ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಲಕ್ಷ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ *‘ಶುಚಿ–ಮುಟ್ಟಿನ ನೈರ್ಮಲ್ಯ ಯೋಜನೆ’ಗೆ ಮರುಚಾಲನೆ
Published 28 ಫೆಬ್ರುವರಿ 2024, 16:05 IST
Last Updated 28 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲೆಗಳಲ್ಲಿ ಓದುತ್ತಿರುವ 19 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು. ಈ ಮೂಲಕ ಹದಿಹರೆಯದವರಲ್ಲಿ ಋತುಸ್ರಾವದ ಶುಚಿತ್ವ ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಆರೋಗ್ಯ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಶುಚಿ–ಮುಟ್ಟಿನ ನೈರ್ಮಲ್ಯ ಯೋಜನೆ’ಗೆ ಮರುಚಾಲನೆ ನೀಡಿ, ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘2013ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಬಳಿಕ ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಯೋಜನೆ ಸ್ಥಗಿತಗೊಂಡಿತ್ತು. ಈಗ ಯೋಜನೆಗೆ ಮರು ಚಾಲನೆ ನೀಡಿ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದೇವೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಕಾಲೇಜುಗಳ, 10ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಲಾ ಒಂದು ‘ಶುಚಿ’ ಕಿಟ್‌ ವಿತರಿಸಲಾಗುತ್ತದೆ. ಒಂದು ಕಿಟ್‌ನಲ್ಲಿ 8 ತಿಂಗಳಿಗೆ ಸಾಕಾಗುವಷ್ಟು ಸ್ಯಾನಿಟರಿ ಪ್ಯಾಡ್‌ಗಳು ಇರುತ್ತವೆ. ಈ ಬಾರಿ ಸ್ಯಾನಿಟರಿ ಪ್ಯಾಡ್‌ಗಳನ್ನು ನೇರವಾಗಿ ಶಾಲಾ–ಕಾಲೇಜುಗಳಿಗೆ ಮತ್ತು ವಸತಿ ನಿಲಯಗಳಿಗೆ ಸರಬರಾಜು ಮಾಡಲಾಗುತ್ತಿದೆ’ ಎಂದು ಹೇಳಿದರು. 

‘ಮುಜುಗರದ ಕಾರಣ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ. ಋತುಸ್ರಾವದ ಬಗ್ಗೆ ಈಗಲೂ ಕೆಲವರಲ್ಲಿ ಅವೈಜ್ಞಾನಿಕ ಅಭಿಪ್ರಾಯಗಳಿವೆ. ಅಡುಗೆ ಮನೆಗೆ ಹೋಗಬಾರದು, ದೇವರ ಮನೆಗೆ ಹೋಗಬಾರದೆಂಬ ಮೂಢನಂಬಿಕೆಗಳಿವೆ. ಋತುಸ್ರಾವದ ವೇಳೆ ಆಗುವ ಸಮಸ್ಯೆಗಳ ನಿವಾರಣೆಗೆ ನೆರವಾಗಬೇಕಿದೆ’ ಎಂದು ತಿಳಿಸಿದರು. 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ, ‘ಕೋವಿಡ್ ಕಾಣಿಸಿಕೊಂಡ ಬಳಿಕ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಿದೆ. ಆರೋಗ್ಯವೇ ನಮ್ಮ ಆಸ್ತಿ. ಆದ್ದರಿಂದ ಆರೋಗ್ಯವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಮೊಟ್ಟೆ, ಚಿಕ್ಕಿ ಹಾಗೂ ರಾಗಿ ಮಾಲ್ಟ್‌ಗಳನ್ನು ನೀಡಲಾಗುತ್ತಿದೆ. ನಮ್ಮ ಖಜಾನೆ ಖಾಲಿಯಾಗಿಲ್ಲ’ ಎಂದು ಹೇಳಿದರು. 

‘ಮುಟ್ಟಿನ ಕಪ್‌ಗೆ ಉತ್ತಮ ಸ್ಪಂದನೆ’

‘ಐದು ತಿಂಗಳ ಹಿಂದೆ ಮಂಗಳೂರಿನಲ್ಲಿ ಚಾಲನೆ ನೀಡಲಾದ ‘ಶುಚಿ- ನನ್ನ ಮೈತ್ರಿ ಮುಟ್ಟಿನ ಕಪ್’ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಯ 15 ಸಾವಿರ ವಿದ್ಯಾರ್ಥಿನಿಯರಿಗೆ ಈ ಕಪ್‌ಗಳನ್ನು ವಿತರಿಸಲಾಗಿದೆ. ಇದರ ಬಳಕೆ ಬಗ್ಗೆ ಅನುಮಾನವಿತ್ತು. ಆದ್ದರಿಂದ ವರದಿ ತರಿಸಿಕೊಳ್ಳಲಾಗಿದ್ದು ಏಳು ಸಾವಿರ ವಿದ್ಯಾರ್ಥಿನಿಯರು ಬಳಸುತ್ತಿದ್ದಾರೆ. ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.  ‘ಸ್ಯಾನಿಟರಿ ಪ್ಯಾಡ್‌ಗಳ ವಿಲೇವಾರಿ ಕೂಡ ಮುಖ್ಯವಾಗುತ್ತದೆ. ಈ ಪ್ಯಾಡ್‌ಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಪ್ಯಾಡ್‌ಗಳನ್ನು ಪರಿಚಯಿಸುವ ಬಗ್ಗೆಯೂ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT