ಬೀದಿನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳಿಗೆ ಗಾಯ

7

ಬೀದಿನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳಿಗೆ ಗಾಯ

Published:
Updated:

ಬೆಂಗಳೂರು: ಶಾಲೆಯ ಬಳಿ ಆಟೊದಿಂದ ಇಳಿಯುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಲ್ಕೈದು ಬೀದಿ ನಾಯಿಗಳು ಗಾಯಗೊಳಿಸಿವೆ.

ರಾಜಾಜಿನಗರ ಆರನೇ ಬ್ಲಾಕ್‌ನ ಗುಬ್ಬಣ್ಣ ಲೇಔಟ್‌ ಬಳಿ ಇರುವ ಸೇಂಟ್‌ ಮಿರಾಸ್‌ ಶಾಲೆಯ ಎದುರು ನಾಯಿಗಳು ದಾಳಿ ನಡೆಸಿ ಐವರಿಗೆ ಗಾಯ ಮಾಡಿವೆ. 9ನೇ ತರಗತಿ ಓದುತ್ತಿರುವ ಬಾಲಕ ಆಕಾಶ್‌ ಹಾಗೂ ಯುಕೆಜಿ ಬಾಲಕಿ ಸಾಯಿಸಿರಿ ಗಾಯಗೊಂಡಿದ್ದಾರೆ. ಅವರೊಂದಿಗೆ ಇಬ್ಬರು ಪೋಷಕರು ಹಾಗೂ ಆಟೊ ಡ್ರೈವರ್‌ ಒಬ್ಬರನ್ನು ಕೂಡ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಚಿವೆ.

ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಮಕ್ಕಳು ಮನೆಗೆ ಮರಳಿದ್ದಾರೆ.

‘ಮಗನ ತೊಡೆಯ ಭಾಗಕ್ಕೆ ನಾಯಿ ಕಚ್ಚಿದೆ. ನೋವಿನಿಂದ ಅವನು ನರಳುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದೆವು. ಮೂರು ದಿನಕ್ಕೊಮ್ಮೆ ಐದು ಚುಚ್ಚುಮದ್ದು ಕೊಡಿಸುವಂತೆ ಎಂದು ವೈದ್ಯರು ಹೇಳಿದ್ದಾರೆ. ಬಿಬಿಎಂಪಿ ಅವರಿಗೆ ಕರೆ ಮಾಡಿ ತಿಳಿಸಿದೆವು. ಆ ಶಾಲೆಯ ಬಳಿ ಯಾವಾಗಲೂ ನಾಯಿಗಳು ಹೆಚ್ಚಿವೆ. ಆದರೆ ಅವು ದಾಳಿ ಮಾಡಿದ್ದನ್ನು ನಾನು ಕೇಳಿಲ್ಲ. ನಾವು ಕೂಲಿ ಮಾಡಿ ಜೀವನ ಸಾಗಿಸುವವರು. ಆಸ್ಪತ್ರೆ ವೆಚ್ಚ ಭರಿಸುವುದು ಕಷ್ಟ’ ಎಂದು ಆಕಾಶ್‌ ತಾಯಿ ಸೆಲ್ವಿ ಅಳಲು ತೋಡಿಕೊಂಡರು.

‘ಬೆಳಿಗ್ಗೆ 8.30ಕ್ಕೆ ನಮಗೆ ಘಟನೆ ಬಗ್ಗೆ ತಿಳಿಯಿತು. ತಕ್ಷಣವೇ ಸ್ಥಳಕ್ಕೆ ಹೋಗಿ ನಾಯಿಗಳನ್ನು ಹಿಡಿಯುವವರಿಗೆ ಕರೆ ಮಾಡಿದೆ. ಅವರು ಬೇರೆ ಕೆಲಸದಲ್ಲಿ ನಿರತರಾಗಿದ್ದರು. 10.30ಕ್ಕೆ ಬಂದರು. ನಾಲ್ಕು ನಾಯಿಗಳನ್ನು ಹಿಡಿದಿದ್ದಾರೆ. ಇದರಲ್ಲಿ ಮಕ್ಕಳನ್ನು ಕಚ್ಚಿರುವ ನಾಯಿ ಕೂಡ ಸೇರಿದೆ. ರಾಜಕಾಲುವೆಯೊಳಕ್ಕೆ ಓಡುತ್ತಿದ್ದ ನಾಯಿಗಳನ್ನು ಕಷ್ಟಪಟ್ಟು ಅವರು ಹಿಡಿದಿದ್ದಾರೆ’ ಎಂದು ರಾಜಾಜಿನಗರದ ಶ್ರೀರಾಮಮಂದಿರ ವಾರ್ಡ್‌ನ ಬಿಬಿಎಂಪಿ ಸದಸ್ಯೆ ದೀಪಾ ನಾಗೇಶ್ ಹೇಳಿದರು.

‘ಚಿಕಿತ್ಸೆಯ ವೆಚ್ಚ ಭರಿಸುವ ಕುರಿತು ಕಮಿಷನರ್‌ ಜೊತೆ ಚರ್ಚೆ ಮಾಡಲಿದ್ದೇನೆ. ಮುಂದಿನ ದಿನಗಳಲ್ಲಿ ನಾಯಿಗಳ ಕಡಿವಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ. ಕೈಗಾರಿಕಾ ಪ್ರದೇಶವಾಗಿದ್ದರಿಂದ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ನಾಯಿಗಳ ಸಂಖ್ಯೆ ಕೂಡ ಹೆಚ್ಚಿದೆ’ ಎಂದು ಅವರು ಹೇಳಿದರು.

ಇತ್ತೀಚೆಗೆ ವಿಭೂತಿಪುರದಲ್ಲಿ 11 ವರ್ಷದ ಬಾಲಕ ಪ್ರವೀಣ್‌ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈ ಬಾಲಕ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !