ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ಯಾಂಕರ್‌ ನೀರಿಗೆ ದರ ನಿಗದಿ ಶೀಘ್ರ- ಜಲಮಂಡಳಿ

110 ಹಳ್ಳಿಗಳಿಗೆ 100 ಟ್ಯಾಂಕರ್‌ಗಳಿಂದ ನೀರು ಪೂರೈಕೆ; ಪ್ರತಿ ವಾರ್ಡ್‌ಗೆ ಎಂಜಿನಿಯರ್‌ ನಿಯೋಜನೆ
Published 28 ಫೆಬ್ರುವರಿ 2024, 20:51 IST
Last Updated 28 ಫೆಬ್ರುವರಿ 2024, 20:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಖಾಸಗಿ ಟ್ಯಾಂಕರ್‌ಗಳು ಪೂರೈಸುತ್ತಿರುವ ನೀರಿನ ದರಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಹಾಗೂ ಜಲಮಂಡಳಿ ನಿರ್ಧರಿಸಿದ್ದು, ಶೀಘ್ರವೇ ಏಕರೂಪದ ದರ ನಿಗದಿ ಮಾಡಲಿವೆ.

‘ನೀರಿನ ಟ್ಯಾಂಕರ್‌ಗಳ ಮಾಲೀಕರ ಪ್ರತ್ಯೇಕ ಸಂಘಗಳಿಲ್ಲ. ಲಾರಿ ಮಾಲೀಕರ ಸಂಘಗಳೊಂದಿಗೆ ಇವರಿದ್ದಾರೆ. ಆದರೂ ಸಾರಿಗೆ ಇಲಾಖೆಯಿಂದ ಮಾಲೀಕರ ಮಾಹಿತಿಯನ್ನು ಪಡೆದು ಅವರೊಂದಿಗೆ ಒಂದೆರಡು ದಿನದಲ್ಲಿ ಸಭೆ ನಡೆಸಲಾಗುತ್ತದೆ. ಯಾವ ರೀತಿಯಲ್ಲಿ ದರ ನಿಗದಿ ಮಾಡಬೇಕೆಂದು ನಿರ್ಧರಿಸಿ, ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ’ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮತ್ತು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್ ಮನೋಹರ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಉಂಟಾಗಿದ್ದು, ಆ ನೀರಿನ ಕೊರತೆಯನ್ನು ಟ್ಯಾಂಕರ್ ನೀರಿನ ಮೂಲಕ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 30 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಈ 110 ಹಳ್ಳಿಗಳಿದ್ದು, ಪ್ರತಿ ವಾರ್ಡ್‌ಗೆ ನೀರಿನ ನಿರ್ವಹಣೆಗಾಗಿಯೇ ಎಂಜಿನಿಯರ್‌ ಒಬ್ಬರನ್ನು ನಿಯೋಜಿಸಲಾಗುತ್ತದೆ. ಜಲಮಂಡಳಿಯಿಂದ ಸಹಾಯಕ ಎಂಜಿನಿಯರ್‌ ಮಟ್ಟದವರನ್ನೂ ನೇಮಿಸಲಾಗುತ್ತಿದೆ. ಈ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್‌ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಆಯಾ ವ್ಯಾಪ್ತಿಯ ಜನರು ತಮ್ಮ ಸಂಕಷ್ಟಗಳನ್ನು ಅವರಿಗೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬಹುದು ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

‘ಹಳ್ಳಿಗಳಲ್ಲಿ ನೀರಿನ ಟ್ಯಾಂಕ್‌ ವ್ಯವಸ್ಥೆ ಇಲ್ಲ. ಬದಲಿಗೆ ಕೊಳವೆಬಾವಿಗಳಿಂದ ಪೈಪ್‌ಗಳ ಮೂಲಕ ಮನೆಗಳಿಗೆ ನೀರಿನ ಸಂಪರ್ಕವಿದೆ. ಕೊಳವೆಬಾವಿಗಳು ಬತ್ತಿರುವುದರಿಂದ ನೀರು ಪೂರೈಕೆ ಸಮಸ್ಯೆಯಾಗುತ್ತದೆ. ಹೀಗಾಗಿ, ಅತಿಹೆಚ್ಚು ನೀರಿನ ಸಮಸ್ಯೆ ಇರುವ ಕೊಳೆಗೇರಿ ಹಾಗೂ ಅತಿ ಬಡವರು ನೆಲೆಸಿರುವ ಪ್ರದೇಶಗಳಲ್ಲಿ 5 ಸಾವಿರದಿಂದ 6 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಇರಿಸಿ, ಟ್ಯಾಂಕರ್‌ಗಳ ಮೂಲಕ ಅವುಗಳಿಗೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಸ್ಥಳೀಯರು ನೀರು ಪಡೆಯಬಹುದು’ ಎಂದರು.

200 ಟ್ಯಾಂಕರ್‌ ವಶಕ್ಕೆ: ‘ರಾಜ್ಯ ಸರ್ಕಾರ ನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ, ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯವಾಗುತ್ತದೆ. ನಗರ ಜಿಲ್ಲಾಧಿಕಾರಿಯವರು 200 ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡು ಜಲಮಂಡಳಿಗೆ ಶೀಘ್ರವೇ ನೀಡುತ್ತಾರೆ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಈ 200 ಟ್ಯಾಂಕರ್‌ಗಳಲ್ಲಿ 100 ಟ್ಯಾಂಕರ್‌ಗಳನ್ನು ಜಲಮಂಡಳಿಯು 110 ಹಳ್ಳಿಗಳಿಗೆ ನೀರು ಪೂರೈಸಲು ಬಿಬಿಎಂಪಿ ವಶಕ್ಕೆ ನೀಡುತ್ತದೆ. ಇನ್ನುಳಿದ 100 ಟ್ಯಾಂಕರ್‌ಗಳಿಂದ ನಗರದ ಇತರೆ ಪ್ರದೇಶಗಳಿಗೆ ಜಲಮಂಡಳಿ ನೀರು ಪೂರೈಸಲಿದೆ. ಟ್ಯಾಂಕರ್‌ ಮಾಲೀಕರಿಗೆ ಸಲ್ಲಬೇಕಾದ ಹಣ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸೋರಿಕೆಗೆ ತಡೆ: ನಗರದಲ್ಲಿ ನೀರು ಸರಬರಾಜಿನ ಸೋರಿಕೆಯನ್ನು ಕಡಿಮೆಗೊಳಿಸಲಾಗುತ್ತಿದ್ದು, ಪ್ರಸ್ತುತ ಶೇ 25ರಿಂದ ಶೇ 28ರಷ್ಟು ಸೋರಿಕೆ ಇದೆ. ಕೇಂದ್ರ ಭಾಗದಲ್ಲಿರುವ ಕೊಳವೆಮಾರ್ಗ ತುಕ್ಕು ಹಿಡಿದಿರುವುದರಿಂದ ಸೋರಿಕೆ ಹೆಚ್ಚಾಗುತ್ತಿದೆ. ಕೊಳವೆಮಾರ್ಗಗಳನ್ನು ಹಂತಹಂತವಾಗಿ ಬದಲಾಯಿಸಲಾಗುವುದು. ಈ ಸೋರಿಕೆ ತಡೆದರೆ ಸುಮಾರು 5 ಎಂಎಲ್‌ಡಿ ನೀರು ಪೂರೈಕೆಗೆ ಲಭ್ಯವಾಗುತ್ತದೆ ಎಂದು ರಾಮ್‌ ಪ್ರಸಾತ್‌ ಮನೋಹರ್ ಹೇಳಿದರು.

ಕೈಗಾರಿಕೆಗಳಿಗೆ ನೀರು ಪೂರೈಕೆ ಪ್ರಮಾಣವನ್ನು ಕಡಿತ ಮಾಡಿದ್ದು, ಅವರಿಗೆ ಸಂಸ್ಕರಿಸಿದ ನೀರು ಬಳಸಲು ಮನವಿ ಮಾಡಿಕೊಂಡಿದ್ದೇವೆ ಎಂದರು.

ಕಾವೇರಿ ಐದನೇ ಹಂತದಿಂದ ಏಪ್ರಿಲ್‌ ಅಂತ್ಯಕ್ಕೆ ನಗರಕ್ಕೆ ನೀರು ಬರಲಿದೆ. ಅಲ್ಲಿಂದ 110 ಹಳ್ಳಿಗಳಿಗೆ ಮೊದಲ ಆದ್ಯತೆಯಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. ಮೇ ಮೊದಲ ಅಥವಾ ಎರಡನೇ ವಾರದಲ್ಲಿ ನೀರು ಪೂರೈಕೆಯಾಗಲಿದೆ ಎಂದು ಪುನರುಚ್ಚರಿಸಿದರು.

ಹೆಚ್ಚು ಹಣ ಕೇಳುತ್ತಿದ್ದರೆ ದೂರು ನೀಡಿ... ‘ಒಂದು ಟ್ಯಾಂಕರ್‌ ನೀರಿಗೆ ಒಂದು ಸಾವಿರ ಎರಡು ಸಾವಿರ ರೂಪಾಯಿ ದರ ವಿಧಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಯಾವ ಭಾಗದಲ್ಲಿ ಯಾರು ಹೆಚ್ಚು ಹಣ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದ್ದರೆ ನಾಗರಿಕರು ನಿಯಂತ್ರಣ ಕೊಠಡಿಗೆ (080 2222 1188) ಕರೆ ಮಾಡಿ ದೂರು ನೀಡಬಹುದು. ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮಾಹಿತಿ ನೀಡದಿದ್ದರೆ ನಾವು ಕ್ರಮ ಕೈಗೊಳ್ಳುವುದಾದರೂ ಹೇಗೆ’ ಎಂದು ತುಷಾರ್‌ ಗಿರಿನಾಥ್‌ ಪ್ರಶ್ನಿಸಿದರು.

ಟ್ಯಾಂಕರ್‌ ನೋಂದಣಿಯಾಗದಿದ್ದರೆ ಜಪ್ತಿ ನಗರದಲ್ಲಿ 3500 ನೀರಿನ ಟ್ಯಾಂಕರ್‌ಗಳಿವೆ ಎಂಬ ಮಾಹಿತಿ ಸಾರಿಗೆ ಇಲಾಖೆಯಿಂದ ಲಭ್ಯವಾಗಿದೆ. ಈ ಎಲ್ಲ ಟ್ಯಾಂಕರ್‌ಗಳ ಮಾಲೀಕರು ಬಿಬಿಎಂಪಿಯ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮಾರ್ಚ್‌ 7ರೊಳಗೆ ನೋಂದಣಿಯಾಗದಿದ್ದರೆ ಮರುದಿನದಿಂದಲೇ ಟ್ಯಾಂಕರ್‌ಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ಎಚ್ಚರಿಸಿದರು. ನೀರಿನ ಪೂರೈಕೆಗೆ ಟ್ಯಾಂಕರ್‌ಗಳ ಮಾಲೀಕರು ಟ್ರೇಡ್‌ ಲೈಸೆನ್ಸ್‌ ಪಡೆದಿಲ್ಲ. ಆ ಪರವಾನಗಿ ವ್ಯಾಪ್ತಿಗೆ ನೀರಿನ ಪೂರೈಕೆ ಸೇರಿಲ್ಲ. ಹೀಗಾಗಿ ಸ್ವಯಂ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈ ನೋಂದಣಿ ಮಾರ್ಚ್‌ 1ರಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

2 ವರ್ಷದಲ್ಲಿ ಸಂಸ್ಕರಣೆ ಸಾಮರ್ಥ್ಯ 2100 ಎಂಎಲ್‌ಡಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಲು ಜಲಮಂಡಳಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಎರಡು ವರ್ಷಗಳಲ್ಲಿ ಸಂಸ್ಕರಿಸಿದ ನೀರಿನ ಸಾಮರ್ಥ್ಯ 2100 ಎಂಎಲ್‌ಡಿಗೆ ತಲುಪಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು. ಪ್ರಸ್ತುತ 33 ತ್ಯಾಜ್ಯ ಸಂಸ್ಕರಣೆ ಘಟಕಗಳಿಂದ (ಎಸ್‌ಟಿಪಿ) 1380 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿದೆ. 20 ಎಸ್‌ಟಿಪಿಗಳು ನವೀಕರಣವಾಗುತ್ತಿವೆ 14 ಹೊಸ ಎಸ್‌ಟಿಪಿಗಳನ್ನು ಸ್ಥಾಪಿಸಲಾಗುತ್ತಿದೆ. ಇವೆಲ್ಲ ಮುಗಿದ ಮೇಲೆ 2100 ಎಂಎಲ್‌ಡಿ ಸಂಸ್ಕರಿಸಿದ ನೀರು ಲಭ್ಯವಾಗಲಿದ್ದು ಇದರ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ತೃತೀಯ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಏಳು ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗುತ್ತದೆ. ಇನ್ನೂ 179 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT