ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯೂ ಹಣವಂತರ ಪಾಲಾಗುವ ಸಾಧ್ಯತೆ: ಬಿ.ಆರ್. ಪಾಟೀಲ

ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲಗೆ ‘ಶಾಂತವೇರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿ’ ಪ್ರದಾನ
Published 14 ಮಾರ್ಚ್ 2024, 16:20 IST
Last Updated 14 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಶ್ರೀಮಂತರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವಂತಾಗಿದೆ. ಈಗಾಗಲೇ ರಾಜ್ಯಸಭೆಯು ಹಣವಂತರಿಂದ ಭರ್ತಿಯಾಗಿದ್ದು, ವಿಧಾನಸಭೆಯೂ ಇದೇ ರೀತಿ ಆಗುವ ಸಾಧ್ಯತೆಯಿದೆ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದರು. 

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶಾಂತವೇರಿ ಗೋಪಾಲಗೌಡ ಸಂಸ್ಕೃತಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ಈ ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ಈ ನಗದನ್ನು ಕನ್ನಡ ಜನಶಕ್ತಿ ಕೇಂದ್ರಕ್ಕೆ ಮರಳಿಸಿದ ಅವರು, ‘ಕನ್ನಡ ಪರ ಕೆಲಸ ಮಾಡುವವರಿಗೆ ನೀಡಿ, ಪ್ರೋತ್ಸಾಹಿಸಿ’ ಎಂದು ಹಾರೈಸಿದರು. 

‘ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುವುದೇ ಮುಜುಗರದ ಸಂಗತಿಯಾಗಿದೆ. ಇನ್ನು ಮುಂದೆ ಚುನಾವಣೆಗಳಲ್ಲಿ ಹಣವುಳ್ಳವರು ಮಾತ್ರ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗುತ್ತಾರೆ. ಇದರಿಂದ ಬಡವರು, ರೈತರು, ಕೂಲಿಕಾರರ ಬಗ್ಗೆ ಮಾತನಾಡುವವರು ಕಡಿಮೆ ಆಗುತ್ತಾರೆ. ಅದನ್ನು ಈಗ ವಿಧಾನಸಭೆಯಲ್ಲಿ ನೋಡಬಹುದಾಗಿದೆ. ವಿಧಾನಸಭೆ ಅಧಿವೇಶನದ ಅವಧಿಯೂ ಕುಸಿತ ಆಗುತ್ತಿದೆ. ರಾಜಕಾರಣಿಗಳ ಬದಲಾಗಿ ಅಧಿಕಾರಿಗಳು ಆಳ್ವಿಕೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬಿಕ್ಕಟ್ಟು ಎದುರಾಗಿದೆ’ ಎಂದು ಹೇಳಿದರು. 

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ‘ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಜೀಪ್‌ ಹಗರಣದಲ್ಲಿ ₹ 52 ಲಕ್ಷ, ಬೊಫೋರ್ಸ್ ಹಗರಣದಲ್ಲಿ ₹ 64 ಕೋಟಿ, ಕಾಮನ್‌ವೆಲ್ತ್ ಹಗರಣದಲ್ಲಿ ₹70 ಸಾವಿರ ಕೋಟಿ, 2ಜಿ ಹಗರಣದಲ್ಲಿ ₹1.76 ಸಾವಿರ ಕೋಟಿ, ಕಲ್ಲಿದ್ದಲು ಹಗರಣದಲ್ಲಿ ₹ 1.86 ಸಾವಿರ ಕೋಟಿ ಲೂಟಿ ಹೊಡೆಯಲಾಗಿದೆ. ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆ ಇವುಗಳಿಗೆಲ್ಲಾ ಕಾರಣ. ಜೀವನದಲ್ಲಿ ತೃಪ್ತಿಯನ್ನು ಹೊಂದುವ ಜತೆಗೆ ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. 

ವಿಮರ್ಶಕ ನಟರಾಜ್ ಹುಳಿಯಾರ್, ‘ಶಾಂತವೇರಿ ಗೋಪಾಲಗೌಡರಿಗೆ ವೈಚಾರಿಕ ಸ್ಪಷ್ಟತೆಯಿತ್ತು. ಅನ್ಯಾಯ ಕಂಡರೆ ಅವರಿಗೆ ರಕ್ತದ ಒತ್ತಡ ಹೆಚ್ಚಾಗುತ್ತಿತ್ತು. ಒಬ್ಬ ವ್ಯಕ್ತಿಯಾಗಿ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಕೀಲ ಕೆ. ದಿವಾಕರ್, ‘ವಿಚಾರ ಮತ್ತು ಅಧಿಕಾರದ ನಡುವೆ ಸಂಘರ್ಷವಾದಾಗ ಶಾಂತವೇರಿ ಗೋಪಾಲಗೌಡ ಅವರು ವಿಚಾರಕ್ಕೆ ಆದ್ಯತೆ ನೀಡುತ್ತಿದ್ದರು. ಈಗ ಅಂತಹವರು ಕಾಣಸಿಗುವುದಿಲ್ಲ. ಬಿ.ಆರ್. ಪಾಟೀಲ ಅವರಿಗೆ ರಾಜಕೀಯದಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಸಿಕ್ಕಿಲ್ಲ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT