ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಛೇರಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ಶೇ 80ರಷ್ಟು ಅವಕಾಶ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರ ಸಭೆಯಲ್ಲಿ ನಿರ್ಣಯ
Published 29 ಏಪ್ರಿಲ್ 2023, 19:57 IST
Last Updated 29 ಏಪ್ರಿಲ್ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಪಡೆದು ನಡೆಸುವ ಸಂಗೀತ ಕಛೇರಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ಶೇ 80 ರಷ್ಟು ಅವಕಾಶ ಸೇರಿ ಮೂರು ನಿರ್ಣಯಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರು ಕೈಗೊಂಡಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ ಟ್ರಸ್ಟ್) ನಗರದಲ್ಲಿ ಶನಿವಾರ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರ ಕುಂದು ಕೊರತೆ ಸಭೆ ನಡೆಸಿತು. ಟ್ರಸ್ಟ್‌ನ ಪ್ರಥಮ ಸಭೆ ಇದಾಗಿದ್ದು, ನಾಗಮಣಿ ಶ್ರೀನಾಥ್, ಆರ್.ಎಸ್. ನಂದಕುಮಾರ್, ಶ್ರೀಕಾತಂ ನಾಗೇಂದ್ರ ಶಾಸ್ತ್ರಿ, ಪ್ರಶಾಂತ್ ಅಯ್ಯಂಗಾರ್, ವಸಂತ ಮಾಧವಿ, ಟಿ.ಎಸ್. ಸತ್ಯವತಿ, ಜ್ಯೋತ್ಸ್ನಾ ಶ್ರೀಕಾಂತ್, ಎಂ.ಎಸ್. ಶೀಲಾ ಸೇರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದರು.

‘ಸಂಗೀತ ಕಾರ್ಯಕ್ರಮಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಸ್ವಜನ ಪಕ್ಷಪಾತ ಹೆಚ್ಚುತ್ತಿದೆ’ ಎಂದು ಕಲಾವಿದರು ಕಳವಳ ವ್ಯಕ್ತಪಡಿಸಿದರು. 

‘ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ಈ ಕ್ಷೇತ್ರದ ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಅವಕಾಶ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಪಡೆದು ಸಂಘ–ಸಂಸ್ಥೆಗಳು ನಡೆಸುವ ಸಂಗೀತ ಕಛೇರಿಗಳಲ್ಲಿ ಶೇ 80ರಷ್ಟು ಅವಕಾಶವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ನೀಡಬೇಕು. ಕೆಲವು ಕಲಾವಿದರಿಗೆ ಮಾತ್ರ ಅವಕಾಶ ನೀಡದೆ, ಎಲ್ಲ ಕಲಾವಿದರಿಗೂ ಸಮಾನ ಅವಕಾಶ ಸಿಗುವಂತಾಗಬೇಕು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರನ್ನು ಪರಿಗಣಿಸಬೇಕು. ಆಯ್ಕೆ ಸಮಿತಿಯಲ್ಲಿಯೂ ಈ ಕಲಾ ಪ್ರಕಾರದ ಕಲಾವಿದರು ಇರಬೇಕು. ಸ್ವಜನ ಪಕ್ಷಪಾತವನ್ನು ಹೋಗಲಾಡಿಸಬೇಕು. ಆಕಾಶವಾಣಿಯಲ್ಲಿ ನಡೆಯುವ ಧ್ವನಿ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕು. ಈ ಬಗ್ಗೆ ನವದೆಹಲಿಯ ಕೇಂದ್ರಕ್ಕೂ ಪತ್ರ ಬರೆಯಬೇಕು’ ಎಂಬ ಅಭಿಮತ ವ್ಯಕ್ತವಾಯಿತು. ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಯಿತು. ನೆರೆದಿದ್ದವರು ಧ್ವನಿ ಮತದ ಮೂಲಕ ಅಂಗೀಕರಿಸಿದರು. 

‘ಯುವ ಕಲಾವಿದರ ಹೆಸರನ್ನು ಪಟ್ಟಿ ಮಾಡಿ, ಎಲ್ಲ ಸಂಗೀತ ಕಲಾ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ. ಆ ಕಲಾವಿದರಿಗೆ ಅವಕಾಶ ನೀಡಿ, ಪ್ರೋತ್ಸಾಹಿಸುವಂತೆಯೂ ಮನವಿ ಮಾಡಿಕೊಳ್ಳಲಾಗುತ್ತದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸಂಗೀತಕ್ಕೆ ಸಂಬಂಧಿಸಿದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಪ್ರಶಾಂತ್ ಅಯ್ಯಂಗಾರ್ ತಿಳಿಸಿದರು. 

‘ಕರ್ನಾಟಕ ಶಾಸ್ತ್ರೀಯ ಸಂಗೀತಗಾರರನ್ನು ಕಡೆಗಣಿಸುತ್ತಾ ಬರಲಾಗಿದೆ. ಅನ್ಯರಿಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ನಾವು ಸಭೆ ನಡೆಸಿ, ನಿರ್ಣಯ ಕೈಗೊಂಡಿದ್ದೇವೆ. ಚುನಾವಣೆ ಬಳಿಕ ಹೊಸ ಸರ್ಕಾರಕ್ಕೂ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT