ಭಾನುವಾರ, ಮಾರ್ಚ್ 26, 2023
23 °C

ನಕಲಿ ಐಪಿಎಸ್ ಅಧಿಕಾರಿ: ₹ 36.20 ಲಕ್ಷ ನಗದು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐಪಿಎಸ್ ಅಧಿಕಾರಿ ಎಂಬುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಬಂಧಿಸಲಾಗಿರುವ ಆರ್‌. ಶ್ರೀನಿವಾಸ್‌ (34) ವಿರುದ್ಧದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ತಲಘಟ್ಟಪುರ ಠಾಣೆ ಪೊಲೀಸರು, ₹ 36.20 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ಚಂದ್ರಾ ಲೇಔಟ್ ಮಾರುತಿನಗರದ ಶ್ರೀನಿವಾಸ್, ವೆಂಕಟನಾರಾಯಣ್ ಎಂಬುವವರಿಂದ ₹ 2.50 ಕೋಟಿ ಪಡೆದು ವಂಚಿಸಿದ್ದ. ಈ ಬಗ್ಗೆ ದಾಖಲಾಗಿದ್ದ ಪ್ರಕರಣದಲ್ಲಿ ಶ್ರೀನಿವಾಸ್‌ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಮತ್ತಷ್ಟು ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.

‘ಬಿಎಂಡಬ್ಲ್ಯು, ರಾಯಲ್ ಎನ್‌ಫೀಲ್ಡ್ ಸೇರಿದಂತೆ ನಾಲ್ಕು ಬೈಕ್, ಇನ್ನೋವಾ ಕಾರು ಹಾಗೂ 2 ಐಫೋನ್ ಜಪ್ತಿ ಮಾಡಲಾಗಿದೆ. ಆಟಿಕೆ ಪಿಸ್ತೂಲ್, 4 ವಾಕಿಟಾಕಿ ಹಾಗೂ ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಡಿಪ್ಲೊಮಾ ಮುಗಿಸಿ ಐಷಾರಾಮಿ ಜೀವನ: ‘ಶ್ರೀನಿವಾಸ್ ಅವರ ತಂದೆ–ತಾಯಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಶ್ರೀನಿವಾಸ್‌ನನ್ನು ಮಗುವಿದ್ದಾಗಿನಿಂದ ಚಂದ್ರಾಲೇಔಟ್ ಮಾರುತಿನಗರದ ಎಂ. ರಾಜು ಎಂಬುವರು ಸಾಕಿದ್ದರು. ಕುಮಾರಸ್ವಾಮಿ ಲೇಔಟ್‌ನ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದ್ದ ಶ್ರೀನಿವಾಸ್, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಸಿ.ಎ ವ್ಯಾಸಂಗ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಬನ್ನೇರುಘಟ್ಟದ ಶಾಲೆಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸಕ್ಕೆ ಸೇರಿದ್ದ. ಅದೇ ಶಾಲೆಯಲ್ಲಿದ್ದ ರಮ್ಯಾ ಎಂಬುವರನ್ನು ಪರಿಚಯ ಮಾಡಿಕೊಂಡು, ಸಲುಗೆ ಬೆಳೆಸಿದ್ದ. ಐಷಾರಾಮಿ ಜೀವನ ನಡೆಸುವುದಕ್ಕಾಗಿ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ 2010ರಲ್ಲಿ ಎರಡು ಕಾರು ಕದ್ದಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ, ಜಾಮೀನು ಮೇಲೆ ಹೊರಬಂದಿದ್ದ’ ಎಂದು ತಿಳಿಸಿದರು.

‘ಸಿನಿಮಾದಲ್ಲಿ ಬರುತ್ತಿದ್ದ ಪೊಲೀಸ್ ಪಾತ್ರಗಳನ್ನು ಗಮನಿಸುತ್ತಿದ್ದ ಆರೋಪಿ, ಅದರಂತೆ ಸಮವಸ್ತ್ರ ಖರೀದಿಸಿದ್ದ. ಐಪಿಎಸ್ ಅಧಿಕಾರಿ, ಕೇಂದ್ರ ಗುಪ್ತದಳದ ಅಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿ ಹಾಗೂ ಸೇನೆ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಜನರಿಗೆ ಹಲವು ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದನೆಂಬುದು ಗೊತ್ತಾಗಿದೆ. ಈತನ ವಿರುದ್ಧ ಮತ್ತಷ್ಟು ಮಂದಿ ದೂರು ನೀಡುವ ಸಾಧ್ಯತೆ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

‘ಆರೋಪಿ ಮಾತು ನಂಬಿದ್ದ ಹಲವರು ಆತನ ಜೊತೆ ಫೋಟೊ ತೆಗೆಸಿಕೊಂಡಿದ್ದರು. ಮನೆ ಹಾಗೂ ಕಾರ್ಯಕ್ರಮಗಳಿಗೆ ಕರೆದು ಸನ್ಮಾನಿಸಿದ್ದರು’ ಎಂದು ತಿಳಿಸಿದರು.

ವೈದ್ಯನೆಂದು ನಕಲಿ ಚೀಟಿ: ‘ಎಂಬಿಬಿಎಸ್ ಪೂರ್ಣಗೊಳಿಸಿರುವುದಾಗಿಯೂ ಹೇಳುತ್ತಿದ್ದ ಆರೋಪಿ ಶ್ರೀನಿವಾಸ್, ಕರ್ನಾಟಕ ವೈದ್ಯಕೀಯ ಮಂಡಳಿಯ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಇದನ್ನು ತೋರಿಸಿ ಹಲವರನ್ನು ವಂಚನೆ ಮಾಡಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು