ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ದೇಶ ಮರೆತ ಪುಸ್ತಕ ಪ್ರಾಧಿಕಾರ: ವಿದ್ವಾಂಸ ಹಿ.ಚಿ.ಬೋರಲಿಂಗಯ್ಯ ಬೇಸರ

ಜಾನಪದ ವಿದ್ವಾಂಸ ಹಿ.ಚಿ.ಬೋರಲಿಂಗಯ್ಯ - ವಿವಿಧ ಲೇಖಕರ 8 ಪುಸ್ತಕಗಳು ಬಿಡುಗಡೆ
Published 23 ಡಿಸೆಂಬರ್ 2023, 15:21 IST
Last Updated 23 ಡಿಸೆಂಬರ್ 2023, 15:21 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಸ್ತಕ ಸಂಸ್ಕೃತಿಯನ್ನು ಸದೃಢಗೊಳಿಸಬೇಕಾದ ಕನ್ನಡ ಪುಸ್ತಕ ಪ್ರಾಧಿಕಾರವು ಮೂಲ ಉದ್ದೇಶದಿಂದ ವಿಮುಖವಾಗಿ, ಪುಸ್ತಕ ಪ್ರಕಟಣೆಗೆ ಸೀಮಿತವಾಗಿರುವುದು ಖಂಡನೀಯ’ ಎಂದು ಜಾನಪದ ವಿದ್ವಾಂಸ ಹಿ.ಚಿ.ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು. 

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 8 ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ಪುಸ್ತಕ ಪ್ರಾಧಿಕಾರವು ಲೇಖಕರು, ಪ್ರಕಾಶಕರು ಮತ್ತು ಓದುಗರ ನಡುವೆ ಸಮನ್ವಯ ಸಾಧಿಸಿ, ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಇದು ಕನ್ನಡ ಭಾಷೆಯ ಸೃಜನಶೀಲತೆಗೆ ಸಾಕ್ಷಿ. ಪ್ರಕಟಗೊಂಡ ವರ್ಷವೇ ಆ ಪುಸ್ತಕಗಳನ್ನು ಜನರಿಗೆ ತಲುಪಿಸುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ. ವಿವಿಧ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ವೆಚ್ಚ ಮಾಡುವ ಸರ್ಕಾರ, ಪುಸ್ತಕ ಖರೀದಿಗೆ ಅಗತ್ಯವಿರುವ ₹ 10 ಕೋಟಿ ಹಣ ನೀಡಲು ಹಿಂದೆ ಮುಂದೆ ನೋಡುತ್ತಿರುವುದು ನಮ್ಮ ವ್ಯವಸ್ಥೆಯ ಜ್ಞಾನ ದಾರಿದ್ರ‍್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ‘ಪುಸ್ತಕ ಸಂಸ್ಕೃತಿ ಸಮಾಜದ ಮೌಢ್ಯವನ್ನು ಅಳಿಸಲು ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಹಕಾರಿ. ಒಂದು ತಲೆಮಾರಿನ ಅನುಭವ, ಜ್ಞಾನವನ್ನು ಇನ್ನೊಂದು ತಲೆಮರಿಗೆ ತಲುಪಿಸುವ ಸಾಧನ ಪುಸ್ತಕ. ಸಂಕಷ್ಟದಲ್ಲಿರುವ ಪುಸ್ತಕೋದ್ಯಮದ ಸಮಸ್ಯೆಗಳನ್ನು ಆಳುವವರು ಗಮನಿಸಬೇಕು’ ಎಂದರು.

ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಪುಸ್ತಕಗಳನ್ನು ಖರೀದಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ₹ 10 ಕೋಟಿ‌ ಅನುದಾನವನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರು. ಆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಅನಗತ್ಯ ಕಾರಣಗಳನ್ನು ಕೇಳಿ ಸತಾಯಿಸುತಿದೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ತಕ್ಷಣ ಹಣ ಬಿಡುಗಡೆ ಮಾಡಿಸಬೇಕು’ ಎಂದು ಮನವಿ ಮಾಡಿದರು.

ಬಿಡುಗಡೆಯಾದ ಪುಸ್ತಕಗಳು

ಆರ್.ಕೆ. ಮಧುಕರ್ ಅವರ ‘ದೇಶ ವಿದೇಶದ ಅದ್ಭುತ ಲೋಕಕಥೆಗಳು’ (ಸಪ್ನ ಬುಕ್ ಹೌಸ್) ಕೆ.ನಟರಾಜ್ ಅವರ ‘ದುಬೈ ನಾಡಿನಲ್ಲಿ ಇಪ್ಪತ್ತು ದಿನಗಳು’ (ಸುಧನ್ವ ಪಬ್ಲಿಕೇಷನ್ಸ್) ಎಸ್.ಆರ್. ವಿಜಯಶಂಕರ್ ಅವರ ‘ಒಡನಾಟ’ (ವಸಂತ ಪ್ರಕಾಶನ) ಮಂಡಗದ್ದೆ ಶ್ರೀನಿವಾಸಯ್ಯ ಅವರ ‘ಸ್ವಾಮಿ ವಿವೇಕಾನಂದ’ (ನಿರಂತರ) ಶ್ರೀಧರ್ ರಾಮಲಿಂಗಪ್ಪ ಅವರ ‘ಅಸ್ತಿಯೋ ಅಸ್ತಿತ್ವವವೋ’ (ನಿರಂತರ) ಶ್ರೀಧರ್ ಎಚ್.ಜಿ. ಅವರ ‘ನೆನಪಾಗಿ ಉಳಿದವರು’ (ಅನ್ನಪೂರ್ಣ ಪಬ್ಲಿಷಿಂಗ್ ಹೌಸ್) ನಿಡಸಾಲೆ ಪುಟ್ಟಸ್ವಾಮಯ್ಯ ಅವರ ‘ಬೆಳೆಯೋಣ ಬನ್ನಿ’ (ಗೀತಾಂಜಲಿ ಪಬ್ಲಿಕೇಷನ್ಸ್) ಹಾಗೂ ಬಿ.ದಿವ್ಯಾನಂದಮೂರ್ತಿ ಅವರ ‘ಅನುಭವದ ಜೇನಹನಿ ಅಮೃತದ ಸಂಜೀವಿನಿ’ (ಸ್ನೇಹ ಬುಕ್ ಹೌಸ್) ಪುಸ್ತಕಗಳು ಬಿಡುಗಡೆಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT