ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಹೆಚ್ಚಿಸಿಕೊಂಡ ಪರಿಸರ ಸ್ನೇಹಿ ರಾಖಿ

ತರಕಾರಿ, ಹಣ್ಣಿನ ಬೀಜಗಳಿಂದ ತಯಾರಿ | ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ
Published 30 ಆಗಸ್ಟ್ 2023, 19:21 IST
Last Updated 30 ಆಗಸ್ಟ್ 2023, 19:21 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಾ ಬಂಧನ ಹಬ್ಬದ ಪ್ರಯುಕ್ತ ವೈವಿಧ್ಯಮಯ ವಿನ್ಯಾಸದ ಪ್ಲಾಸ್ಟಿಕ್ ರಾಖಿಗಳು ಮಾರುಕಟ್ಟೆಗೆ ಬಂದಿದ್ದರೂ ಈ ಬಾರಿ ‘ಪರಿಸರ ಸ್ನೇಹಿ ರಾಖಿ’ಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.   

ಸಹೋದರ ಮತ್ತು ಸಹೋದರಿಯ ಪ್ರೀತಿಯ ಹಾಗೂ ರಕ್ಷಣೆಯ ಪ್ರತೀಕವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಪರಿಸರ ಸ್ನೇಹಿ ಹಬ್ಬಗಳ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಸರ್ಕಾರೇತರ ಸಂಘ–ಸಂಸ್ಥೆಗಳು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿ ಜಾಗೃತಿ ಮೂಡಿಸುತ್ತಿದೆ. ಇದರಿಂದಾಗಿ ನಗರದ ಜನರು ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಹೀಗಾಗಿ, ಕೆಲ ಸಂಸ್ಥೆಗಳು ಮಣ್ಣಿನಲ್ಲಿ ಕರಗುವ ರಾಖಿಗಳನ್ನು ತಯಾರಿಸಿ, ಮಾರುಕಟ್ಟೆಗೆ ಪರಿಚಯಿಸಿವೆ. ಇಲ್ಲಿನ ಸೀಡ್ ಪೇಪರ್ ಇಂಡಿಯಾ ಸಂಸ್ಥೆಯು ಈ ಬಾರಿ 50 ಸಾವಿರಕ್ಕೂ ಅಧಿಕ ಪರಿಸರ ಸ್ನೇಹಿ ರಾಖಿಗಳನ್ನು ಮಾರಾಟ ಮಾಡಿದೆ. 

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್, ಅಡಿಕೆ ಹಾಳೆಯಂತಹ ಕಚ್ಚಾ ವಸ್ತುಗಳಿಂದ ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ಪರಿಚಯಿಸುತ್ತಿರುವ ಸಂಸ್ಥೆಗಳು ರಾಖಿಗಳನ್ನೂ ತಯಾರಿಸಿ, ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿವೆ. ಹಣ್ಣು ಹಾಗೂ ತರಕಾರಿಯ ಬೀಜಗಳನ್ನೂ ರಾಖಿ ತಯಾರಿಸಲು ಬಳಸಿಕೊಳ್ಳಲಾಗುತ್ತಿದ್ದು, ಈ ಬೀಜಗಳನ್ನು ಪಾಟ್‌ಗಳಲ್ಲಿ ಹಾಕಿ ಪೋಷಿಸುವಂತೆ ಜಾಗೃತಿಯನ್ನೂ ಮೂಡಿಸುತ್ತಿವೆ. ಮೈಸೂರು, ಮಂಗಳೂರು ಸೇರಿ ವಿವಿಧ ನಗರಗಳಿಂದಲೂ ಪರಿಸರ ಸ್ನೇಹಿ ರಾಖಿಗಳು ಇಲ್ಲಿಗೆ ಪೂರೈಕೆಯಾಗುತ್ತಿದ್ದು, ಇದಕ್ಕೆ ಆನ್‌ಲೈನ್ ವೇದಿಕೆ ಮಾರುಕಟ್ಟೆ ಒದಗಿಸಿದೆ. 

ಮಣ್ಣಿನಲ್ಲಿ ಮೊಳಕೆ: ಗುಲಾಬಿ ಸೇರಿ ವಿವಿಧ ಹೂವುಗಳ ಒಣಗಿದ ದಳಗಳು, ದಪ್ಪನೆಯ ಪೇಪರ್‌ಗಳಿಂದ ರಾಖಿಗಳನ್ನು ಸಿದ್ಧಪಡಿಸಲಾಗಿದ್ದು, ಮಧ್ಯದಲ್ಲಿ ತುಳಸಿ, ಸೂರ್ಯಕಾಂತಿ, ಟೊಮೆಟೊ ಸೇರಿ ವಿವಿಧ ಹೂವು–ಹಣ್ಣಿನ ಬೀಜಗಳನ್ನು ಹಾಕಲಾಗುತ್ತಿದೆ. ಇದರಿಂದಾಗಿ ರಾಖಿಯನ್ನು ಬಿಚ್ಚಿದ ನಂತರ ಬಿಸಾಡುವ ಬದಲು, ಅದನ್ನು ಹೂವಿನ ಕುಂಡಗಳಲ್ಲಿ ಹಾಕುವಂತೆ ತಯಾರಕರು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ರಾಖಿಗಳ ವಿನ್ಯಾಸದ ಅನುಸಾರ ₹ 20 ರಿಂದ ₹ 250 ರವರೆಗೆ ಮಾರಾಟ ಮಾಡಲಾಗುತ್ತಿದೆ. 

‘ವರ್ಷದಿಂದ ವರ್ಷಕ್ಕೆ ಪ‍ರಿಸರ ಸ್ನೇಹಿ ರಾಖಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ತರಕಾರಿ ಬೀಜಗಳಿಂದ ರಾಖಿಗಳನ್ನು ಸಿದ್ಧಪಡಿಸಿ, ವಿತರಿಸಲಾಗಿದೆ. ರಾಜ್ಯದ ಹಲವೆಡೆ ಬೇಡಿಕೆ ಅನುಸಾರ ಪಾರ್ಸಲ್ ಕೂಡ ಮಾಡಲಾಗಿದೆ. ಹೆಚ್ಚಿನ ಬೇಡಿಕೆಗಳು ಬೆಂಗಳೂರಿನಿಂದ ಬರುತ್ತಿದೆ’ ಎಂದು ಮಂಗಳೂರಿನ ಪೇಪರ್ ಸೀಡ್ ವಿಲೇಜ್‌ ಸಂಸ್ಥೆಯ ಮಾರುಕಟ್ಟೆ ವಿಭಾಗದ ಪ್ರತಿನಿಧಿಯೊಬ್ಬರು ತಿಳಿಸಿದರು.

ಸೀಡ್ ಪೇಪರ್ ಇಂಡಿಯಾ ಸಂಸ್ಥೆ ತಯಾರಿಸಿದ ಪರಿಸರ ಸ್ನೇಹಿ ರಾಖಿ
ಸೀಡ್ ಪೇಪರ್ ಇಂಡಿಯಾ ಸಂಸ್ಥೆ ತಯಾರಿಸಿದ ಪರಿಸರ ಸ್ನೇಹಿ ರಾಖಿ

Quote - ರಕ್ಷಾ ಬಂಧನ ಹಬ್ಬದ ಅರ್ಥಪೂರ್ಣ ಆಚರಣೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲು ಪರಿಸರ ಸ್ನೇಹಿ ರಾಖಿ ಸಹಾಯಕ. ಆದ್ದರಿಂದ ಈ ಬಗ್ಗೆ ನಗರದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.  ।ರೋಶನ್ ರೇ ಸೀಡ್ ಪೇಪರ್ ಇಂಡಿಯಾ ಸಂಸ್ಥೆ ಸಂಸ್ಥಾಪಕ

Cut-off box - ಕುಂಡ ಸಹಿತ ಗಿಫ್ಟ್ ಬಾಕ್ಸ್ ಸೀಡ್ ಪೇಪರ್ ಇಂಡಿಯಾ ಸಂಸ್ಥೆಯು ರಕ್ಷಾ ಬಂಧನದ ಪ್ರಯುಕ್ತ ಪರಿಸರ ಸ್ನೇಹಿ ರಾಖಿ ಒಳಗೊಂಡ ಗಿಫ್ಟ್ ಬಾಕ್ಸ್ ಪರಿಚಯಿಸಿದೆ. ಇದರಲ್ಲಿ ಕುಂಕುಮ ಅಕ್ಕಿ ಮಣ್ಣು ಸಾವಯವ ಗೊಬ್ಬರ ತೆಂಗಿನ ನಾರಿನಿಂದ ತಯಾರಿಸಿದ ಕುಂಡವೂ ಇರಲಿದೆ. ರಾಖಿಗೆ ಸಹ ನೈಸರ್ಗಿಕ ಬಣ್ಣವನ್ನೇ ಬಳಸಲಾಗಿದೆ. 10 ವಿನ್ಯಾಸಗಳಲ್ಲಿ ಆಕರ್ಷಕ ಪರಿಸರ ಸ್ನೇಹಿ ರಾಖಿಗಳನ್ನು ಸಿದ್ಧಪಡಿಸಿ ವಿತರಿಸುತ್ತಿದೆ. ಈ ರಾಖಿಯನ್ನು ಕುಂಡದಲ್ಲಿ ಹಾಕಿ ನಿಯಮಿತವಾಗಿ ನೀರು ಹಾಕಿ ಪೋಷಿಸಿದಲ್ಲಿ ಅದರಲ್ಲಿನ ಬೀಜ ಮೊಳಕೆಯೊಡೆಯಲಿದೆ. ಅವು ಗಿಡವಾದ ನಂತರ ಹೂವು ಹಣ್ಣುಗಳನ್ನು ಪಡೆಯಬಹುದು. ‘ಹೂವು ಹಣ್ಣುಗಳು ಮತ್ತು ಅವುಗಳ ಬೀಜದಿಂದ ರಾಖಿಗಳನ್ನು ತಯಾರಿಸಲಾಗುತ್ತಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐಟಿ–ಬಿಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಖಿಗಳನ್ನು ಖರೀದಿಸಿದ್ದಾರೆ. ಸೈನಿಕರಿಗೂ ಪೂರೈಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಮಾರಾಟ ದುಪ್ಪಟ್ಟಾಗಿದೆ. ಹೊಸ ಹೊಸ ಅನ್ವೇಷಣೆಯನ್ನೂ ಮಾಡುತ್ತಿದ್ದೇವೆ’ ಎಂದು ಸೀಡ್ ಪೇಪರ್ ಇಂಡಿಯಾ ಸಂಸ್ಥೆ ಸಂಸ್ಥಾಪಕ ರೋಶನ್ ರೇ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT