ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕರ ಪರಿಕಲ್ಪನೆ ಕನ್ನಡಕ್ಕೂ ಅಗತ್ಯ: ಬಸವರಾಜ ಕಲ್ಗುಡಿ

ಅಂಕಿತ ಪುಸ್ತಕದ ಕಾರ್ಯಕ್ರಮದಲ್ಲಿ ಬಸವರಾಜ ಕಲ್ಗುಡಿ ಅಭಿಮತ
Published 5 ಮೇ 2024, 22:55 IST
Last Updated 5 ಮೇ 2024, 22:55 IST
ಅಕ್ಷರ ಗಾತ್ರ

ಬೆಂಗಳೂರು: ‘ಯುರೋಪಿಯನ್ ಸಂಸ್ಕೃತಿಯಲ್ಲಿ ಭಾಷಾ ಸಂಪಾದಕರಿಗೆ ದೊಡ್ಡ ಪರಂಪರೆಯಿದೆ. ಗುಣಮಟ್ಟದ ಸಾಹಿತ್ಯ ಕೃತಿಗಳು ಹೊರಬರಲು, ಲೇಖಕರನ್ನು ಮುಂದಕ್ಕೆ ಕೊಂಡೊಯ್ಯಲು ಕನ್ನಡದಲ್ಲೂ ಭಾಷಾ ಸಂಪಾದಕರು ಅಗತ್ಯ’ ಎಂದು ವಿಮರ್ಶಕ ಬಸವರಾಜ ಕಲ್ಗುಡಿ ತಿಳಿಸಿದರು. 

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪದ್ಮರಾಜ ದಂಡಾವತಿ ಅವರ ‘... ಉಳಿದಾವ ನೆನಪು’, ಉದಯಕುಮಾರ ಹಬ್ಬು ಅವರ ‘ಚಂದ್ರಗುಪ್ತ ಮೌರ್ಯ’, ವೈ.ಜಿ. ಮುರಳೀಧರನ್ ಅವರ ‘ವಿಕ್ಟರ್ ಫ್ರಾಂಕಲ್’ ಹಾಗೂ ಮಹಾಬಲ ಸೀತಾಳಭಾವಿ ಅವರ ‘ಕಾಳಿದಾಸ ಮಹಾಕವಿಯ ಮೇಘದೂತ’ ಕೃತಿಗಳು ಬಿಡುಗಡೆಯಾದವು. 

ಈ ವೇಳೆ ಮಾತನಾಡಿದ ಕಲ್ಗುಡಿ, ‘ಪುಸ್ತಕದಲ್ಲಿ ಯಾವ ಅಂಶವನ್ನು ಮುಂದಕ್ಕೆ ತರಬೇಕೆಂದು ಸಂಪಾದಕರು ನಿರ್ಧರಿಸುತ್ತಾರೆ. ಇದರಿಂದಲೇ ಆಂಗ್ಲ ಸೇರಿ ವಿವಿಧ ಭಾಷೆಗಳಲ್ಲಿ ಅನೇಕರು ಪ್ರಸಿದ್ಧ ಲೇಖಕರಾಗಿದ್ದಾರೆ. ಕನ್ನಡದಲ್ಲಿ ಬರಹಗಾರರಿಗೆ ತಾವೇ ದೊಡ್ಡವರು ಎಂಬ ಅಹಂ ಇರುವುದರಿಂದ, ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲಿಯೂ, ಸಂಸ್ಕೃತದಲ್ಲಿಯೂ ತಾವು ಬರೆಯಬಲ್ಲೆವೆಂಬ ಮನೋಭಾವ ಹೊಂದಿರುವುದರಿಂದ ಇಲ್ಲಿ ಭಾಷಾ ಸಂಪಾದಕರ ಪರಿಕಲ್ಪನೆ ಇಲ್ಲ’ ಎಂದರು. 

‘ಕನ್ನಡದಲ್ಲಿ ಗಂಭೀರ ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿದ್ದ ನಿಯತಕಾಲಿಕೆಗಳು ನಿಂತುಹೋಗಿವೆ. ಕೆಲ ಪೀತ ಪತ್ರಿಕೆಗಳು ಹಣ ಪಡೆದು, ಸಾಹಿತ್ಯ ವಿಮರ್ಶೆಯ ಹೆಸರಿನಲ್ಲಿ ಕಳಪೆ ವಿಮರ್ಶೆಗಳನ್ನು ಪ್ರಕಟಿಸುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಬಡ್ತಿಗೋಸ್ಕರ ಸಂಶೋಧನಾ ವಿಮರ್ಶೆ, ಬರಹವನ್ನು ಹೊರತರಲಾಗುತ್ತಿದೆ’ ಎಂದು ಹೇಳಿದರು. 

ಹಲವು ಮಾಧ್ಯಮ ಲಭ್ಯ: ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕ ಕೆ.ಎನ್. ಶಾಂತಕುಮಾರ್, ‘ಬದಲಾದ ಕಾಲಘಟ್ಟದಲ್ಲಿ ಪುಸ್ತಕೋದ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಅಜಗಜಾಂತರ ಬದಲಾವಣೆಯಾಗಿದೆ. ದಿನಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಗಳ ಪ್ರಮಾಣ ಮತ್ತು ಗುಣಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂಬ ಆಕ್ಷೇಪ ಸಾಮಾನ್ಯವಾಗಿದೆ. ದಶಕಗಳ ಹಿಂದೆ ಹೊಸ ಪುಸ್ತಕಗಳ ಬಗ್ಗೆ ತಿಳಿದುಕೊಳ್ಳಲು ಬೇರೆ ಮಾಧ್ಯಮ ಇರಲಿಲ್ಲ. ಆದರೆ, ಈಗ ಅಂತರ್ಜಾಲ ಆಧಾರಿತ ಹಲವು ಮಾಧ್ಯಮಗಳು ಲೇಖಕರು, ವಿಮರ್ಶಕರು ಹಾಗೂ ಪ್ರಕಾಶಕರಿಗೆ ಸಿಕ್ಕಿವೆ. ಪುಸ್ತಕೋದ್ಯಮ ಬೆಳೆದಿರುವ ಕಾರಣ ವಾರದಲ್ಲಿ 20–30 ಪುಸ್ತಕಗಳು ಪ್ರಕಟವಾಗುತ್ತಿವೆ. ಇದರಿಂದಾಗಿ ದಿನಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಗಳಿಗೆ ಅಷ್ಟಾಗಿ ಆದ್ಯತೆ ಸಿಗುತ್ತಿಲ್ಲ’ ಎಂದರು. 

‘ದಿನಪತ್ರಿಕೆಗೆ ಸಾಮಾನ್ಯ ಓದುಗರ ವರ್ಗ ದೊಡ್ಡದಿರುತ್ತದೆ. ಆದ್ದರಿಂದ ಪುಸ್ತಕ ವಿಮರ್ಶೆಯು ಓದಿನ ಸರಳ ಚಿತ್ರಣ ನೀಡಬೇಕಾಗುತ್ತದೆ. ಓದುಗನೊಬ್ಬನ ರಸಾನುಭವದ ನಿರ್ಮಿತಿಯಾದರೆ ಸಾಕಾಗುತ್ತದೆ. ಶಾಸ್ತ್ರೀಯವಾದ, ಪಾಂಡಿತ್ಯಪೂರ್ಣ ವಿಮರ್ಶೆ ಸಾಹಿತ್ಯದ ಬೆಳವಣಿಗೆಗೆ ಅಗತ್ಯ. ಅವುಗಳು ವಿಶ್ವವಿದ್ಯಾಲಯದ ಪತ್ರಿಕೆಗಳು, ಸಾಹಿತ್ಯಿಕ ನಿಯತಕಾಲಿಕೆಗಳು ಹಾಗೂ ಬೇರೆ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಾಕೆನಿಸುತ್ತದೆ‘ ಎಂದರು. 

 ಬಿಡುಗಡೆಯಾದ ಕೃತಿಗಳ ಬಗ್ಗೆ ಲೇಖಕ ಜಗದೀಶ ಶರ್ಮ ಸಂಪ ಮಾತನಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT