ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂದೆಯ ಭಯ: ಅಪಹರಣ ನಾಟಕವಾಡಿದ್ದ ಎಎಸ್‌ಐ ಮಗ

Published 25 ಮೇ 2024, 0:33 IST
Last Updated 25 ಮೇ 2024, 0:33 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಮಗನೆಂಬ ಕಾರಣಕ್ಕೆ ಯಾರೋ ಅಪರಿಚಿತರು ನನ್ನನ್ನು ಅಪಹರಣ ಮಾಡಿದ್ದರು’ ಎಂಬುದಾಗಿ ಸುಳ್ಳು ಹೇಳಿ ನಾಟಕವಾಡಿದ್ದ ಯುವಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಜ್ಞಾನಭಾರತಿ ಬಳಿಯ ಬಸವೇಶ್ವರ ಬಡಾವಣೆಯ ಗೌತಮ್ ಸುಭಾಷ್ ಎಸ್. ಅವರು ಅಪಹರಣ ಹಾಗೂ ಹಲ್ಲೆ ಸಂಬಂಧ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಗೌತಮ್ ತಾನೇ ನಾಟಕವಾಡಿದ್ದ ಸಂಗತಿ ಗೊತ್ತಾಗಿದೆ. ಸುಳ್ಳು ದೂರು ನೀಡಿದ್ದ ಯುವಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಗೌತಮ್ ಮೇ 20ರಂದು ಸ್ನೇಹಿತರನ್ನು ಭೇಟಿಯಾಗಲು ಕೆಂಗೇರಿಗೆ ಬೈಕ್‌ನಲ್ಲಿ ಹೋಗಿದ್ದ. ಸ್ನೇಹಿತರ ಜೊತೆ ಸೇರಿ ಮದ್ಯ ಕುಡಿದಿದ್ದ. ವಾಪಸು ಮನೆಗೆ ಹೋಗುತ್ತಿದ್ದಾಗ, ಬೈಕ್ ಉರುಳಿಬಿದ್ದು ಅಪಘಾತ ಸಂಭವಿಸಿತ್ತು. ಇದರಿಂದಾಗಿ ಬೈಕ್ ಜಖಂಗೊಂಡಿತ್ತು. ಗೌತಮ್‌ನ ಮೊಬೈಲ್ ಸಹ ರಸ್ತೆಗೆ ಬಿದ್ದು ಒಡೆದು ಹೋಗಿತ್ತು.’

‘ಅಪಘಾತದ ಸುದ್ದಿ ತಂದೆಗೆ ಗೊತ್ತಾದರೆ ಬೈಯುತ್ತಾರೆಂದು ಗೌತಮ್ ಭಾವಿಸಿದ್ದ. ಅಪಹರಣ ಹಾಗೂ ಹಲ್ಲೆ ನಾಟಕವಾಡಲು ತೀರ್ಮಾನಿಸಿದ್ದ ಈತ, ಬ್ಲೇಡ್‌ನಿಂದ ಕೈ ಹಾಗೂ ಭುಜ ಕೊಯ್ದುಕೊಂಡಿದ್ದ. ನಂತರ, ತಂದೆ ಹಾಗೂ ಸ್ನೇಹಿತರಿಗೆ ಕರೆ ಮಾಡಿದ್ದ. ‘ನನ್ನನ್ನು ಯಾರೂ ಅಪಹರಣ ಮಾಡಿ ಹಲ್ಲೆ ಮಾಡಿದ್ದಾರೆ’ ಎಂದು ಸುಳ್ಳು ಹೇಳಿದ್ದ. ಸ್ಥಳಕ್ಕೆ ಬಂದಿದ್ದ ತಂದೆ ಹಾಗೂ ಸ್ನೇಹಿತರು, ಗೌತಮ್‌ನನ್ನು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಿದ್ದ ಗೌತಮ್, ‘ನಾನು ಬೈಕ್‌ನಲ್ಲಿ ಹೊರಟಿದ್ದಾಗ, ಆರು ಮಂದಿ ಅಡ್ಡಗಟ್ಟಿದ್ದರು. ನೀನು ಎಎಸ್‌ಐ ಮಗನಲ್ಲವೇ ? ಎಂದು ಹೇಳಿ ಅಪಹರಿಸಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದರು’ ಎಂದಿದ್ದ. ತನಿಖೆ ಕೈಗೊಂಡು ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಗೌತಮ್ ಮಾತ್ರ ಸ್ಥಳದಲ್ಲಿ ಓಡಾಡಿದ್ದು ಗೊತ್ತಾಗಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ ಗೌತಮ್ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT