ಶನಿವಾರ, ಸೆಪ್ಟೆಂಬರ್ 26, 2020
27 °C

ಆಸ್ಪತ್ರೆಗಳಲ್ಲಿ ನಾಗರಿಕ ಸಹಾಯಕೇಂದ್ರ ಆರಂಭ: ಬಿಬಿಎಂಪಿ ಆಯುಕ್ತರಿಂದ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಚಿಕಿತ್ಸೆಗಾಗಿ ಮೀಸಲಿಡಲಾಗಿರುವ ಬೆಡ್‌ಗಳು–ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿಯ ಮೂಲಕ ಕಳುಹಿಸುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ 100ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಕಾಯ್ದರಿಸಿರುವ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳಲ್ಲಿ ದಿನದ 24ಗಂಟೆಗಳೂ ಕಾರ್ಯನಿರ್ವಹಿಸುವ ನಾಗರಿಕ ಸಹಾಯ ಕೇಂದ್ರವನ್ನು (ಸಿಎಸ್‌ಡಿ) ಆರಂಭಿಸಲಾಗಿದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಈ ಕುರಿತು ಬುಧವಾರ ಆದೇಶ ಹೊರಡಿಸಿದ್ದಾರೆ.

ಈ ಸಹಾಯ ಕೇಂದ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಬಿಬಿಎಂಪಿಯು ನಿಯಮಾವಳಿಗಳನ್ನು ರೂಪಿಸಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಜಂಟಿ ಆಯುಕ್ತರು ಸಿಎಸ್‌ಡಿಗಳ ಕಾರ್ಯನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ರೋಗಿಗಳಿಗೆ ಅಥವಾ ಅವರ ಬಂಧುಗಳಿಗಾಗಿ ಪ್ರತಿ ಆಸ್ಪತ್ರೆಯಲ್ಲೂ 10 ಹೆಚ್ಚುವರಿ ಆಸನಗಳನ್ನು ಅಳವಡಿಸಬೇಕು. ಇವರಿಗೆ ಒದಗಿಸಲು ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು, ಮುಖಕವಚ ಮತ್ತು ಮಾಹಿತಿ ಪತ್ರಗಳನ್ನು ಪೂರೈಸಬೇಕು. ಈ ಸಹಾಯ ಕೇಂದ್ರದಲ್ಲಿ ಆಯಾ ಆಸ್ಪತ್ರೆಯ ಜನರಲ್‌ ವಾರ್ಡ್‌, ಹೈಡೆನ್ಸಿಟಿ ಘಟಕ (ಎಚ್‌ಡಿಯು), ತೀವ್ರ ನಿಗಾ ಘಟಕ (ಐಸಿಯು) ಮತ್ತು ವೆಂಟಿಲೇಟರ್ ಸೌಲಭ್ಯ ವಿರುವ ಐಸಿಯುಗಳಲ್ಲಿರುವ ಒಟ್ಟು ಹಾಸಿಗೆಗಳು ಹಾಗೂ ಖಾಲಿ ಇರುವ ಹಾಸಿಗೆಗಳ ವಿವರ ಒದಗಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶಗಳನ್ನು ಪಾಲಿಸದಿರುವ ಹಾಗೂ ಬಿಬಿಎಂಪಿ ಕಳುಹಿಸಿದ ರೋಗಿಗಳನ್ನು ಕಡೆಗಣಿಸುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದರಿಂದ ಬಿಬಿಎಂಪಿ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ.

ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಹಾಗೂ ಬಿಬಿಎಂಪಿ ಕಳುಹಿಸಿದ ರೋಗಿಗಳಿಂದಲೂ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪಾಲಿಕೆಸದಸ್ಯರು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ದೂರಿದ್ದರು.

ಸಿಎಸ್‌ಡಿ ಸಿಬ್ಬಂದಿಯ ಕಾರ್ಯಗಳೇನು?

* ರೋಗಿಗಳನ್ನು ಮತ್ತು ಅವರ ಬಂಧುಗಳನ್ನು ಸ್ವಾಗತಿಸುವುದು ಮತ್ತು ಅವರ ಜೊತೆ ಸಹಾನುಭೂತಿಯಿಂದ ನಡೆದುಕೊಳ್ಳುವುದು. ಅವರಿಂದ ವಿಶೇಷ ರೆಫರೆನ್ಸ್‌ ಸಂಖ್ಯೆ (ಎಸ್‌ಆರ್‌ಎಫ್‌) ಗುರುತಿನ ಸಂಖ್ಯೆ, ಜಿಲ್ಲಾ ಕೋಡ್‌ ಮತ್ತಿತರ ಅಗತ್ಯ ಮಾಹಿತಿ ಪಡೆದುಕೊಳ್ಳುವುದು

* ಯಾವುದೇ ಸಮಸ್ಯೆಗಳಿಲ್ಲದೇ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಹಾಗೂ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಲು ಒಂದೇ ಕಡೆ ಸಕಲ ಸೌಲಭ್ಯ ಒದಗಿಸುವುದು. ಅವರ ಬೇಕು–ಬೇಡಗಳನ್ನು ವಿಚಾರಿಸಿ ನೆರವಾಗುವುದು. ಅಗತ್ಯವಿರುವ ಸಲಹೆಗಳನ್ನು ನೀಡುವುದು

* ಕೋವಿಡ್ ರೋಗಿಗಳು ಚಿಕಿತ್ಸೆ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡುವುದು

* ರೋಗಿಗಳು ಹಾಗೂ ಬಂಧುಗಳ ಅಹವಾಲುಗಳನ್ನು ಆಲಿಸುವುದು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆ ಬಂಧುಗಳು ದೂರವಾಣಿ ಕರೆ ಮಾಡಿ ಮಾತನಾಡಲು, ಅವರ ಸ್ಥಿತಿಗತಿ ಬಗ್ಗೆ ವಿಚಾರಿಸಲು ನೆರವಾಗುವುದು

* ಒಟ್ಟು ಹಾಸಿಗೆಗಳು ಹಾಗೂ ಖಾಲಿ ಇರುವ ಹಾಸಿಗೆಗಳ ಕುರಿತು ಆಸ್ಪತ್ರೆಯು ಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆಗೆ ಒದಗಿಸಿರುವ ಮಾಹಿತಿಯ ನೈಜತೆ ಪರಿಶೀಲಿಸುವುದು

* ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ದರಗಳ ಬಗ್ಗೆ ವಿವರ ಒದಗಿಸುವುದು

* ರೋಗಿಗಳ ನಿರ್ವಹಣೆಯಲ್ಲಿ ಸಮನ್ವಯ ಸಾಧಿಸಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ಒದಗಿಸುವುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು