ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪೂರ್ವ: ಡೆಂಗಿ ನಿಯಂತ್ರಣಕ್ಕೆ ಸೂಚನೆ

ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸುವಂತೆ ಆರೋಗ್ಯ ಇಲಾಖೆ ಮನವಿ
Published 14 ಮೇ 2024, 23:30 IST
Last Updated 14 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಆಗುತ್ತಿರುವುದರಿಂದ ಡೆಂಗಿ ಜ್ವರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. 

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಈ ವರ್ಷ 26,476 ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 2,877 ಡೆಂಗಿ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಈ ವೇಳೆ 18,597 ಮಾದರಿಗಳ ಪರೀಕ್ಷೆಯಲ್ಲಿ 1,725 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಶಂಕಿತ ಪ್ರಕರಣಗಳ ತಪಾಸಣೆ ಹಾಗೂ ಪರೀಕ್ಷೆ ಹೆಚ್ಚಳದಿಂದ ದೃಢ ಪ್ರಕರಣಗಳಲ್ಲಿಯೂ ಏರಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. 

ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಸದ್ಯ ನಿಯಂತ್ರಣದಲ್ಲಿದ್ದು, ಯಾವುದೇ ಸಾಂಕ್ರಾಮಿಕ ಸ್ಫೋಟ ವರದಿಯಾಗಿಲ್ಲ. ಈ ಜ್ವರದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆಗೆ ಈಗಾಗಲೆ ಸಭೆ ನಡೆಸಿದ್ದಾರೆ. ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶಕ್ಕೂ ಕ್ರಮವಹಿಸಲಾಗಿದೆ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ, ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದೆ. 

ಡೆಂಗಿ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಈ ಜ್ವರವು ಹರಡುತ್ತದೆ. ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಡೆಂಗಿ ಜ್ವರ ಇದ್ದರೆ ದೇಹದ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತದೆ. ರೋಗ ಲಕ್ಷಣಗಳಿಗೆ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದೆ. 

ಲಕ್ಷಣವಿದ್ದಲ್ಲಿ ಸಂಪರ್ಕಿಸಿ: ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಶಂಕಿತ ಡೆಂಗಿ ಜ್ವರ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ. 

ಈಡಿಸ್‌ ಲಾರ್ವಾ ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸಹಕಾರವನ್ನು ನೀಡಿ, ಅವರು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡೆಂಗಿ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳು ।ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗೆ ಮನೆಯಲ್ಲಿನ ನೀರಿನ ತೊಟ್ಟಿ ಬ್ಯಾರಲ್ ಡ್ರಮ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು ।ಫ್ರಿಡ್ಜ್‌ ಹಿಂಭಾಗ ಹೂ ಕುಂಡ ಮತ್ತು ಹೂ ಕುಂಡದ ಕೆಳಗಿನ ತಟ್ಟೆಗಳಲ್ಲಿ ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ಖಾಲಿ ಮಾಡಬೇಕು ।ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ।ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ಧರು ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು ।ಡೆಂಗಿ ಮತ್ತು ಚಿಕೂನ್‌ಗುನ್ಯ ರೋಗಿಗಳೂ ತಪ್ಪದೆ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು ।ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಪರದೆ ಸೊಳ್ಳೆ ಬತ್ತಿ ಮುಲಾಮು ದ್ರಾವಣವನ್ನು ಉಪಯೋಗಿಸಬೇಕು ।ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಯ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT