ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

750 ಪಡಿತರ ವಿತರಕರಿಗೆ ಪಾವತಿಯಾಗದ ಕಮಿಷನ್‌

Published 3 ಏಪ್ರಿಲ್ 2024, 18:52 IST
Last Updated 3 ಏಪ್ರಿಲ್ 2024, 18:52 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ವರ್ಷಾಂತ್ಯಕ್ಕೂ ಮೊದಲೇ ಅಧಿಕಾರಿಗಳು ಖಜಾನೆಗೆ ಬಿಲ್‌ ಸಲ್ಲಿಸದ ಕಾರಣದಿಂದ ಬೆಂಗಳೂರು ನಗರದ ಅನೌಪಚಾರಿಕ ಪಡಿತರ ವಲಯದ (ಐಆರ್‌ಎ) 750 ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಎರಡು ತಿಂಗಳ ಕಮಿಷನ್ ಪಾವತಿಯಾಗಿಲ್ಲ. ಇದಕ್ಕಾಗಿ ಬಿಡುಗಡೆಯಾಗಿದ್ದ ಅನುದಾನವೂ ಸರ್ಕಾರದ ಖಜಾನೆಗೆ ವಾಪಸ್‌ ಹೋಗಿದೆ.

ಮಾರ್ಚ್‌ 31ಕ್ಕೆ ಆರ್ಥಿಕ ವರ್ಷ ಕೊನೆಗೊಳ್ಳಲಿದ್ದ ಕಾರಣದಿಂದ ಮುಂಚಿತವಾಗಿ ಬಿಲ್‌ ಸಲ್ಲಿಸಬೇಕಿತ್ತು. ಮಾರ್ಚ್‌ 18ಕ್ಕೆ ಎಲ್ಲ ನ್ಯಾಯಬೆಲೆ ಅಂಗಡಿಗಳ ಕಮಿಷನ್‌ ಪಾವತಿಗೆ ಸಂಬಂಧಿಸಿದ ಬಿಲ್‌ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗೆ ಸಲ್ಲಿಸಲಾಗಿತ್ತು. ಮಾರ್ಚ್‌ ಕೊನೆಯ ವಾರ ಅಂತಿಮ ಕಂತಿನ ಅನುದಾನ ಬಿಡುಗಡೆಯಾಗಿತ್ತು. ಆದರೆ, ಬಿಲ್‌ಗಳಿಗೆ ಅನುಮೋದನೆ ನೀಡಿ ಖಜಾನೆಗೆ ಸಲ್ಲಿಸದೇ ಇರುವ ಕಾರಣ ಕಮಿಷನ್‌ ಪಾವತಿಯಾಗಿಲ್ಲ.

ಈ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿರುವ ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘ, ‘ಸಕಾಲಕ್ಕೆ ಬಿಲ್‌ ಸಲ್ಲಿಸಿ, ಅನುದಾನ ಲಭ್ಯವಿದ್ದಾಗ್ಯೂ ಕೆಲವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಡಿತರ ವಿತರಕರಿಗೆ ಕಮಿಷನ್‌ ಪಾವತಿಯಾಗಿಲ್ಲ’ ಎಂದು ದೂರಿದೆ.

‘ಖಜಾನೆಗೆ ಬಿಲ್‌ಗಳನ್ನು ಸಲ್ಲಿಸಲು ಮಾರ್ಚ್‌ 27 ಮತ್ತು 28ರಂದು ಅವಕಾಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತ್ವರಿತವಾಗಿ ಕಮಿಷನ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜೂನ್‌ ತಿಂಗಳವರೆಗೂ ಪಡಿತರ ವಿತರಣೆ ಸ್ಥಗಿತಗೊಳಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಜೆ.ಬಿ. ಕುಮಾರ್‌, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಾದಪ್ಪ ಮತ್ತು ಖಜಾಂಚಿ ರಾಮಯ್ಯ ಮನವಿಯಲ್ಲಿ ತಿಳಿಸಿದ್ದಾರೆ.

‘ಏಪ್ರಿಲ್‌ನಲ್ಲಿ ಪಾವತಿಗೆ ಕ್ರಮ’: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಬೆಂಗಳೂರು–ಐಆರ್‌ಎ ಹೆಚ್ಚುವರಿ ನಿರ್ದೇಶಕಿ ಪ್ರಜ್ಞಾ ಅಮ್ಮೆಂಬಳ, ‘ಖಜಾನೆಗೆ ಬಿಲ್‌ ಸಲ್ಲಿಸಲು ಗಡುವು ಮುಗಿಯುವ ಹಿಂದಿನ ದಿನ ರಾತ್ರಿ 9.20ಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಎಲ್ಲ ಬಿಲ್‌ಗಳನ್ನೂ ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ’ ಎಂದರು.

‘ಅನುದಾನ ಮರಳಿ ಸರ್ಕಾರದ ಖಜಾನೆಗೆ ಹೋಗಿದೆ. ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ 750 ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೂ ಹಿಂಬಾಕಿ ಸೇರಿಸಿ ಕಮಿಷನ್‌ ಪಾವತಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT