ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂಗಳಗಳಲ್ಲಿ ಫಿಲ್ಟರ್‌ ಬೋರ್‌ವೆಲ್‌: ವಿ. ರಾಮ್ ಪ್ರಸಾತ್ ಮನೋಹರ್

ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ
Published 7 ಮಾರ್ಚ್ 2024, 19:17 IST
Last Updated 7 ಮಾರ್ಚ್ 2024, 19:17 IST
ಅಕ್ಷರ ಗಾತ್ರ

ಬೆಂಗಳೂರು: ‘ನೀರಿನ ಕೊರತೆ ನೀಗಿಸಲು ಕೆರೆಯಂಗಳದಲ್ಲಿ ಫಿಲ್ಟರ್‌ ಬೋರ್‌ವೆಲ್‌ಗಳನ್ನು ಅಳವಡಿಸಲು ಕ್ರಿಯಾಯೋಜನೆ ತಯಾರು ಮಾಡಿಕೊಂಡಿದ್ದೇವೆ’ ಎಂದು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

‘ದೇವನಹಳ್ಳಿಯಲ್ಲಿ ಕೆರೆಯಂಗಳದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಈ ಪ್ರಯೋಗ ಮಾಡಿ, ನೀರು ಪೂರೈಕೆ ಮಾಡುತ್ತಿದ್ದಾರೆ. ಈ ವಿಧಾನದಿಂದ ನೀರು ಸಂಗ್ರಹಿಸಿ ಅದನ್ನು ಶುದ್ಧೀಕರಿಸಿ ಗುಣಮಟ್ಟದ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯ 40 ಲಕ್ಷ ಲೀಟರ್‌ ನೀರು ಬಳಕೆಯಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಇತರ ಕೆರೆಗಳಲ್ಲಿಯೂ ಪ್ರಯೋಗ ಮಾಡಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಯಂಡಹಳ್ಳಿ ಕೆರೆ, ಚಿಕ್ಕಬಾಣಾವರ ಕೆರೆ, ವರ್ತೂರು ಕೆರೆ ಸೇರಿದಂತೆ ಏಳೆಂಟು ಕೆರೆಗಳನ್ನು ಗುರುತಿಸಲಾಗಿದೆ. ಅಲ್ಲಿ ನಮ್ಮ ಅಧಿಕಾರಿಗಳು, ಜಲತಜ್ಞರು, ಐಐಎಸ್‌ಸಿ ವಿಜ್ಞಾನಿಗಳು ತೆರಳಿ ಪರಿಶೀಲನೆ ನಡೆಸಲಿದ್ದಾರೆ. ನೀರು ಲಭ್ಯವಿರುವ ಕೆರೆಗಳಲ್ಲಿ ಫಿಲ್ಟರ್‌ ಬೋರ್‌ವೆಲ್‌ ಅಳವಡಿಸಲಾಗುವುದು. ಒಂದು ತಿಂಗಳ ಒಳಗೆ ಈ ಕೆಲಸ ಆಗಲಿದೆ ಎಂದು ವಿವರಿಸಿದರು.

ನಗರದ ಹೊರವಲಯದಲ್ಲಿ ಕಾವೇರಿ ನೀರು ಪೂರೈಕೆ ಬಹಳ ಕಡಿಮೆ ಇದೆ. ಕೊಳವೆಬಾವಿಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಈಗ ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿರುವುದರಿಂದ ಕಾವೇರಿ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಕಾವೇರಿ ಹಂತ–5ನೇ ಯೋಜನೆಯಡಿ ಮೇ ತಿಂಗಳಾಂತ್ಯಕ್ಕೆ ಕಾವೇರಿ ನೀರು ಪೂರೈಕೆಯಾಗಲಿದೆ. ಅಲ್ಲಿವರೆಗೆ ನೀರು ಪೂರೈಸಲು ಫಿಲ್ಟರ್ ಬೋರ್‌ವೆಲ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಕಾವೇರಿ ನೀರು ಬಳಕೆ ಇರಲಿಲ್ಲ. ಕೊಳವೆಬಾವಿ ನೀರನ್ನೇ ಬಳಸುತ್ತಿದ್ದರು. ನೀರಿನ ಕೊರತೆ ಉಂಟಾದರೆ, ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುತ್ತಿದ್ದರು. ಅವರೂ ಕಾವೇರಿ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಪುನರ್‌ಬಳಕೆ ಮಾಡಿಕೊಳ್ಳಬೇಕು. ಕುಡಿಯಲು ಹೊರತುಪಡಿಸಿ ಇತರೆ ಬಳಕೆಗೆ ಈ ನೀರು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

’ಜಲಮಂಡಳಿಯಿಂದ ಒಂದು ಟ್ಯಾಂಕರ್‌ ನೀರಿಗೆ ₹ 240 ಶುಲ್ಕ ಪಡೆದು ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು. ಈ ಬಾರಿಯೂ ಆರಂಭದಲ್ಲಿ ಈ ರೀತಿ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಹೀಗೆ ಮುಂದುವರಿಸುವುದು ಕಷ್ಟ. ಸಾರ್ವಜನಿಕವಾಗಿ ನೀರು ಪೂರೈಕೆ ಮಾಡಲಾಗುವುದು. ಆದರೆ ವೈಯಕ್ತಿಕವಾಗಿ ಸಂಪ್‌ಗಳಿಗೆ ಪೂರೈಸುವುದಿಲ್ಲ. ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನಗರ ವ್ಯಾಪ್ತಿಯಲ್ಲಿ ಸುಮಾರು 1,200 ಕೊಳವೆಬಾವಿಗಳು ಕೆಟ್ಟು ಹೋಗಿವೆ. ಅದರಲ್ಲಿ 400 ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಿದ ನಂತ 250ರಲ್ಲಿ ನೀರು ಸಿಕ್ಕಿದೆ ಎಂದರು.

‘ನಗರದ 336 ಪ್ರದೇಶಗಳಲ್ಲಿ 1000ದಿಂದ 3000 ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ಇಟ್ಟು ಬೆಳಿಗ್ಗೆ ಮತ್ತು ಸಂಜೆ ನೀರು ತುಂಬಿಸಲಾಗುವುದು. ಸಾರ್ವಜನಿಕರು ಮಿತವಾಗಿ ಬಳಸಬೇಕು. ಜಲಮಂಡಳಿಯ 210 ಟ್ಯಾಂಕ್‌ ಬಳಕೆ ಮಾಡುತ್ತಿದ್ದೇವೆ. ಟಾಟಾ ಎಸಿ ವಾಹನಗಳನ್ನು ಮತ್ತು ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಪಡೆದು ಸಿಂಟೆಕ್ಸ್‌ ಟ್ಯಾಂಕ್‌ ಇಟ್ಟು ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ದುರ್ಬಳಕೆ ನಿಷೇಧ

ಕುಡಿಯುವ ನೀರನ್ನು ವಾಹನ ತೊಳೆಯಲು ಗಿಡಗಳನ್ನು ಬೆಳೆಸಲು ಬಳಸುತ್ತಿರುವುದು ಕಂಡು ಬಂದಿದೆ. ಈ ರೀತಿ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು ಎಂದು ಬಿಯುಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರನ್ನು ಬಳಸಬಾರದು. ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ (ಗ್ರೀನ್‌ ವಾಟರ್‌) ಬಳಕೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1300 ಪಾರ್ಕ್‌ಗಳಲ್ಲಿಯೂ ಪುನರ್‌ಬಳಕೆಯ ನೀರನ್ನೇ ಬಳಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT