ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ಸಂಗ್ರಹಣೆ ಪೋರ್ಟಲ್‌ 2.0ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Published 27 ನವೆಂಬರ್ 2023, 15:54 IST
Last Updated 27 ನವೆಂಬರ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ಟೆಂಡರ್‌ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತಗೊಳಿಸುವ ಮತ್ತು ಕಾಲಕಾಲಕ್ಕೆ ಕಾಮಗಾರಿಗಳ ಪ್ರಗತಿಯ ಚಿತ್ರಣವನ್ನು ಒದಗಿಸುವ ವಿಶೇಷ ಸೌಲಭ್ಯ ಒಳಗೊಂಡ ಇ–ಸಂಗ್ರಹಣಾ ಪೋರ್ಟಲ್‌ 2.0 ಬಳಕೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಇ–ಸಂಗ್ರಹಣಾ ಪೋರ್ಟಲ್‌ಗೆ ಸೋಮವಾರ ಚಾಲನೆ ನೀಡಿದರು.

ಇನ್ನುಮುಂದೆ ₹ 1 ಕೋಟಿಗಿಂತ ಹೆಚ್ಚಿನ ವೆಚ್ಚದ ಕಾಮಗಾರಿಗಳ ಗುತ್ತಿಗೆ ನಿರ್ವಹಣೆಯನ್ನು ಇ–ಸಂಗ್ರಹಣಾ ಪೋರ್ಟಲ್‌ 2.0 ಮೂಲಕವೇ ಮಾಡಲಾಗುತ್ತದೆ. ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದ ತಕ್ಷಣದ ಮಾಹಿತಿಯನ್ನು ಒದಗಿಸುವ ಪ್ರತ್ಯೇಕ ‘ಡ್ಯಾಷ್‌ ಬೋರ್ಡ್‌’ ಅನ್ನು ಪೋರ್ಟಲ್‌ನಲ್ಲಿ ರೂಪಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಈ ಇಲಾಖೆಗಳ ವ್ಯಾಪ್ತಿಯಲ್ಲಿರುವ ನಿಗಮ, ಮಂಡಳಿಗಳಲ್ಲಿ ನೀಡಲಾದ ₹50 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ವೆಚ್ಚದ ಕಾಮಗಾರಿಗಳನ್ನು ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಗುತ್ತಿಗೆ ನಿರ್ವಹಣಾ ಯೋಜನೆಗೆ ಆಯ್ದುಕೊಳ್ಳಲಾಗಿದೆ.

ಈ ರೀತಿಯಲ್ಲಿ ಮೂರು ಇಲಾಖೆಗಳಲ್ಲಿ 40,000 ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಅವುಗಳಲ್ಲಿ 3,165 ಕಾಮಗಾರಿಗಳನ್ನು ಗುತ್ತಿಗೆ ನಿರ್ವಹಣಾ ವ್ಯವಸ್ಥೆಯ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಡ್ಯಾಷ್‌ ಬೋರ್ಡ್‌ನಲ್ಲಿ ಒದಗಿಸಲಾಗುತ್ತದೆ.

‘ಇ–ಸಂಗ್ರಹಣಾ ಪೋರ್ಟಲ್‌ 2.0 ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಡಿಜಿಟಲ್‌ ಕೀಲಿ ಹೊಂದಿರುವವರಷ್ಟೇ ಪೋರ್ಟಲ್‌ ಪ್ರವೇಶಿಸಬಹುದು. ದರ ಸಂಧಾನ, ಗುತ್ತಿಗೆ ಅನುಮೋದನೆ, ಕಾರ್ಯಾದೇಶ ವಿತರಣೆ, ಕಾಮಗಾರಿಗಳ ಮೇಲೆ ನಿಗಾ ಇರಿಸುವ ಕೆಲಸಗಳನ್ನು ಪೋರ್ಟಲ್‌ ಮೂಲಕವೇ ನಡೆಸಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಇ- ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT