ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳುಕೋರರಿಗೆ ಆಧಾರ್: ‘ಬೆಂಗಳೂರು ಒನ್‌’ ನೌಕರ ಬಂಧನ

ಮಾದನಾಯಕನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 7 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಆಧಾರ್ ಮಾಡಿಸಿಕೊಡುತ್ತಿದ್ದ ಆರೋಪದಡಿ ‘ಬೆಂಗಳೂರು ಒನ್‌’ ಕೇಂದ್ರದ ಗುತ್ತಿಗೆ ನೌಕರ ಸೇರಿ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಿದ್ದನಹೊಸಹಳ್ಳಿಯ ‘ಒನ್ ಸ್ಟಾಪ್–ಆಲ್‌ ಸಲ್ಯೂಷನ್ಸ್’ ಹೆಸರಿನ ಸೈಬರ್ ಕೇಂದ್ರದಲ್ಲಿ ಆಧಾರ್ ಮಾಡಿಕೊಡುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಬಾಂಗ್ಲಾ ಪ್ರಜೆಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಜಾಲವನ್ನು ಭೇದಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸೈಬರ್ ಕೇಂದ್ರದ ಮಾಲೀಕ ವಿಜಯ್‌ಕುಮಾರ್‌ ಸಿಂಗ್ (34) ಹಾಗೂ ಅಕ್ರಮವಾಗಿ ಆಧಾರ್ ಪಡೆದಿದ್ದ ಬಾಂಗ್ಲಾ ಪ್ರಜೆ ಜುವೇಲ್ ರಾಣಾ (22) ಅವರನ್ನು ಬಂಧಿಸಲಾಗಿತ್ತು. ಇವರಿಬ್ಬರು ಮತ್ತಷ್ಟು ಆರೋಪಿಗಳ ಹೆಸರು ಬಾಯ್ಬಿಟ್ಟಿದ್ದರು. ನಂತರವೇ, ಪಾದರಾಯನಪುರದ ನೌಷದ್ ಪಾಷಾನನ್ನು (24) ಬಂಧಿಸಲಾಯಿತು. ಈತ, ಬನಶಂಕರಿ ಶ್ರೀನಿವಾಸನಗರದ ಬೆಂಗಳೂರು ಒನ್‌ ಕೇಂದ್ರದ ಗುತ್ತಿಗೆ ನೌಕರ’ ಎಂದು ಪೊಲೀಸರು ತಿಳಿಸಿದರು.

‘ವೈದ್ಯಾಧಿಕಾರಿಗಳ ಹೆಸರಿನ ಮುದ್ರೆ ಹಾಗೂ ಸಹಿ ಇರುವ ಆಧಾರ್ ನೋಂದಣಿಯ 12 ಅರ್ಜಿ ನಮೂನೆಗಳು, ಪಾನ್‌ ಕಾರ್ಡ್‌ನ 60 ಅರ್ಜಿಗಳು, ಕಂಪ್ಯೂಟರ್, ಪ್ರಿಂಟರ್, ಚೆಕ್‌ ಬುಕ್‌ ಅನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ಮೂವರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಹೇಳಿದರು.

ಸೈಬರ್ ಕೇಂದ್ರದಲ್ಲೇ ನಕಲಿ ದಾಖಲೆ ಸೃಷ್ಟಿ: ‘ಆಧಾರ್ ಮಾಡುವುದು ಹೇಗೆ? ಹಾಗೂ ಅದಕ್ಕೆ ಯಾವೆಲ್ಲ ದಾಖಲೆಗಳ ಅಗತ್ಯವಿದೆ ಎಂಬುದನ್ನು ಆರೋಪಿ ವಿಜಯ್‌ಕುಮಾರ್ ತಿಳಿದುಕೊಂಡಿದ್ದ. ನೌಷದ್ ಪಾಷಾ ಜೊತೆ ಸೇರಿಕೊಂಡು ಆಧಾರ್ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮಧ್ಯವರ್ತಿಗಳ ಮೂಲಕ ಬಾಂಗ್ಲಾದೇಶದ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದ ವಿಜಯ್‌ಕುಮಾರ್, ಆಧಾರ್ ಮಾಡಿಕೊಡುವುದಾಗಿ ಹೇಳಿ ಕೇಂದ್ರಕ್ಕೆ ಕರೆಸುತ್ತಿದ್ದ. ಅವರಿಂದ ₹ 500ರಿಂದ ₹ 1,000 ಪಡೆಯುತ್ತಿದ್ದ. ಆಧಾರ್ ನೋಂದಣಿ ಅರ್ಜಿ ನಮೂನೆಯಲ್ಲಿ ಬಾಂಗ್ಲಾ ಪ್ರಜೆ ಫೋಟೊ ಅಂಟಿಸುತ್ತಿದ್ದ. ನಂತರ, ವೈದ್ಯಾಧಿಕಾರಿ ಡಾ. ಪ್ರಕಾಶ್‌ಕುಮಾರ್ ಎಂಬುವವರ ಸೀಲು ಹಾಗೂ ಸಹಿ ಹಾಕುತ್ತಿದ್ದ. ಬಳಿಕ, ವಿಳಾಸ ತುಂಬಿಸಿ ಜಾಲತಾಣದ ಮೂಲಕ ಆಧಾರ್ ನೋಂದಣಿ ಮಾಡುತ್ತಿದ್ದ.’

‘ನಿಗದಿತ ದಿನದಂದು ಬಾಂಗ್ಲಾ ಪ್ರಜೆಗೆ ಆಧಾರ್ ಬರುತ್ತಿತ್ತು. ಇದೇ ರೀತಿಯಲ್ಲೇ ಆರೋಪಿ, ಹಲವರಿಗೆ ಆಧಾರ್ ಮಾಡಿಕೊಟ್ಟಿರುವ ಮಾಹಿತಿ ಇದೆ. ಈತನ ಕೃತ್ಯಕ್ಕೆ ನೌಷದ್ ಪಾಷಾ ಹೆಚ್ಚು ಸಹಕಾರ ನೀಡುತ್ತಿದ್ದ. ಕೃತ್ಯದಿಂದ ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರನ್ನು ಬಾಂಗ್ಲಾ ಪ್ರಜೆ ಸೋಗಿನಲ್ಲಿ ಸೈಬರ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವರಿಂದ ಹಣ ಪಡೆದಿದ್ದ ಆರೋಪಿ, ನಕಲಿ ದಾಖಲೆ ಸೃಷ್ಟಿಸಿ ಆಧಾರ್ ನೋಂದಣಿ ಮಾಡಿದ್ದ. ಇದೇ ಪುರಾವೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT