ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಘನತೆ ಹೆಚ್ಚಿಸಿದ ಮೋದಿ: ವಿಜಯೇಂದ್ರ

Published 25 ಡಿಸೆಂಬರ್ 2023, 19:55 IST
Last Updated 25 ಡಿಸೆಂಬರ್ 2023, 19:55 IST
ಅಕ್ಷರ ಗಾತ್ರ

ಬೆಂಗಳೂರು: ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಅಂತರರಾಷ್ಟ್ರೀಯಮಟ್ಟದಲ್ಲಿ ಭಾರತೀಯರ ಘನತೆ ಹೆಚ್ಚಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಅವರ ಹೆಗ್ಗಳಿಕೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ, ಡಾ.ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಷನ್ ಸೋಮವಾರ ಹಮ್ಮಿಕೊಂಡಿದ್ದ ‘ಉತ್ತಮ ಆಡಳಿತ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ದೇಶದಲ್ಲಿ ಭ್ರಷ್ಟಾಚಾರರಹಿತ ಆಡಳಿತದ ಬುನಾದಿ ಹಾಕಿಕೊಟ್ಟ ಕೀರ್ತಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಚತುಷ್ಪಥ ರಸ್ತೆಗಳ ಮೂಲಕ ಕ್ರಾಂತಿಯನ್ನೇ ಮಾಡಿದರು. ಸ್ವಾತಂತ್ರ್ಯ ಭಾರತದ ನಂತರದ ಅತ್ಯುತ್ತಮ ವಿದೇಶಾಂಗ ನೀತಿ ರೂಪಿಸಿದ್ದರು. 25ಕ್ಕೂ ಹೆಚ್ಚು ರಾಷ್ಟ್ರಗಳ ಜತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ನವಭಾರತ ಕನಸಿನ ಬೀಜ ಬಿತ್ತಿದ್ದರು ಎಂದು ಸ್ಮರಿಸಿದರು.

ಹಿಂದೆ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಅಮೆರಿಕ, ಇಂಗ್ಲೆಂಡ್‌, ಜಪಾನ್ ಮತ್ತಿತರ ದೇಶಗಳ ಹೆಸರು ಹೇಳುತ್ತಿದ್ದರು. ಇಂದು ಭಾರತದ ಅಂತಹ ಸ್ಥಾನದಲ್ಲಿದೆ. ಜಗತ್ತು ಭಾರತದತ್ತ ನೋಡುತ್ತಿದೆ. ದೇಶದ ಪ್ರಗತಿಗಾಗಿ, ಉತ್ತಮ ಭವಿಷ್ಯಕ್ಕಾಗಿ ಮೋದಿ ಅವರು ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ಉತ್ತಮ ಆಡಳಿತವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂಬ ಧ್ಯೇಯವನ್ನು ಬಿಜೆಪಿ ತೋರಿಸಿಕೊಟ್ಟಿದೆ. ವಾಜಪೇಯಿ, ನರೇಂದ್ರ ಮೋದಿ ಆಡಳಿತ ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಾಭಿವೃದ್ಧಿ ತಜ್ಞ ನರೇಶ್ ವಿ.ನರಸಿಂಹನ್‌, ಶಿಕ್ಷಣ ತಜ್ಞ ವಿ.ಆರ್‌. ಪ್ರಸನ್ನ, ಡಾ.ಸುಬ್ರಹ್ಮಣ್ಯ ಬಸವನಹಳ್ಳಿ, ಮಧುಶೆಟ್ಟಿ ಉಪಸ್ಥಿತರಿದ್ದರು.

ನಾಯಕತ್ವಕ್ಕೆ ಸಿದ್ದರಾಮಯ್ಯ–ಹರಿಪ್ರಸಾದ್‌ ಮಧ್ಯೆ ಸ್ಪರ್ಧೆ

ಹಿಂದುಳಿದ ವರ್ಗಗಳ ನಾಯಕತ್ವ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಧ್ಯೆ ಸ್ಪರ್ಧೆ ನಡೆಯುತ್ತಿದೆ ಎಂದು ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಇಬ್ಬರೂ ತಾವೇ ಮುಂಚೂಣಿ ನಾಯಕರೆಂದು ಸಾಬೀತು ಮಾಡಲು ಬಿಜೆಪಿ ವಿರುದ್ಧ ಅನಗತ್ಯ ಟೀಕೆಗೆ ಇಳಿದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಹರಿಪ್ರಸಾದ್‌ ಅರ್ಥವಿಲ್ಲದ ಮಾತುಗಳನ್ನು ಹೇಳಿದ್ದಾರೆ. ಇಂತಹ ನಡವಳಿಕೆಗಳಿಂದ ಯಾರೂ ನಾಯಕರಾಗುವುದಿಲ್ಲ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT