ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಆಸ್ತಿಗಾಗಿ ತಂದೆಯನ್ನು ಗೃಹ ಬಂಧನದಲ್ಲಿಟ್ಟ ಪುತ್ರಿ

ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
Published 16 ಮಾರ್ಚ್ 2024, 23:34 IST
Last Updated 16 ಮಾರ್ಚ್ 2024, 23:34 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿಗಾಗಿ ತಂದೆಯನ್ನು ಅಕ್ರಮ ಬಂಧನಲ್ಲಿಟ್ಟು ಹಿಂಸೆ ನೀಡಿದ ಪುತ್ರಿ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ವೆಂಕಟಪ್ಪ ಲಕ್ಷ್ಮಿನಾರಾಯಣ್ ಅವರನ್ನು ಗೃಹ ಬಂಧನಲ್ಲಿಟ್ಟಿರುವ ಅವರ ಪುತ್ರಿ ತೇಜವತಿ ಲಕ್ಷ್ಮಿನಾರಾಯಣ ಹಾಗೂ ಪ್ರೇಮಾ ಜವರೇಗೌಡ, ಕಂಪನಿ ಮುಖ್ಯ ಲೆಕ್ಕಾಧಿಕಾರಿ ಚೌಡರೆಡ್ಡಿ, ಲೆಕ್ಕಪರಿಶೋಧಕ ಆರ್‌.ಮೋಹನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ವೆಂಕಟಪ್ಪ ಅವರ ಪುತ್ರ ವಿ.ಎಲ್‌. ಭರತ್‌ರಾಜ್‌ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘1995ರಲ್ಲಿ ನಮ್ಮ ತಂದೆ ಸಿದ್ದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಾರಿಮನ್‌ ಶೆಲ್ಟರ್‌ ಕಂಪನಿ ಸ್ಥಾಪಿಸಿದ್ದರು. ಅದೇ ಕಂಪನಿಯಲ್ಲಿ ತಂದೆ ಶೇ 99.99ರಷ್ಟು ಷೇರು ಹೊಂದಿದ್ದಾರೆ. ಅದಾದ ಮೇಲೆ 2017ರಲ್ಲಿ ನಾರಿಮನ್‌ ಎಂಬ ಇನ್ನೊಂದು ಕಂಪನಿ ಸ್ಥಾಪಿಸಿದ್ದರು. ಎರಡು ಕಂಪನಿಗೆ ಅವರೇ ಮುಖ್ಯಸ್ಥರಾಗಿದ್ದರು. ಈ ಮಧ್ಯೆ ತಂದೆ ಹಾಗೂ ತಾಯಿ ವಿಜಯಲಕ್ಷ್ಮಿ ಅವರ ನಡುವೆ ಆಸ್ತಿ ವಿಚಾರಕ್ಕೆ ವಿವಾದ ಉಂಟಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ತಂದೆಗೆ ಆರೋಗ್ಯ ಹದಗೆಟ್ಟ ಕಾರಣಕ್ಕೆ ಕಂಪನಿಗಳ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು, ಕಾನೂನು ಬಾಹಿರವಾಗಿ ಕಂಪನಿಯ ಸ್ವತ್ತನ್ನು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಿದ್ದರು. ಕಂಪನಿಯ ರಕ್ಷಣೆ ಮಾಡುವಂತೆ ತಂದೆಯವರು, ನನ್ನನ್ನು ನಾರಿಮನ್‌ ಶೆಲ್ಟರ್‌ ಕಂಪನಿಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಾರಿಮನ್‌ ಕಂಪನಿಗೆ ನಿರ್ದೇಶಕನಾಗಿ ನೇಮಿಸಿದ್ದರು. ಕಂಪನಿ ಹಣಕಾಸು ವ್ಯವಹಾರ ಪರಿಶೀಲನೆ ವೇಳೆ ಚೌಡರೆಡ್ಡಿ ಹಾಗೂ ಮೋಹನ್‌ ಅವರು ಸುಳ್ಳು ಲೆಕ್ಕ ತೋರಿಸಿ, ₹10 ಕೋಟಿಯಿಂದ ₹15 ಕೋಟಿ ವಂಚಿಸಿರುವುದು ಪತ್ತೆಯಾಗಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ವೃತ್ತಿಯಲ್ಲಿ ವೈದ್ಯೆಯಾಗಿರುವ ಸಹೋದರಿ ಅವರು ತಂದೆಯನ್ನು ಬಲವಂತವಾಗಿ ಮನೆಗೆ ಕರೆದೊಯ್ದು ಬಂಧನದಲ್ಲಿ ಇಟ್ಟಿದ್ದಾರೆ. ಪೆ.14ರಂದು ನಡೆದ ಕಂಪನಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ದೇಶಕ ಹುದ್ದೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ. ನಂತರ, ತಂದೆಯ ಸಹಿಯನ್ನು ನಕಲು ಮಾಡಿ ಷೇರುಗಳನ್ನು ತೇಜವತಿ ಹಾಗೂ ಪ್ರೇಮಾ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ತಂದೆಯನ್ನು ಭೇಟಿಯಾಗಲೂ ನನಗೆ ಅವಕಾಶ ನೀಡುತ್ತಿಲ್ಲ. ತಂದೆಗೆ ಬೇರೆ ಯಾವುದೊ ಔಷಧ ನೀಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT