ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನಾಭರಣ ಮಳಿಗೆ ಮೇಲೆ ಗುಂಡಿನ ದಾಳಿ ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಆರೋಪಿಗಳು

Published 17 ಮಾರ್ಚ್ 2024, 22:04 IST
Last Updated 17 ಮಾರ್ಚ್ 2024, 22:04 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ಬಳಿಯ ದೇವಿನಗರದಲ್ಲಿರುವ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಮಳಿಗೆಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳು ಮಧ್ಯಪ್ರದೇಶದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಮಾರ್ಚ್ 14ರಂದು ಬೆಳಿಗ್ಗೆ 11 ಗಂಟೆಗೆ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ಮಾಲೀಕ ಹಾಪುರಾಮ್ (38) ಹಾಗೂ ಅನಂತರಾಮ್ (21) ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ನಂತರ, ಮಳಿಗೆ ಎದುರು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳು ಯಾವುದೇ ಚಿನ್ನಾಭರಣ ದೋಚಿಕೊಂಡು ಹೋಗಿರಲಿಲ್ಲ. ಹೀಗಾಗಿ, ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಇದ್ದವು. ಕೆಲ ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದ ವಿಶೇಷ ತಂಡದ ಸದಸ್ಯರು, ಮಧ್ಯಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿಯೇ ನಾಲ್ವರು ಆರೋಪಿಗಳನ್ನು ಸ್ಥಳೀಯ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದಿದ್ದಾರೆ. ಸದ್ಯದಲ್ಲೇ ನಗರಕ್ಕೆ ಕರೆತರಲಿದ್ದಾರೆ’ ಎಂದು ತಿಳಿಸಿದರು.

ಸಣ್ಣ ಮಳಿಗೆಗಳಲ್ಲಿ ಕಳ್ಳತನ: ‘ಮಳಿಗೆಗೆ ನುಗ್ಗಿ ಗುಂಡಿನ ದಾಳಿ ನಡೆದಿದ್ದ ಪ್ರಕರಣದಲ್ಲಿ ಮಧ್ಯಪ್ರದೇಶದ ಖಾನಾ ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಆಶು ಪಂಡಿತ್ ಹಾಗೂ ಸೂರಜ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು, ಸಣ್ಣ ಚಿನ್ನಾಭರಣ ಮಳಿಗೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದರೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಆರೋಪಿಗಳು ಹಲವು ಮಳಿಗೆಗಳಲ್ಲಿ ದರೋಡೆ ಮಾಡಿದ್ದರು. ಇವರ ಕೃತ್ಯಕ್ಕೆ ಸ್ಥಳೀಯ ವ್ಯಕ್ತಿಗಳು ಸಹಕಾರ ನೀಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ದರೋಡೆಯಲ್ಲೂ ಸ್ಥಳೀಯ ವ್ಯಕ್ತಿಯೊಬ್ಬ ಸಹಾಯ ಮಾಡಿದ್ದು, ಆತನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿದರು.

ಗುಂಟೇಟು ಬಿದ್ದಿದ್ದಕ್ಕೆ ಪರಾರಿ: ‘ಮಳಿಗೆ ಮಾಲೀಕ ಹಾಗೂ ಕೆಲಸಗಾರನ ಮೇಲೆ ಗುಂಡು ಹಾರಿಸಿದ್ದ ಆರೋಪಿಗಳು, ಚಿನ್ನಾಭರಣ ಬಿಟ್ಟು ಪರಾರಿಯಾಗಿದ್ದರು. ಇದಕ್ಕೆ ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಸಿದಾಗ, ಆರೋಪಿಗೆ ಗುಂಡೇಟು ತಗುಲಿದ್ದ ಸಂಗತಿ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಮಳಿಗೆಯೊಳಗೆ ಎರಡು ಬಾರಿ ಗುಂಡು ಹಾರಿಸಿದ್ದರು. ಎರಡೂ ಗುಂಡುಗಳು ಮಾಲೀಕ ಹಾಗೂ ಕೆಲಸಗಾರನಿಗೆ ತಗುಲಿದ್ದವು. ಮಳಿಗೆ ಹೊರಗಿದ್ದ ಆರೋಪಿಯೊಬ್ಬ ಹಾರಿಸಿದ್ದ ಗುಂಡು, ಮಳಿಗೆಯೊಳಗಿದ್ದ ಆರೋಪಿಯೊಬ್ಬನ ಗಂಟಲಿನ ಚರ್ಮಕ್ಕೆ ತಗುಲಿ, ರಕ್ತ ಸೋರಲಾರಂಭಿಸಿತ್ತು. ಇದೇ ಕಾರಣಕ್ಕೆ ನಾಲ್ವರು ಆರೋಪಿಗಳು ಸ್ಥಳದಲ್ಲೇ ಒಂದು ಪಿಸ್ತೂಲ್ ಬಿಸಾಡಿ ಹೊರಟು ಹೋಗಿದ್ದರು’ ಎಂದು ತಿಳಿಸಿದರು.

‘ಬೈಕ್‌ಗಳನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಆರೋಪಿಗಳು, ರೈಲಿನಲ್ಲಿ ಮಧ್ಯಪ್ರದೇಶಕ್ಕೆ ಹೋಗಿದ್ದರು. ಗಾಯಗೊಂಡಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT