ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಯೂರಿಟಿ ಏಜೆನ್ಸಿಗಳಿಂದ ಶಿಕ್ಷಕರ ನಿಯೋಜನೆ ರದ್ದು

ಬಿಬಿಎಂಪಿ ಶಾಲೆ – ಕಾಲೇಜುಗಳಲ್ಲಿ ನೇಮಕಕ್ಕೆ ತಡೆ
Published 28 ಮೇ 2024, 23:12 IST
Last Updated 28 ಮೇ 2024, 23:12 IST
ಅಕ್ಷರ ಗಾತ್ರ

ಬೆಂಗಳೂರು: ಡಿಟೆಕ್ಟಿವ್‌, ಸೆಕ್ಯೂರಿಟಿ ಏಜೆನ್ಸಿಗಳ ಮೂಲಕ ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸಲು ನೀಡಲಾಗಿದ್ದ ಕಾರ್ಯಾದೇಶಗಳನ್ನು ರದ್ದು ಮಾಡಲಾಗಿದೆ.

2024–25ನೇ ಸಾಲಿನ ಶೈಕ್ಷಣಿಕ ವರ್ಷದ ಮೇ 29ರಂದು ಆರಂಭವಾಗುತ್ತಿದ್ದು, ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮ ಗೊಳಿಸಲು ಅಗತ್ಯ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಮೂಲಕ ನಿಯೋಜಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ಹೊರಡಿಸಲಾಗಿರುವ ಎಲ್ಲ ಟೆಂಡರ್‌ಗಳ ಕಾರ್ಯಾದೇಶಗಳನ್ನು ತತ್‌ಕ್ಷಣದಿಂದ ರದ್ದುಪಡಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮೇ 28ರಂದು ಆದೇಶ ಹೊರಡಿಸಿದ್ದಾರೆ.

ವಲಯ ಮಟ್ಟದಲ್ಲಿ ಟೆಂಡರ್‌ ಕರೆದು ಯಶಸ್ವಿ ಬಿಡ್‌ದಾರರಿಗೆ ಬಿಬಿಎಂಪಿಯ ಶಿಶುವಿಹಾರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜಿಸಲು ಕಾರ್ಯಾದೇಶ ನೀಡಲಾಗಿತ್ತು. ಈ ಟೆಂಡರ್‌ಗಳ ಕಾರ್ಯಾದೇಶಗಳನ್ನು ಕೂಡಲೇ ರದ್ದುಪಡಿಸಲು ಪಶ್ಚಿಮ, ದಕ್ಷಿಣ, ಪೂರ್ವ ವಲಯಗಳ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

‘ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಂದಲೇ ಶಿಕ್ಷಕರು!’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಮೇ 27ರಂದು ವರದಿ ಪ್ರಕಟವಾಗಿತ್ತು. ‘ಏಜೆನ್ಸಿಗಳ ಹೆಸರು ಡಿಟೆಕ್ಟಿವ್, ಸೆಕ್ಯೂರಿಟಿ ಎಂದಿದೆ ಅಷ್ಟೇ. ಅವರು ಲಭ್ಯವಿರುವ ಶಿಕ್ಷಕರನ್ನೇ ಅವರ ಅರ್ಹತೆಯ ಆಧಾರದಲ್ಲಿ ಬಿಬಿಎಂಪಿಗೆ ಒದಗಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮೇ 27ರಂದು ಸಮರ್ಥಿಸಿಕೊಂಡಿದ್ದರು. ಆದರೆ, ಮೇ 28ರಂದು ಅವರೇ ಕಾರ್ಯಾದೇಶ ಗಳನ್ನು ರದ್ದುಪಡಿಸಿದ್ದಾರೆ.

ದಕ್ಷಿಣ ವಲಯ ಮತ್ತು ಆರ್‌.ಆರ್‌. ನಗರ ವಲಯಕ್ಕೆ ‘ಅಪ್ಪು ಡಿಟೆಕ್ಟಿವ್ ಆ್ಯಂಡ್‌ ಸೆಕ್ಯೂರಿಟಿ ಸರ್ವೀಸ್‌’, ಪೂರ್ವ ವಲಯಕ್ಕೆ ‘ಡಿಟೆಕ್ಟ್‌ವೆಲ್ ಆ್ಯಂಡ್‌ ಸೆಕ್ಯೂರಿಟಿ ಸರ್ವಿಸ್ ಪ್ರೈವೇಟ್‌ ಲಿಮಿಟೆಡ್‌’ ಹಾಗೂ ಪಶ್ಚಿಮ ವಲಯಕ್ಕೆ ‘ಶಾರ್ಪ್ ವಾಚ್ ಇನ್‌ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ಗಳಿಗೆ ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಕಾರ್ಯಾದೇಶ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT