರಳಾ ರಂಗನಾಥ್ ರಾವ್ ಪ್ರಶಸ್ತಿ ಪ್ರದಾನ

Last Updated 22 ಜನವರಿ 2023, 7:19 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ತ್ರೀವಾದ ಅಂದರೇ ಪುರುಷ ದ್ವೇಷವಲ್ಲ. ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಅನಿವಾರ್ಯ ಮತ್ತು ಅಗತ್ಯ. ಸ್ತ್ರೀವಾದ, ಪುರುಷವಾದ ಕ್ಕಿಂತ ಮಾನವತಾವಾದ ದೊಡ್ಡದು’ ಎಂದು ಲೇಖಕಿ ಭಾಗೀರಥಿ ಹೆಗಡೆ ಹೇಳಿದರು.

ಕವಿತಾ ಪ್ರಕಾಶನದ ಸಹಯೋಗದಲ್ಲಿ ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನವು ಶನಿವಾರ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ‘ಶ್ರೀಮತಿ ಸರಳಾ ರಂಗನಾಥ ರಾವ್ ಪ್ರಶಸ್ತಿ’ ಸ್ವೀಕರಿಸಿ, ಮಾತನಾಡಿದರು. ಈ ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ.

‘ನನಗೆ ಸ್ತ್ರೀವಾದಿ ಲೇಖಕಿ ಎನ್ನುತ್ತಾರೆ. ಹೆಣ್ಣು ಜೀವದ ಅನುಭವಗಳನ್ನು ನನ್ನ ಕೃತಿಯಲ್ಲಿ ಬರೆದಿರುವೆ. ನನ್ನ ‘ಕಾಲಾಂತರ’ ಕಾದಂಬರಿಯಲ್ಲಿ ಮೂರು ತಲೆಮಾರಿನ ಹೆಣ್ಣನ್ನು ಕಾಣಬಹುದು. ನನ್ನ ಬರಹಗಳಿಗೆ ಮೂಲ ಪ್ರೇರಣೆ ಬಾಲ್ಯದಿಂದ ಮನಸ್ಸಿನಲ್ಲಿ ಸಂಗ್ರಹವಾದ ನೆನಪುಗಳು. ನಾನು 5ನೇ ತರಗತಿ ಬಳಿಕ ಶಾಲೆಯನ್ನು ತೊರೆದಿದ್ದೆ. ಅಣ್ಣನ ಪ್ರೋತ್ಸಾಹದಿಂದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ತೇರ್ಗಡೆಯಾದೆ. ಸಂಪ್ರದಾಯದ ಹಾಡುಗಳನ್ನು ಅಮ್ಮ ಬರೆಯುತ್ತಿದ್ದರು. ನಾನೂ ಬರೆಯಲಾರಂಭಿಸಿದೆ. ಬಳಿಕ ಕವಿತೆ, ಕಥೆ, ಕಾದಂಬರಿಯನ್ನು ಬರೆದೆ’ ಎಂದು ಹೇಳಿದರು.

ಕವಿ ಎಚ್.ಎಸ್. ವೆಂಕಟೇಶಮೂರ್ತಿ ‘ಹೆಣ್ಣು ಮಕ್ಕಳು ಕಾದಂಬರಿ ಬರೆದಾಗ ತಮ್ಮ ಖಾಸಗಿ ಭಾಷಾ ವಲಯವನ್ನು ಬರವಣಿಗೆಯಲ್ಲಿ ಬಳಸುವುದು ಬಹಳ ಕಡಿಮೆ. ಭಾಗೀರಥಿ ಹೆಗಡೆ ಅವರು ಕಥೆಗಾರಿಕೆ ಹಾಗೂ ಭಾಷೆಯನ್ನು ಸಂಬಾಳಿಸಿಕೊಂಡು ಹೋಗಿದ್ದಾರೆ. ಹವ್ಯಕ ಕನ್ನಡದ ಚೆಲುವು ಅವರ ಕಾದಂಬರಿ ಓದಿದಾಗ ಮನವರಿಕೆಯಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿನಂದನಾ ಭಾಷಣ ಮಾಡಿದ ವಿಮರ್ಶಕಿ ಎಲ್.ಜಿ. ಮೀರಾ,
‘ಭಾಗೀರಥಿ ಹೆಗಡೆ ಅವರು 17 ಪುಸ್ತಕಗಳನ್ನು ಬರೆದಿದ್ದಾರೆ. ಈ ಕೃತಿಗಳ ಹಿಂದೆ ಅವರ ಜೀವನವಿದೆ. ಹಲವು ಸವಾಲುಗಳ ನಡುವೆ ಪುಸ್ತಕ ಬರೆಯಲು ಹರಸಾಹಸ ಪಟ್ಟಿದ್ದಾರೆ. ದಣಿವಿರದ, ಸಾಹಿತ್ಯ ಶ್ರಮಕ್ಕೆ ಈಗ ಅವರಿಗೆ ಗೌರವ ಸಿಕ್ಕಿದೆ’ ಎಂದು ಹೇಳಿದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ.ಎನ್. ರಂಗನಾಥ ರಾವ್ ಅವರ ‘ನಿನ್ನೆಯ ನಾಳೆಗಳು’ ಮತ್ತು ‘ಅಂತರ್ಯಾನ’ ಕೃತಿಗಳನ್ನು ಕಥೆಗಾರಮಾವಿನಕೆರೆ ರಂಗನಾಥನ್ ಲೋಕಾರ್ಪಣೆ ಮಾಡಿದರು. ಕೃತಿಗಳ ಬಗ್ಗೆ ವಿಮರ್ಶಕಿ ಎಂ.ಎಸ್. ಆಶಾದೇವಿ ಹಾಗೂ ಕವಿ ಚಿಂತಾಮಣಿ ಕೊಡ್ಲೆಕೆರೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT