ಸಾಕ್ಷಿದಾರರ ರಕ್ಷಣೆಗೆ ಪ್ರಾಧಿಕಾರ ರಚಿಸಿ: ಹೈಕೋರ್ಟ್

ಬೆಂಗಳೂರು: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷಿದಾರರಿಗೆ ರಕ್ಷಣೆ ನೀಡಲು ಸಮರ್ಥ ಪ್ರಾಧಿಕಾರ ರಚಿಸುವ ಸಂಬಂಧ ತಕ್ಷಣವೇ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ ಆಧರಿಸಿ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ಮೇಲ್ವಿಚಾರಣೆಗೆ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು.
‘ವಿಶೇಷ ನ್ಯಾಯಾಲಯದಲ್ಲಿನ ಅನೇಕ ಪ್ರಕರಣಗಳಲ್ಲಿ ರಾಜಕಾರಣಿಗಳು ಆರೋಪಿಗಳಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಸಾಕ್ಷ್ಯಗಳನ್ನು ಅವರು ದುರ್ಬಲಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ಸಾಕ್ಷ್ಯ ಸಂರಕ್ಷಣಾ ಯೋಜನೆ ಯನ್ನು ಜಾರಿಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟಿತು.
ಈ ಸಂಬಂಧ ಮೆಮೊ ಸಲ್ಲಿಸಿದ ರಾಜ್ಯ ಸರ್ಕಾರ, ಪ್ರತಿ ಜಿಲ್ಲೆಯಲ್ಲೂ ಸಮರ್ಥವಾದ ಪ್ರಾಧಿಕಾರ ರಚಿಸಲಾಗುವುದು ಎಂದು ಭರವಸೆ ನೀಡಿತು. ‘ಬೆಂಗಳೂರು ನಗರದಲ್ಲಿ ಮೊದಲಿಗೆ ಪ್ರಾಧಿಕಾರ ರಚಿಸಬೇಕು, ಇತರ ಜಿಲ್ಲೆಗಳಲ್ಲಿ ಎರಡು ವಾರಗಳಲ್ಲಿ ಅವಧಿಯಲ್ಲಿ ರಚಿಸಬೇಕು’ ಎಂದು ಪೀಠ ತಿಳಿಸಿತು.
‘ಈ ಯೋಜನೆ ಬಗ್ಗೆ ಸಾಕ್ಷಿದಾರರಿಗೆ ಮಾಹಿತಿ ನೀಡಬೇಕು. ಬೆದರಿಕೆಯ ಸಾಧ್ಯತೆಯಿಂದ ರಕ್ಷಣೆ ಕೋರಿ ಅವರು ಅರ್ಜಿ ಸಲ್ಲಿಸಿದರೆ ರಕ್ಷಣೆ ನೀಡುವುದು ತನಿಖಾಧಿಕಾರಿ ಕರ್ತವ್ಯ. ಸಾಕ್ಷಿದಾರರಿಗೆ ರಕ್ಷಣೆ ಬೇಕಾಗಬಹುದು ಎಂಬುದನ್ನು ನ್ಯಾಯಾಧೀಶರು ಕೂಡ ನಿರೀಕ್ಷೆ ಮಾಡಬಹುದು. ಒಂದು ವೇಳೆ ಸಾಕ್ಷಿದಾರರು ಅರ್ಜಿ ಸಲ್ಲಿಸದಿದ್ದರೂ ನ್ಯಾಯಾಧೀಶರು ಆದೇಶಿಸಿದರೆ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪೀಠ ಹೇಳಿತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.