ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕಬ್ಬನ್‌ಪಾರ್ಕ್‌ಗೆ 150: ಸಂಭ್ರಮಪಡುವ ಮುನ್ನ ಏನೆಲ್ಲಾ ಆಗಬೇಕಿದೆ?

Last Updated 2 ನವೆಂಬರ್ 2019, 2:11 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಸಂಸ್ಥೆ ಅಥವಾ ಸ್ಮಾರಕ 150 ವರ್ಷ ಪೂರೈಸುತ್ತಿದೆ ಎಂದರೆ ಅದು ಸಂಭ್ರಮದ ಆಚರಣೆಯಾಗಿರುತ್ತದೆ. ಆದರೆ, 2020ಕ್ಕೆ ನೂರೈವತ್ತು ವರ್ಷ ಪೂರೈಸುವ ಕಬ್ಬನ್ ಉದ್ಯಾನಕ್ಕೆ ಆ ಸಂಭ್ರಮ ಇಲ್ಲವಾಗಿದೆ.

ಹೌದು, 1870ರಲ್ಲಿ ಶಂಕುಸ್ಥಾಪನೆಗೊಂಡ ಈ ಐತಿಹಾಸಿಕ ಉದ್ಯಾನ ಅನೇಕ ಕಾರಣಗಳಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಹಸಿರು ಕಡಿಮೆಯಾಗುತ್ತಿದ್ದು, ವಿಶ್ವ ಪ್ರಸಿದ್ಧ ಉದ್ಯಾನದ ಭಾಗವಾಗಿರುವ ಪಾರಂಪರಿಕ ಕಟ್ಟಡಗಳಿಗೂ ಇಲ್ಲಿ ಭವಿಷ್ಯ ಇಲ್ಲವಾಗಿದೆ.

ಆಡಳಿತ ಮತ್ತು ನ್ಯಾಯಾಂಗವೇ ಈ ಜಾಗವನ್ನು ದೊಡ್ಡ ದೊಡ್ಡ ಕಟ್ಟಡಗಳನ್ನು ಆವರಿಸಿಕೊಳ್ಳಲು ಅವಕಾಶ ನೀಡುತ್ತಿದೆ. ದೇಶದ ಅತ್ಯಂತ ಹಳೆಯ ಉದ್ಯಾನವೊಂದು ಅವಸಾನದತ್ತ ಸಾಗುತ್ತಿರುವುದು ಪರಿಸರವಾದಿಗಳಲ್ಲಿ ದುಃಖ ತರಿಸಿದೆ.

ನಗರದ ಮೂಲ ನಕ್ಷೆ ಪ್ರಕಾರ ಇಡೀ ಕಬ್ಬನ್ ಉದ್ಯಾನದ ಮರು ಸರ್ವೆ ನಡೆಸುವ ಅವಶ್ಯಕತೆ ಇದೆ. ಆಗ ಮಾತ್ರ ಉದ್ಯಾನವನ್ನು ಸಂರಕ್ಷಿಸಲು ಸಾಧ್ಯ ಎನ್ನುತ್ತಾರೆ ಹಿರಿಯ ವಕೀಲ ಎನ್‌.ಪಿ. ಅಮೃತೇಶ್.

ಘಟನಾವಳಿಗಳು

1975: ಕಬ್ಬನ್ ಉದ್ಯಾನದಲ್ಲಿ ಕಟ್ಟಡ ನಿರ್ಮಾಣವನ್ನು 1975ರಲ್ಲಿ ಸಂಪೂರ್ಣ ನಿಷೇಧಿಸಲಾಯಿತು. ಕರ್ನಾಟಕ ಸರ್ಕಾರಿ ಉದ್ಯಾನ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 4 ಪ್ರಕಾರ ಎಲ್ಲಾ ಉದ್ಯಾನಗಳಲ್ಲೂ ಕಟ್ಟಡ ನಿರ್ಮಾಣವನ್ನು ನಿಷೇಧಿಸಲಾಯಿತು. ಆದರೆ, ತೋಟಗಾರಿಕೆ ಇಲಾಖೆಯು ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ವಿನಾಯಿತಿ ನೀಡಲಾಗಿತ್ತು. ಕಬ್ಬನ್ ಉದ್ಯಾನ ಮತ್ತು ಲಾಲ್‌ಬಾಗ್ ಪ್ರದೇಶಗಳಲ್ಲಿನ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಭೂಮಿ ಮಂಜೂರು ಮಾಡಬಾರದು ಮತ್ತು ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ನಿರ್ದೇಶಿಸಲಾಗಿತ್ತು.

1983: ಈ ಕಾಯ್ದೆಯ ಅಧಿಸೂಚನೆಯನ್ನು ಮಾರ್ಪಡಿಸಿ 1983ರ ಸೆಪ್ಟೆಂಬರ್ 27ರಂದು ಮತ್ತೊಂದು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತು. ಹೈಕೋರ್ಟ್‌, ವಿಧಾನಸೌಧ, ಶಾಸಕರ ಭವನ, ರಾಜಭವನ, ಟೆನ್ನಿಸ್ ಕ್ರೀಡಾಂಗಣ, ಎಲ್‌ಆರ್‌ಡಿಇ ಕ್ಯಾಂಪಸ್ ಸೇರಿದಂತೆ ಇತರೆ ಕಟ್ಟಡಗಳನ್ನು ಈ ಕಾಯ್ದೆ ವ್ಯಾಪ್ತಿಗೆ ಒಳಪಡಿಸಿತು.

1995:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರ ಮಹಾ ಯೋಜನೆ ರೂಪಿಸಿದಾಗ ಸರ್ಕಾರಿ ಉದ್ಯಾನ (ಸಂರಕ್ಷಣೆ) ಕಾಯ್ದೆಯನ್ನು ಉಲ್ಲಂಘಿಸಿತು. ಶಾಸಕರ ಭವನದಲ್ಲಿ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಲಾಯಿತು.

1997:ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದನ್ನು ಪ್ರಶ್ನಿಸಿ ವಕೀಲ ಎನ್‌.ಪಿ. ಅಮೃತೇಶ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಆದರೆ, ಅದು ತಿರಸ್ಕಾರಗೊಂಡಿತು.

1998-2003:ಪರಿಸರವಾದಿ ಬಿಮಲ್ ದೇಸಾಯಿ ಮತ್ತು 13 ಮಂದಿ ಸಮಾನ ಮನಸ್ಕ ಸ್ನೇಹಿತರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಅದರ ಫಲವಾಗಿ ಉದ್ಯಾನದ ನಾಲ್ಕು ಕಡೆ ಗೇಟ್‌ಗಳು ನಿರ್ಮಾಣವಾದವು. ರಾತ್ರಿ 10ರಿಂದ ಬೆಳಿಗ್ಗೆ 8ರವರೆಗೆ ವಾಹನಗಳ ಸಂಚಾರಕ್ಕೆ ಅವಕಾಶ ನಿಲ್ಲಿಸಲಾಯಿತು. ರಾಜಕೀಯ ರ‍್ಯಾಲಿಗಳು ಉದ್ಯಾನದ ಮೂಲಕ ಸಾಗುವುದನ್ನು ನಿಲ್ಲಿಸಲಾಯಿತು. ಆದರೆ, ಶಾಸಕರ ಭವನದ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣ ಮಾಡುವುದರ ವಿರುದ್ಧ ಹೂಡಿದ್ದ ಪ್ರಕರಣಗಳಲ್ಲಿ ಪರಿಸರವಾದಿಗಳಿಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆಯಾಯಿತು. ಕಬ್ಬನ್ ಉದ್ಯಾನ ಸಂರಕ್ಷಣೆಗಾಗಿ ಪರಿಸರ ಹೋರಾಟಗಾರ ಲಿಯೊ ಸಲ್ಡಾನ ಅವರು ಕೂಡ ಹಲವು ದಾವೆಗಳನ್ನು ನ್ಯಾಯಾಲಯದಲ್ಲಿ ಹೂಡಿದ್ದರು.

2001:ಕಬ್ಬನ್ ಉದ್ಯಾನದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿತು. ಜಿ.ಕೆ.ಗೋವಿಂದರಾವ್‌ v/s ಕರ್ನಾಟಕ ರಾಜ್ಯ ಸರ್ಕಾರದ ಪ್ರಕರಣದಲ್ಲಿನ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಂಡು ಈ ಆದೇಶ ನೀಡಿತು.

2004-2018:ಸೆಂಚುರಿ ಕ್ಲಬ್, ಪ್ರೆಸ್‌ ಕ್ಲಬ್, ಟೆನ್ನಿಸ್ ಕ್ಲಬ್, ಯಂಗ್ ಮನ್ ಕ್ರಿಶ್ಚಿಯನ್ ಅಸೋಸಿಯೇಷನ್ (ವೈಎಂಸಿಎ), ಹೈಕೋರ್ಟ್‌ ಮತ್ತು ಇತರ ಸಂಸ್ಥೆಗಳು ಕಬ್ಬನ್ ಉದ್ಯಾನದ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿವೆ ಎಂದು ಆರೋಪಿಸಿ ಕಬ್ಬನ್ ಉದ್ಯಾನದ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಅವರು ನ್ಯಾಯಾಲಯದಲ್ಲಿ ಹಲವು ದೂರುಗಳನ್ನು ದಾಖಲಿಸಿದರು.

2010:ರಸ್ತೆ ವಿಸ್ತರಣೆಗಾಗಿ ಬಿಬಿಎಂಪಿಗೆ 1,223 ಚದರ ಮೀಟರ್, ಮೆಟ್ರೊ ರೈಲು ಯೋಜನೆಗೆ ಲಾಲ್‌ಬಾಗ್ ಉದ್ಯಾನದಲ್ಲಿ 1,135 ಚದರ ಮೀಟರ್, ಕಬ್ಬನ್‌ ಪಾರ್ಕ್‌ನಲ್ಲಿ 2,126 ಚದರ ಮೀಟರ್‌, ವಿಧಾನಸೌಧ, ಹೈಕೋರ್ಟ್‌, ಪ್ರಧಾನ ಅಂಚೆ ಕಚೇರಿ ಸುತ್ತಮುತ್ತ 11,160 ಚದರ ಮೀಟರ್ ಅನ್ನು ರಾಜ್ಯ ಸರ್ಕಾರ ಡಿನೋಟಿಫೈ ಮಾಡಿತು.

2015:ಎಲ್ಲಾ 27 ಸರ್ಕಾರಿ ಕಟ್ಟಡಗಳು ಮತ್ತು ಅವುಗಳನ್ನು ಸುತ್ತುವರಿದ 193 ಎಕರೆ ಪ್ರದೇಶವನ್ನು ಕಬ್ಬನ್ ಪಾರ್ಕ್ ವ್ಯಾಪ್ತಿಯಿಂದ ಹೊರಗಿಡಲು 2015ರ ಜುಲೈನಲ್ಲಿ ಸಚಿವ ಸಂಪುಟ ತೀರ್ಮಾನಿಸಿತು. ಹೈಕೋರ್ಟ್‌, ಪ್ರೆಸ್‌ ಕ್ಲಬ್, ರಾಜ್ಯ ಚುನಾವಣಾ ಆಯುಕ್ತರ ಕಚೇರಿ, ಇಂದಿರಾ ಗಾಂಧಿ ಮಕ್ಕಳ ಗ್ರಂಥಾಲಯ, ಸಚಿವಾಲಯ ಕ್ಲಬ್, ವೆಂಕಟಪ್ಪ ಗ್ಯಾಲರಿ, ಪ್ರಧಾನ ಅಂಚೆ ಕಚೇರಿ, ಯವನಿಕಾ ಯುವ ಕೇಂದ್ರ, ವೈಎಂಸಿಎ ಕಟ್ಟಡಗಳು ಮತ್ತು ಅದರ ಸುತ್ತಮುತ್ತಲ ಜಾಗ ಪಾರ್ಕ್ ವ್ಯಾಪ್ತಿಯಿಂದ ಹೊರಗುಳಿದವು.

2019:ಕಬ್ಬನ್‌ ಪಾರ್ಕ್‌ನ ಪ್ರೆಸ್‌ ಕ್ಲಬ್‌ ಪಕ್ಕದಲ್ಲಿನ ರಾಜ್ಯ ವಕೀಲರ ಪರಿಷತ್ ಕಟ್ಟಡ ಕೆಡವಿ ಅಲ್ಲಿ ಏಳು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT