ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣಪತ್ರ ಕೊಡಲ್ಲ, ವಜಾ ಮಾಡಿ: ಬಿಎಂಟಿಸಿ ನೌಕರರ ಅಸಮಾಧಾನ

ಬಿಎಂಟಿಸಿ ನಿರ್ಧಾರದ ವಿರುದ್ಧ ಹಿರಿಯ ನೌಕರರ ಅಸಮಾಧಾನ
Last Updated 11 ಏಪ್ರಿಲ್ 2021, 15:34 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಹಾಗೂ ದೈಹಿಕ ಕ್ಷಮತೆಯ ಪ್ರಮಾಣಪತ್ರ ಕೇಳುವ ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಲವಂತ ಮಾಡಲಾಗುತ್ತಿದೆ. ನಾವು ಪ್ರಮಾಣಪತ್ರ ಕೊಡುವುದಿಲ್ಲ. ಕಡ್ಡಾಯ ನಿವೃತ್ತಿ ಕೊಡಲಿ ಅಥವಾ ವಜಾ ಮಾಡಲಿ’

ಬಿಎಂಟಿಸಿ ವಿರುದ್ಧ ಹಿರಿಯ ಚಾಲಕರು ಮತ್ತು ನಿರ್ವಾಹಕರು ಹೀಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 55 ವರ್ಷ ಮೇಲ್ಪಟ್ಟ ನೌಕರರು ಸೋಮವಾರ ಸಂಜೆಯ ವೇಳೆಗೆ (ಏ.12) ವೈದ್ಯಕೀಯ ಮತ್ತು ದೈಹಿಕ ಕ್ಷಮತೆಯ ಪ್ರಮಾಣಪತ್ರ ನೀಡಬೇಕು ಎಂಬ ಬಿಎಂಟಿಸಿ ಸೂಚನೆಯ ವಿರುದ್ಧ ಹರಿಹಾಯ್ದಿದ್ದಾರೆ.

‘ನಾನು 32 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಯಾವ ವರ್ಷವೂ ಈ ಪ್ರಮಾಣಪತ್ರಗಳನ್ನು ಕೇಳಿರಲಿಲ್ಲ. ಸೇವೆಗೆ ಸೇರುವಾಗ ಕೇಳುವುದು ಸ್ವಾಭಾವಿಕ. ಆದರೆ, ಈಗ ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಇದನ್ನೆಲ್ಲ ಸರ್ಕಾರ ಮಾಡುತ್ತಿದೆ. ಭಾನುವಾರ ಬೆಳಿಗ್ಗೆಯಿಂದ 20ಕ್ಕೂ ಹೆಚ್ಚು ಸಲ ಕರೆ ಮಾಡಿದ್ದಾರೆ. ನಾನು ಪ್ರಮಾಣಪತ್ರ ಕೊಡುವುದಿಲ್ಲ’ ಎಂದು ಚಾಲಕ ಸಿ. ಮುನಿರಾಜ ‘ಪ್ರಜಾವಾಣಿ’ಗೆ ಹೇಳಿದರು.

‘ವಾಟ್ಸ್‌ಆ್ಯಪ್ ಅಥವಾ ಇ–ಮೇಲ್ ಮೂಲಕವಾಗಲಿ, ಮಕ್ಕಳ ಮೂಲಕವಾಗಿ ಪ್ರಮಾಣಪತ್ರ ಕೊಡಲು ಅವಕಾಶ ಕೊಡುತ್ತಿಲ್ಲ. ಖುದ್ದಾಗಿ ಬರಲು ಹೇಳುತ್ತಿದ್ದಾರೆ. ನಾವೇ ನೇರವಾಗಿ ಹೋದರೆ ನಮ್ಮನ್ನು ಕೂಡಿ ಹಾಕುತ್ತಾರೆ. ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹಾಕುತ್ತಾರೆ’ ಎಂದು ಅವರು ದೂರಿದರು.

‘ಬೆಸ್ಕಾಂ, ಬಿಡಿಎ, ಬಿಬಿಎಂಪಿ ಅಥವಾ ಜಲಮಂಡಳಿ ಯಾವುದೇ ಸಂಸ್ಥೆ ತೆಗೆದುಕೊಂಡರೂ ಆ ನೌಕರರಿಗೆ ನಮಗಿಂತ ಎರಡರಷ್ಟು ವೇತನವಿದೆ. 32 ವರ್ಷ ಕೆಲಸ ಮಾಡಿದರೂ ನಮಗೆ ₹50ಸಾವಿರ ಆಸುಪಾಸು ವೇತನವಿದೆ. ಇಷ್ಟೇ ವರ್ಷ ಸೇವೆ ಸಲ್ಲಿಸಿದವರಿಗೆ ಬೇರೆ ಇಲಾಖೆಯಲ್ಲಿ ₹1ಲಕ್ಷಕ್ಕೂ ಹೆಚ್ಚು ವೇತನವಿದೆ. ನ್ಯಾಯ ಕೇಳುವುದು ತಪ್ಪೇ’ ಎಂದು ಅವರು ಪ್ರಶ್ನಿಸಿದರು.

ಇತ್ಯರ್ಥಗೊಳಿಸಲಿ

‘ವಜಾ ಮಾಡಿದರೂ ಅಥವಾ ಕಡ್ಡಾಯ ನಿವೃತ್ತಿಗೊಳಿಸಿದರೂ ಹೆದರುವುದಿಲ್ಲ. ನಿವೃತ್ತಿ ನಂತರ ನಮಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಬೇಗ ನೀಡಲಿ. ಐದು ವರ್ಷ ಸೇವಾವಧಿ ಕಡಿಮೆಯಾದರೂ ಪರವಾಗಿಲ್ಲ, ನಿವೃತ್ತಿ ನಂತರ ಬರುವ ಹಣವನ್ನೇ ಬಂಡವಾಳ ಮಾಡಿಕೊಂಡು ಬೇರೆ ಏನಾದರೂ ಮಾಡುತ್ತೇವೆ’ ಎಂದು ಚಾಲಕರೊಬ್ಬರು ಹೇಳಿದರು.

‘30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಕಳೆದ ಒಂದು ವರ್ಷದಿಂದ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಕೆಲಸ ಮಾಡಬೇಕು.ಹಳೆಯ ಬಸ್‌ಗಳನ್ನು ಕೊಟ್ಟು ಓಡಿಸಲು ಹೇಳುತ್ತಾರೆ. ಸಂಸ್ಥೆಯನ್ನು ಖಾಸಗಿಯವರಿಗೆ ಕೊಡುವ ಉದ್ದೇಶದಿಂದಲೇ ಸರ್ಕಾರ ಹೀಗೆ ಮಾಡುತ್ತಿದೆ’ ಎಂದು ಅವರು ದೂರಿದರು.

‘ಲಿಖಿತ ಭರವಸೆ ನೀಡಿ–ಕೆಲಸಕ್ಕೆ ಬರುತ್ತೇವೆ’

‘ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಹೌದು. ಕೋವಿಡ್‌ನಿಂದ ಸರ್ಕಾರಕ್ಕೂ ಕಷ್ಟ ಆಗಿರಬಹುದು. 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಲಿ. ಅದರ ಅನುಷ್ಠಾನ ಒಂದು ವರ್ಷದ ನಂತರವಾದರೂ ಪರವಾಗಿಲ್ಲ. ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ’ ಎಂದು ಚಾಲಕ ಎಚ್. ನಾಗರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT