ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪನ್ನ ಮಾರಿದರೆ ಲಾಭದ ಆಮಿಷ: ನಾಲ್ವರು ಬಂಧನ

ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವಿರುದ್ಧ ಎಫ್ಐಆರ್‌
Last Updated 26 ಜನವರಿ 2023, 18:57 IST
ಅಕ್ಷರ ಗಾತ್ರ

ಬೆಂಗಳೂರು: ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಮಾರಿದರೆ ಕಮಿಷನ್ ಲೆಕ್ಕದಲ್ಲಿ ಉತ್ತಮ ಲಾಭ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪದಡಿ ‘ಇ–ಬಯೋಟೋರಿಯಂ ನೆಟ್‌ವರ್ಕ್’ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಂಪನಿಯ ನಿರ್ದೇಶಕ ಮಧ್ಯಪ್ರದೇಶದ ಸುನೀಲ್ ಜೋಶಿ (58), ವಿತರಕರಾದ ಗೋವಾದ ಪ್ರಮೋದ್ ಗೋಪಿನಾಥ್ (51), ಬೆಂಗಳೂರು ಸುಭಾಷ್‌ನಗರದ ಶೇಖ್ ಸಾದಿಕ್ ಅಲಿ (32) ಮತ್ತು ಎನ್‌. ಯೋಗೇಶ್ (44) ಬಂಧಿತರು.

‘ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವತಿಯಿಂದ ಅಂಬೇಡ್ಕರ್‌ ಭವನದಲ್ಲಿ ಜ. 15ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಜನರು ಸೇರಿದ್ದರು. ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಚೈನ್ ಲಿಂಕ್‌ ಮೂಲಕ ಮಾರಿದರೆ ಹೆಚ್ಚು ಲಾಭ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ವಸ್ತುಗಳನ್ನು ಖರೀದಿಸಲು ಪ್ರಚೋದಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾರ್ಯಕ್ರಮದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದರು. ವಂಚನೆ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಿರುವುದು ಗೊತ್ತಾಯಿತು. ಬಳಿಕ, ನಾಲ್ವರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳು ಜನರನ್ನು ವಂಚಿಸುತ್ತಿದ್ದ ಬಗ್ಗೆ ಪುರಾವೆಗಳು ಲಭ್ಯವಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ತಿಳಿಸಿದರು.

ಟೆಕ್ಸ್‌ಟೈಲ್ಸ್‌ ಹೆಸರಿನಲ್ಲಿ ಅಕ್ರಮ ವ್ಯವಹಾರ: ‘ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿಯ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಟೆಕ್ಸ್‌ಟೈಲ್ಸ್‌ ಹೆಸರಿನಲ್ಲಿ ಅಕ್ರಮವಾಗಿ ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಕಂಪನಿಯಿಂದ ಮಾರಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ಬಯೋ ಮ್ಯಾಗ್ನೆಟಿಕ್ ಬ್ರೇಸ್‌ಲೆಟ್ (ಒಂದಕ್ಕೆ ₹ 8,800), ನಿದ್ದೆ ವೇಳೆ ಗೊರಕೆ ತಪ್ಪಿಸುವ ಪಟ್ಟಿ (ಒಂದಕ್ಕೆ ₹5,760) ದಿಂಬು (ಒಂದಕ್ಕೆ ₹7,400ರಿಂದ ₹ 19,080) ಹಾಗೂ ನೀರಿನ ಬಾಟಲಿ ಹೊದಿಕೆ (ಒಂದಕ್ಕೆ ₹5,100) ಉತ್ಪನ್ನಗಳನ್ನು ಕಂಪನಿಯವರು ಬಿಡುಗಡೆ ಮಾಡಿದ್ದರು.’

‘ಯಾವುದಾದರೊಂದು ಉತ್ಪನ್ನ ಖರೀದಿಸುವ ವ್ಯಕ್ತಿ, ತನ್ನಿಂದ ಮೂರು ಜನರಿಗೆ ಉತ್ಪನ್ನಗಳನ್ನು ಮಾರಿದರೆ ಲಾಭ ನೀಡುವುದಾಗಿ ಕಂಪನಿ ಹೇಳಿತ್ತು. ಇದನ್ನು ನಂಬಿದ್ದ 2 ಸಾವಿರ ಮಂದಿ ಕಂಪನಿ ಸೇರಿದ್ದರು. ಇತ್ತೀಚಿನ ದಿನಗಳಲ್ಲಿ ಜನರಿಗೆ ಲಾಭ ನೀಡದೇ ಕಂಪನಿ ವಂಚಿಸಿರುವ ಬಗ್ಗೆ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.

₹38 ಲಕ್ಷ ಹಣವಿದ್ದ ಖಾತೆ ಜಪ್ತಿ

‘ಕಂಪನಿ ಖಾತೆಗೆ ಇದುವರೆಗೂ ₹ 2 ಕೋಟಿಯಿಂದ ₹ 3 ಕೋಟಿವರೆಗೆ ಹಣ ಜಮೆ ಆಗಿರುವ ಮಾಹಿತಿ ಇದೆ. ಕಂಪನಿಯಿಂದ ವಂಚನೆ ಆಗಿರುವುದಾಗಿ 50 ಮಂದಿ ಹೇಳಿಕೆ ನೀಡಿದ್ದಾರೆ. ₹ 38 ಲಕ್ಷ ಹಣವಿದ್ದ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಂಪನಿ ಸ್ಥಾಪಕ ಜೋಶಿಗೆ ನೋಟಿಸ್’

‘2007ರಲ್ಲಿ ಕಂಪನಿ ಸ್ಥಾಪಿಸಿದ್ದ ಬಗ್ಗೆ ಮಾಹಿತಿ ಇದೆ. ಕಂಪನಿ ಸ್ಥಾಪಕ ಎನ್ನಲಾದ ಸಾಗರ್ ಕುಮಾರ್ ಜೋಶಿ ಎಂಬುವವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT