ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲದಡಿ ಉಪಕೇಂದ್ರ: 22 ಕಡೆ ಪ್ರಯೋಗ

ಮೇಲ್ಭಾಗ ವಾಣಿಜ್ಯ ಚಟುವಟಿಕೆ: ಸಂಪನ್ಮೂಲ ಕ್ರೋಡೀಕರಣಕ್ಕೆ ಪಿಪಿಪಿ ಮಾದರಿಯಲ್ಲಿ ಕೆಪಿಟಿಸಿಎಲ್‌ ಯೋಜನೆ
Published 6 ಮಾರ್ಚ್ 2024, 19:55 IST
Last Updated 6 ಮಾರ್ಚ್ 2024, 19:55 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಕೆ ಮತ್ತು ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಸಾಮರ್ಥ್ಯ ವೃದ್ಧಿಗೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಯೋಜನೆಯೊಂದನ್ನು ರೂಪಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮುಂದಾಗಿದೆ.

ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ತನ್ನ ವಿದ್ಯುತ್ ಉಪಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕೆಪಿಟಿಸಿಎಲ್‌ ಚಿಂತಿಸಿದೆ. ಎಐಎಸ್ (ಏರ್ ಇನ್ಸುಲೇಟ್ ಸಬ್‌ಸ್ಟೇಷನ್) ಉಪಕೇಂದ್ರಗಳನ್ನು ಜಿಐಎಸ್ (ಗ್ಯಾಸ್ ಇನ್ಸುಲೇಟ್ ಸಬ್‌ಸ್ಟೇಷನ್)ಗಳಾಗಿ ಪರಿವರ್ತಿಸಲು ಕೆಪಿಟಿಸಿಎಲ್‌ ಚಿಂತನೆ ನಡೆಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ‘ಎಐಎಸ್‌ನಿಂದ ಜಿಐಎಸ್‌ಗೆ ಪರಿವರ್ತನೆ ಮಾಡುವುದರಿಂದ ಉಪಕೇಂದ್ರದ ಸೇವಾ ಕೇಂದ್ರಗಳು (ಸರ್ವಿಸ್ ಸ್ಟೇಷನ್) ಸಂಪೂರ್ಣವಾಗಿ ನೆಲದಡಿಯಲ್ಲಿರಲಿದ್ದು, ಅದರ ಮೇಲೆ ಸಾಕಷ್ಟು ಜಾಗ ಲಭ್ಯವಾಗಲಿದೆ. ಅಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸುವ ಚಿಂತನೆಯಿದೆ. ಪ್ರಾಯೋಗಿಕವಾಗಿ ನಗರದ ಆನಂದರಾವ್ ವೃತ್ತದಲ್ಲಿರುವ ಉಪಕೇಂದ್ರದಲ್ಲಿ ಇದನ್ನು ಪರಿಚಯಿಸುವ ಆಲೋಚನೆ ಇದೆ’ ಎಂದು ಹೇಳಿದರು.

‘ಈ ಚಿಂತನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಸಚಿವ ಸಂಪುಟದ ಮುಂದಿಟ್ಟು, ಅನುಮೋದನೆ ದೊರೆತರೆ ಯೋಜನೆ ಕಾರ್ಯಗತ ಮಾಡಲಾಗುವುದು’ ಎಂದು ಹೇಳಿದರು.

‘ಅಭಿವೃದ್ಧಿ ಪಡಿಸುವ ಉಪಕೇಂದ್ರದ ಜಾಗದ ಮಾಲೀಕತ್ವ ಕೆಪಿಟಿಸಿಎಲ್ ಬಳಿಯೇ ಇರಲಿದೆ. ಹೂಡಿಕೆಗೆ ಮುಂದೆ ಬರುವವರೇ ಎಐಎಸ್‌ನಿಂದ ಜಿಐಎಸ್ ಪರಿವರ್ತಿಸಿ, ಅದರ ಮೇಲಿನ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸಬಹುದು. ಇದನ್ನು ಸುಮಾರು 35 ವರ್ಷಗಳ ಕಾಲ ಗುತ್ತಿಗೆ ನೀಡಲಾಗುವುದು’ ಎಂದು ವಿವರಿಸಿದರು.

‘ನಗರದಲ್ಲೇ 171 ಉಪಕೇಂದ್ರಗಳಿದ್ದು, ಆಯ್ದ 22 ಕಡೆಗಳಲ್ಲಿ ಈ ಪ್ರಯೋಗ ಮಾಡುವ ಬಗ್ಗೆ ಚಿಂತನೆಯಿದೆ. ಇದರಿಂದ 30ರಿಂದ 40 ಎಕರೆ ಎಕರೆ ಜಾಗ ಲಭ್ಯವಾಗಬಹುದು. ಇದು ಯಶಸ್ವಿಯಾದರೆ ರಾಜ್ಯದ ಬೇರೆ ಕಡೆಗಳಲ್ಲೂ ಇದೇ ಮಾದರಿಯನ್ನು ಜಾರಿಗೆ ತರಲಾಗುವುದು’ ಎಂದು ಹೇಳಿದರು.

‘ಉಪ ಕೇಂದ್ರಗಳ ಮೇಲ್ದರ್ಜೆಗೆ ಮತ್ತು ವಿಸ್ತರಣೆಗಾಗಿ ದೊಡ್ಡಮಟ್ಟದ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಹೊರೆ ಬೀಳಲಿದೆ. ಅದನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ. ವಸತಿ ಸಂಕೀರ್ಣಗಳಿಗೆ ಇಲ್ಲಿ ಅವಕಾಶ ನೀಡುವುದಿಲ್ಲ. ಮಾಲ್‌ಗಳು ಸೇರಿದಂತೆ ವಾಣಿಜ್ಯ ಸಂಕೀರ್ಣಗಳಂತಹ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

9ರಂದು ರೈತ ಸೌರಶಕ್ತಿ ಮೇಳ

ನೀರಾವರಿ ಆಧಾರಿತ ಕೃಷಿಯಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಿ ರೈತರು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೇ 9 ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಆವರಣದಲ್ಲಿ 'ರೈತ ಸೌರಶಕ್ತಿ ಮೇಳ' ಆಯೋಜಿಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. ‌ನಗರದಲ್ಲಿ ಬುಧವಾರ ನಡೆದ ‘ಕರ್ಟನ್‌ರೈಸರ್ ಕಾರ್ಯಕ್ರಮ’ದಲ್ಲಿ ಸೌರಶಕ್ತಿ ಮೇಳದ ಕುರಿತು ವಿವರ ನೀಡಿದ ಅವರು 'ರೈತರ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್‌ ಅಳವಡಿಕೆಯೇ ಪರಿಹಾರ. ಈ ಹಿನ್ನೆಲೆಯಲ್ಲಿ ರೈತರಿಗೆ ಸೌರ ಪಂಪ್‌ಸೆಟ್‌ ಕುರಿತು ಹೆಚ್ಚಿನ ಮಾಹಿತಿ ನೀಡಲು ಮೇಳವನ್ನು ಆಯೋಜಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ 9ರಂದು ಸಂಜೆ 4 ಗಂಟೆಗೆಮೇಳ ಉದ್ಘಾಟಿಸಲಿದ್ದಾರೆ. ಜೊತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೊಲ್ಟೇಜ್‌ಗಳ ಹೊಸ ಸಬ್‌ಸ್ಟೇಷನ್‌ಗಳಿಗೂ ಚಾಲನೆ ನೀಡಲಿದ್ದಾರೆ‘ ಎಂದರು.   ’ಮೇಳದಲ್ಲಿ ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆ ಇರುತ್ತದೆ. ರೈತರಿಗಾಗಿ ಸಂವಾದ ಕಾರ್ಯಕ್ರಮವೂ ಇರುತ್ತದೆ. ಸೌರ ಪಂಪ್‌ ಸೆಟ್‌ಗಳ ಉತ್ಪಾದಕರು ಮಾರಾಟಗಾರರು ಬ್ಯಾಂಕ್‌ ಅಧಿಕಾರಿಗಳು ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡು ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು.

ಮೇಳದಲ್ಲಿ ಇವೆಲ್ಲ ಇರಲಿವೆ...

• ವಿವಿಧ ಸೌರ ವಿದ್ಯುತ್‌ ಉತ್ಪನ್ನಗಳು

• ಸೌರ ಪಂಪ್‌ಸೆಟ್‌ಗಳ ಕಾರ್ಯನಿರ್ವಹಣೆ ಪ್ರಾತ್ಯಕ್ಷಿಕೆ

• ಸ್ಥಳದಲ್ಲೇ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿಕೊಳ್ಳುವವರಿಗೆ ಆನ್‌ಲೈನ್‌ ಪೋರ್ಟಲ್‌

* ‘ಸೌರ ಮಿತ್ರ’ ಆ್ಯಪ್ ಬಿಡುಗಡೆ (ಆ್ಯಪ್ ಮೂಲಕವೂ ರೈತರು ಅರ್ಜಿ ಸಲ್ಲಿಸಬಹುದು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT