ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯದ ಲೋಕ ಅನಾವರಣ: ಕೃಷಿಮೇಳದಲ್ಲಿ ಮೊದಲ ಬಾರಿಗೆ ಸಿರಿಧಾನ್ಯ ಎಕ್ಸ್‌ಪೊ

Published 17 ನವೆಂಬರ್ 2023, 20:35 IST
Last Updated 17 ನವೆಂಬರ್ 2023, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಲೋಕವೇ ಅನಾವರಣಗೊಂಡಿದೆ. ಆಹಾರ, ಆರೋಗ್ಯ, ಆದಾಯಕ್ಕೆ ಸಿರಿಧಾನ್ಯಗಳು ಎಂಬ ಘೋಷವಾಕ್ಯದ ಅಡಿ ಈ ಮೇಳ ಆಯೋಜಿಸಲಾಗಿದೆ. ಮೊದಲ ಬಾರಿಗೆ ಸಿರಿಧಾನ್ಯ ಮಳಿಗಳ ಪ್ರತ್ಯೇಕ ವಿಭಾಗವನ್ನೇ ಸ್ಥಾಪಿಸಲಾಗಿದ್ದು ರೈತರ ಆಕರ್ಷಣೆ ಕೇಂದ್ರವಾಗಿದೆ.

ಸಿರಿಧಾನ್ಯಗಳಲ್ಲಿ ಹಲವು ಬಗೆಯ ಉತ್ಪನ್ನಗಳು ಇಲ್ಲಿ ಅನಾವರಣಗೊಂಡಿವೆ. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಅಂಗವಾಗಿ ಈ ಮೇಳ ಆಯೋಜಿಸಲಾಗಿದೆ.

ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ತಯಾರಿಸಿರುವ ಸಿರಿಧಾನ್ಯದ ಪುಡಿ, ಸಿರಿಧಾನ್ಯದ ಬ್ರೆಡ್‌, ಬಿಸ್ಕತ್ತು ಸೇರಿದಂತೆ ಹಲವು ಬಗೆಯ ತಿನಿಸುಗಳು ಗಮನ ಸೆಳೆಯುತ್ತಿವೆ. ಅಲ್ಲದೇ ಸಿರಿಧಾನ್ಯದ ಮಹತ್ವವನ್ನೂ ಸಾರುತ್ತಿದೆ ಈ ಮೇಳ. ಸದ್ಯ 20ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಿರಿಧಾನ್ಯದ ಉತ್ಪನ್ನಗಳಿದ್ದು ಶನಿವಾರ ಅವುಗಳ ಸಂಖ್ಯೆ ಹೆಚ್ಚಲಿವೆ.

ಅಖಿಲ ಭಾರತ ಸುಸಂಘಟಿತ ಸಿರಿಧಾನ್ಯ ಮಳಿಗೆಯಲ್ಲಿ ಸಿರಿಧಾನ್ಯದ ವೈಭವವೇ ಇದೆ. ಸಾಂಪ್ರದಾಯಿಕ ಸಿರಿಧಾನ್ಯ ಶೇಖರಣೆ, ಒಳಕಲ್ಲು, ಸಂಸ್ಕರಣಾ ಪದ್ಧತಿ, ಮೊರದಿಂದ ಸಿರಿಧಾನ್ಯ ಸ್ವಚ್ಛತೆ, ಬೀಸುವ ಕಲ್ಲು, ಹಿಟ್ಟಿನಿಂದ ರೊಟ್ಟಿ ತಯಾರಿಕೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಇದು ರೈತರನ್ನು ಆಕರ್ಷಿಸುತ್ತಿದೆ.

ಸಿರಿಧಾನ್ಯಕ್ಕೆ ರೋಗಬಾಧೆ

ಸಿರಿಧಾನ್ಯಕ್ಕೂ ಹಲವು ರೋಗಗಳು ಬಾಧಿಸುತ್ತಿದ್ದು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕುತ್ತಿಗೆ ರೋಗ, ಬೆಂಕಿರೋಗ, ಇಲುಕುಬೆಂಕಿ ರೋಗ, ತೆನೆಕಾಡಿಗೆ ರೋಗ, ಎಲೆ ಅಂಗಮಾರಿ ರೋಗ, ಕಾಳುಕಾಡಿಗೆ ರೋಗಗಳು ಸಾಮಾನ್ಯವಾಗಿ ಸಿರಿಧಾನ್ಯದ ಬೆಳೆಗೆ ಕಾಡುತ್ತವೆ. ನವಣೆ, ಸಾಮೆ, ಹಾರಕ, ಊದಲು, ಬರಗು ಬೆಳೆಗೂ ಸುಳಿನೊಣಗಳ ಕಾಟ ಇದೆ. ಈ ರೋಗ ಬಾರದಂತೆ ತಡೆಯುವುದು ಹೇಗೆ ಎಂಬ ಮಾಹಿತಿ ಮೇಳದಲ್ಲಿ ರೈತರಿಗೆ ಲಭಿಸುತ್ತಿದೆ. ಈ ಬೆಳೆ ಬೆಳೆದ ರೈತರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

‘ಪ್ರತಿ ಸಿರಿಧಾನ್ಯಕ್ಕೂ ಮಹತ್ವವಿದೆ. ಕೆಲವರು ಎಲ್ಲ ಪುಡಿಗಳನ್ನು ಮಿಶ್ರ ಮಾಡಿ ಮಾರಾಟ ಮಾಡುತ್ತಾರೆ. ನಾವು ಪ್ರತ್ಯೇಕವಾಗಿ ಪುಡಿ ಮಾಡಿಯೇ ಮಾರಾಟ ಮಾಡುತ್ತಿದ್ದೇವೆ. ಈ ಪುಡಿಯಿಂದ ಗಂಜಿ, ಸೂಪ್‌, ದೋಸೆ ತಯಾರಿಸಿ ಸೇವಿಸಬಹುದು’ ಎಂದು ಐಶ್ವರ್ಯ ಸ್ವಸಹಾಯ ಸಂಘದ ಸವಿತಾ ಹೇಳಿದರು.

ಮೇಳದಲ್ಲಿ ಕಂಡಿದ್ದು...

* 'ಬೆಲ್ಲ ಬಳಸಿ ಆರೋಗ್ಯ ವೃದ್ಧಿಸಿ' ಘೋಷಣೆ ಅಡಿ ಮಂಡ್ಯದ ಬೆಲ್ಲದ ಪರಿಸೆ ಗಮನ ಸೆಳೆಯುತ್ತಿದೆ. * ಹಳ್ಳಿಕಾರ್‌ ಹೋರಿಗಳು ಆಕರ್ಷಕವಾಗಿವೆ. * ರೈತರ ಮಾಹಿತಿಗೆ ಸಲಹಾ ಸೇವೆ ಮಳಿಗೆ ಆರಂಭಿಸಲಾಗಿದೆ. ಈ ಮಳಿಗೆಯತ್ತ ಬರುವ ರೈತರ ಸಂಖ್ಯೆ ಹೆಚ್ಚಾಗಿದೆ.   * ಕೋಳಿ ಪ್ರಪಂಚವು ಮೊಟ್ಟೆ ಹಾಗೂ ಕೋಳಿ ಮಾಂಸ ಸೇವನೆಯ ಮಹತ್ವ ಸಾರುತ್ತಿದೆ. * ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡುವ ವಾರ್ತಾ ಇಲಾಖೆ ಮಳಿಗೆ ಗಮನ ಸೆಳೆಯಿತು.

‘ಬಳಕೆ ಹೆಚ್ಚು: ಉತ್ಪಾದನೆ ಕಡಿಮೆ’

ಸಿರಿಧಾನ್ಯಕ್ಕೆ ಈಗ ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಡಿಮೆಯಿದೆ. ನಾವು ಸಿರಿಧಾನ್ಯ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದು ಸ್ವಸಹಾಯ ಸಂಘಗಳಿಗೆ ತರಬೇತಿ ಸಹ ನೀಡುತ್ತಿದ್ದೇವೆ. ಕಳೆದ ಕೆಲವು ತಿಂಗಳಿಂದ ಸಿರಿಧಾನ್ಯದ ಪಾಸ್ತ ಬ್ರೆಡ್‌ ಬಿಸ್ಕತ್ತಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕನಕಪುರ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿಯ ಸುಜಯ್‌ ರಾಮಸಾಗರ ಹೇಳಿದರು. ಸಿರಿಧಾನ್ಯದಿಂದ ಅವಲಕ್ಕಿ ತಯಾರಿಸಲಾಗುತ್ತಿದೆ. ರೈತ ಉತ್ಪಾದಕ ಸಂಸ್ಥೆಯಿಂದ ಸಿರಿಧಾನ್ಯ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ನಾವೇ ಧಾನ್ಯ ಖರೀದಿಸಿ ಮೌಲ್ಯವರ್ಧನೆ ಮಾಡುತ್ತಿದ್ದೇವೆ. ಇದರಿಂದ ರೈತರಿಗೂ ಲಾಭವಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT