ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನಕಾರಿ ಪೋಸ್ಟ್; ಯುವಕ ಬಂಧನ

100ಕ್ಕೂ ಹೆಚ್ಚು ಸಿಮ್‌ಕಾರ್ಡ್‌ ಜಪ್ತಿ
Last Updated 22 ಸೆಪ್ಟೆಂಬರ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಗಣ್ಯ ವ್ಯಕ್ತಿಗಳು ಹಾಗೂ ಧರ್ಮಗಳ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲವಾದ ಪೋಸ್ಟ್‌ ಪ್ರಕಟಿಸುತ್ತಿದ್ದ ಆರೋಪದಡಿಹೇಮಂತ್‌ಕುಮಾರ್ (28) ಎಂಬಾತನನ್ನು ಸೈಬರ್‌ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ರಾಮ್‌ಪುರದ ಹೇಮಂತ್‌ಕುಮಾರ್, ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿದ್ದ. ನಗರಕ್ಕೆ ಬಂದು ಅಂದರಹಳ್ಳಿ ಮುಖ್ಯರಸ್ತೆಯ ಸಾಯಿಬಾಬಾ ಲೇಔಟ್‌ನಲ್ಲಿ ನೆಲೆಸಿದ್ದ. ಫೇಸ್‌ಬುಕ್‌ನಲ್ಲಿ ‘ಹೇಮಂತ್‌ ಗೌಡ’ ಹೆಸರಿನಲ್ಲಿ ಖಾತೆ ತೆರೆದು ಪೋಸ್ಟ್‌ ಪ್ರಕಟಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

‘ಬಿಬಿಎಂಪಿ ಕಚೇರಿ ಬಳಿ ರಿಟ್ಜ್‌ ಕಾರಿನಲ್ಲಿ ಹೊರಟಿದ್ದ ವೇಳೆಯಲ್ಲೇ ಆತನನ್ನು ಬಂಧಿಸಿದ್ದೇವೆ. ಆತನಿಂದ ಐದು ಮೊಬೈಲ್‌ಗಳು, ಡಾಂಗಲ್‌ಗಳು, ಎಟಿಎಂ ಕಾರ್ಡ್‌ಗಳು, ಅನ್ಯ ವ್ಯಕ್ತಿಗಳ ಹೆಸರಿನಲ್ಲಿರುವ ವಾಹನ ನೋಂದಣಿ ಪುಸ್ತಕ, ಪಾನ್‌ ಕಾರ್ಡ್‌, ಆಧಾರ್ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಆರೋಪಿ, ಅದಕ್ಕಾಗಿ ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದ. ಆತನ ಬಳಿ ಏರ್‌ಸೆಲ್, ಏರ್‌ಟೆಲ್, ಜಿಯೊ, ರಿಲೆಯನ್ಸ್, ಐಡಿಯಾ, ವೊಡಾಪೋನ್ ಕಂಪನಿಯ 100ಕ್ಕೂ ಹೆಚ್ಚು ಸಿಮ್‌ ಕಾರ್ಡ್‌ಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕಗಳು ದೊರಕಿವೆ. ಅನ್ಯ ವ್ಯಕ್ತಿಗಳ ಗುರುತಿನ ಚೀಟಿ ಕೊಟ್ಟು ಸಿಮ್‌ ಕಾರ್ಡ್‌ ಖರೀದಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತ, ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಅಡ್ಮಿನ್ ಸಹ ಆಗಿದ್ದಾನೆ’ ಎಂದು ಪೊಲೀಸರು ಹೇಳಿದರು.

’ಆರೋಪಿ, ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಹಾಗೂ ಶಾಸಕ ಅಶೋಕ ಬಗ್ಗೆ ಅನುಚಿತ ಹಾಗೂ ಅಶ್ಲೀಲ ಪೋಸ್ಟ್ ಹಾಕಿದ್ದ. ಆ ಸಂಬಂಧ ಕೋದಂಡರಾಮ ಎಂಬುವರು ಸೆಪ್ಟೆಂಬರ್ 17ರಂದು ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT