ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಫೋಟೊ, 4 ತಿಂಗಳ ನರಕಯಾತನೆ

ಗೆಳತಿಯ ತಂಗಿಗೆ ಚಿತ್ರಹಿಂಸೆ ಕೊಟ್ಟಿದ್ದ ಖಾಸಗಿ ಕಂಪನಿ ಉದ್ಯೋಗಿ ಸೆರೆ
Last Updated 4 ನವೆಂಬರ್ 2018, 20:42 IST
ಅಕ್ಷರ ಗಾತ್ರ

ಬೆಂಗಳೂರು: ಸ್ನೇಹಿತೆಯ ಸೋದರಿಗೆ ನಿದ್ರೆ ಮಾತ್ರೆಗಳನ್ನು ಬೆರೆಸಿದ ತಂಪು ಪಾನೀಯ ಕುಡಿಸಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ವಿವಸ್ತ್ರಗಳಿಸಿ ಫೋಟೊ ತೆಗೆದಿಟ್ಟುಕೊಂಡಿದ್ದ ಖಾಸಗಿ ಕಂಪನಿ ಉದ್ಯೋಗಿ ಗೌರವ್ ಕುಮಾರ್ ಸಿಂಗ್ (28) ಕಾಮಾಕ್ಷಿಪಾಳ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಸಂತ್ರಸ್ತೆ ಬ್ಯಾಂಕ್ ಉದ್ಯೋಗಿಯಾಗಿದ್ದು, ಗೌರವ್ ವಿರುದ್ಧ ಸೆ.31ರಂದು ದೂರು ಕೊಟ್ಟಿದ್ದರು. ಅಲ್ಲದೇ ಆತ ಕಳುಹಿಸುತ್ತಿದ್ದ ಅಶ್ಲೀಲ ಸಂದೇಶಗಳನ್ನು ಹಾಗೂ ಕರೆ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದಕ್ಕೆ ಸಂಬಂಧಿಸಿದ ಸಂಭಾಷಣೆಯ ರೆಕಾರ್ಡನ್ನೂ ಸಾಕ್ಷ್ಯಗಳಾಗಿ ಒದಗಿಸಿದ್ದರು.

ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಗೌರವ್ ಮನೆ ಖಾಲಿ ಮಾಡಿದ್ದ. ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಪೊಲೀಸರು ಆತನನ್ನು ಸುಂಕದಕಟ್ಟೆಯ ಸ್ನೇಹಿತನ ಮನೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಗೌರವ್‌ನಿಂದ ತಾವು ಅನುಭವಿಸಿದ ನೋವಿನ ಕತೆಯನ್ನು ಸಂತ್ರಸ್ತೆ ನಾಲ್ಕು ಪುಟಗಳ ದೂರಿನಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಅದರ ವಿವರ ಇಲ್ಲಿದೆ..

‘ಮೂರು ವರ್ಷದ ಹಿಂದೆ ನನ್ನ ವಿವಾಹವಾಗಿದ್ದು, ಪತಿಯೊಂದಿಗೆ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದೇನೆ. ನನ್ನ ಅಕ್ಕನ ಕುಟುಂಬ ಕೂಡ ಪಕ್ಕದ ರಸ್ತೆಯಲ್ಲೇ ವಾಸವಿದೆ. ಅಕ್ಕ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಗೌರವ್ ಉದ್ಯೋಗಿಯಾಗಿದ್ದ. ಹೀಗಾಗಿ, ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆ ಗೆಳೆತನದಲ್ಲೇ ಆಗಾಗ್ಗೆ ಆತ ಆಕೆಯ ಮನೆಗೆ ಬಂದು ಹೋಗುತ್ತಿದ್ದ.’

‘2017ರ ಅಕ್ಟೋಬರ್‌ನಲ್ಲಿ ನಾನು ಬಾಣಂತನಕ್ಕೆಂದು ಅಕ್ಕನ ಮನೆಗೆ ಹೋದೆ. ಈ ವೇಳೆ ಆಕೆ ಗೌರವ್‌ನನ್ನು ಪರಿಚಯ ಮಾಡಿಸಿದ್ದಳು. ಆದರೆ, ಅಷ್ಟಾಗಿ ಆತನನ್ನು ಮಾತನಾಡಿಸುತ್ತಿರಲಿಲ್ಲ. ಹೆರಿಗೆ ಬಳಿಕ ನಾನು ಗಂಡನ ಮನೆಗೆ ಮರಳಿದೆ.’

‘ಅಕ್ಕನಿಗೆ ತಿಳಿಯದಂತೆ ಆಕೆಯ ಮೊಬೈಲ್‌ನಿಂದ ನನ್ನ ಮೊಬೈಲ್ ಸಂಖ್ಯೆ ತೆಗೆದುಕೊಂಡಿದ್ದ ಗೌರವ್, ಇದೇ ಜುಲೈ ತಿಂಗಳ ಒಂದು ದಿನ ಸಂಜೆ ಕರೆ ಮಾಡಿದ್ದ. ‘ನಿಮ್ಮ ಅಕ್ಕ ಫಿಜ್ಜಾ ಆರ್ಡರ್ ಮಾಡಿದ್ದಾರೆ. ನಿಮಗೆ ಕರೆ ಮಾಡಿ ಕರೆಯುವಂತೆ ಹೇಳಿದರು’ ಎಂದು ಹೇಳಿದ. ಆತನ ಮಾತು ನಂಬಿ ಅಕ್ಕನ ಮನೆಗೆ ತೆರಳಿದೆ. ‘ಅಕ್ಕ–ಭಾವ ಈಗಷ್ಟೇ ಹೊರಗೆ ಹೋದರು. ನೀವು ಕೂಲ್ಡ್‌ ಡ್ರಿಂಕ್ಸ್‌ ಕುಡಿದು, ಫಿಜ್ಜಾ ತಿನ್ನಿ’ ಎಂದು ತಂಪು ಪಾನೀಯದ ಬಾಟಲಿ ಕೊಟ್ಟ.’

‘ಅದನ್ನು ಕುಡಿದ ಸ್ವಲ್ಪ ಸಮಯದಲ್ಲೇ ಕಣ್ಣುಗಳು ಮಂಜಾಗಿ ಪ್ರಜ್ಞೆ ಕಳೆದುಕೊಂಡೆ. ಈ ವೇಳೆ ನನ್ನ ಬಟ್ಟೆ ಬಿಚ್ಚಿ ನಾಲ್ಕು ಫೋಟೊಗಳನ್ನು ತೆಗೆದುಕೊಂಡಿದ್ದ. ಎಚ್ಚರಗೊಂಡ ಬಳಿಕ ಅವುಗಳನ್ನು ತೋರಿಸಿ, ‘ಇನ್ನು ಮುಂದೆ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಗಂಡನ ಮೊಬೈಲ್‌ಗೆ ಫೋಟೊ ಕಳುಹಿಸುತ್ತೇನೆ’ ಎಂದು ಬ್ಲಾಕ್‌ಮೇಲ್ ಮಾಡಿದ. ದಿಕ್ಕು ತೋಚದಂತಾಗಿ ಅಳುತ್ತ ಮನೆಗೆ ಮರಳಿದೆ. ‘ನನಗೆ ಹುಷಾರಿಲ್ಲ. ನಿಮ್ಮ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತೇನೆ’ ಎಂದು ಆ ದಿನ ಅಕ್ಕ–ಭಾವನಿಗೆ ಸುಳ್ಳು ಹೇಳಿ ಆತ ಮನೆ ಕೀ ಪಡೆದುಕೊಂಡಿದ್ದ ಎಂಬುದು ನಂತರ ಗೊತ್ತಾಯಿತು.’

‘ಇತ್ತೀಚೆಗೆ ಪತಿ ಕೆಲಸಕ್ಕೆ ಹೋಗಿದ್ದಾಗ ಮನೆಗೇ ಬಂದಿದ್ದ ಗೌರವ್, ತನ್ನೊಟ್ಟಿಗೆ ಬರುವಂತೆ ಪೀಡಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದ. ಸಿಗರೇಟ್ ಸೇದಿಸಿ, ಬಲವಂತವಾಗಿ ಮದ್ಯವನ್ನೂ ಕುಡಿಸಿದ್ದ. ನಂತರ ಯಾವುದೋ ಮಾತ್ರೆಗಳನ್ನು ನುಂಗಿಸಿ ಕೆಟ್ಟದಾಗಿ ನಡೆದುಕೊಂಡಿದ್ದ.’

‘ಇಷ್ಟೆಲ್ಲ ಮಾಡಿದರೂ, ಅಕ್ಕನ ಮುಂದೆ ಮಾತ್ರ ತಾನೊಬ್ಬ ಅಮಾಯಕ ಎಂಬಂತೆಯೇ ಓಡಾಡಿಕೊಂಡಿದ್ದ. ಆತನ ಕಿರುಕುಳ ತಾಳಲಾರದೆ, ವಾರದ ಹಿಂದೆ ಅಕ್ಕ–ಭಾವ ಹಾಗೂ ಪತಿಗೆ ವಿಷಯ ತಿಳಿಸಿದೆ. ಅವರ ಸೂಚನೆಯಂತೆ ದೂರು ಕೊಟ್ಟೆ. ಹೆಣ್ಣಿನ ಬಗ್ಗೆ ಗೌರವವಿಲ್ಲದ ಗೌರವ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

**

ಗಂಡನ ಗೆಳೆಯರಿಗೂ ಫೋಟೊ ಹಂಚಿದ!

‘ಸಂತ್ರಸ್ತೆ ತನ್ನ ಬಗ್ಗೆ ಮನೆಯಲ್ಲಿ ಹೇಳಿದ್ದಕ್ಕೆ ಕುಪಿತಗೊಂಡ ಗೌರವ್, ಆ ಫೋಟೊಗಳನ್ನು ಅವರ ಗಂಡನ ಸ್ನೇಹಿತರಿಗೆಲ್ಲ ಕಳುಹಿಸಿದ್ದ. ಅಲ್ಲದೆ, ಅವರಿಗೆ ಕರೆ ಮಾಡಿ ಸಂತ್ರಸ್ತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಈ ಸಂಬಂಧ ಎಲ್ಲರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದೇವೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ‘ಪ‍್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT