ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಅಂತರ್ಜಲ ಮಟ್ಟ ವೃದ್ಧಿ; 2022ರ ನವೆಂಬರ್‌ನಲ್ಲಿ ದಾಖಲೆ

ಅಂತರ್ಜಲ ನಿರ್ದೇಶನಾಲಯ
Last Updated 16 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎರಡು ವರ್ಷಗಳಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಹೆಚ್ಚಾದ ಮಳೆಯಿಂದ, ಕೆರೆಗಳಲ್ಲಿ ನೀರಿನ ಸಂಗ್ರಹವಾಗಿರುವುದರಿಂದ 2022ರ ನವೆಂಬರ್‌ನಲ್ಲಿ ದಾಖಲೆ ಎಂಟು ಅಡಿಯಷ್ಟು ಅಂತರ್ಜಲ ವೃದ್ಧಿಯಾಗಿದೆ.

ಅಂತರ್ಜಲ ನಿರ್ದೇಶನಾಲಯದ ಅಂಕಿ–ಅಂಶದ ಪ್ರಕಾರ, 2020ರಿಂದ 2021ರಲ್ಲಿ 2 ಅಡಿ ವೃದ್ಧಿಯಾಗಿತ್ತು. 2022ರ ಅಂತ್ಯದಲ್ಲಿ ದಾಖಲೆ ಮಟ್ಟದಲ್ಲಿ ವೃದ್ಧಿಯಾಗಿದೆ.

‘ಅಂತರ್ಜಲ ವೃದ್ಧಿಗೆ ಒಂದೇ ಕಾರಣ ಎಂದು ಹೇಳಲಾಗುವುದಿಲ್ಲ. ಮಳೆ ನೀರನ್ನು ಸಂಗ್ರಹಿಸುವುದು, ಇಂಗಿಸುವ ಪ್ರಕ್ರಿಯೆ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಅಂತರ್ಜಲ ವೃದ್ಧಿಯಾಗಿರಬಹುದು. ನಗರದ ಸುತ್ತಮುತ್ತ ಕೆರೆಗಳ ಪುನರುಜ್ಜೀವನವೂ ಹೆಚ್ಚಿನ ಪರಿಣಾಮ ಬೀರಿದೆ’ ಎಂದು ತಜ್ಞರು ಹೇಳಿದರು.

‘ಮಳೆಯೊಂದೇ ಸಾಲುವುದಿಲ್ಲ. ಮಳೆ ನೀರನ್ನು ಇಂಗಿಸುವ ಕಾರ್ಯವಾಗಬೇಕು. ಎರಡು ವರ್ಷಗಳಲ್ಲಿ ಅರಿವು ಹೆಚ್ಚಾಗಿದೆ’ ಎಂದು ನೀರು ಸಂರಕ್ಷಣೆ ತಜ್ಞ ಎಸ್‌. ವಿಶ್ವನಾಥ್‌ ತಿಳಿಸಿದರು.

‘ಲಾಲ್‌ಬಾಗ್‌ನಲ್ಲಿ 2019ರಲ್ಲಿ ನೀರಿನ ಮಟ್ಟ 45 ಅಡಿಯಷ್ಟು ಕೆಳಗೆಹೋಗಿತ್ತು. ಇದೀಗ 15 ಅಡಿಗೆ ನೀರಿನ ಮಟ್ಟವಿದೆ. 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ 5 ಅಡಿಗೇ ನೀರು ಸಿಗುತ್ತದೆ. ಇದು ಸುತ್ತಲಿನ ಪರಿಸರ, ಉದ್ಯಾನದ ನಿರ್ವಹಣೆಗೆ ಸಹಕಾರಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ಮಾಹಿತಿ ನೀಡಿದರು.

‘ನಗರದಲ್ಲಿ ತ್ಯಾಜ್ಯ ಮತ್ತು ಒಳಚರಂಡಿ ನೀರಿನ ನಿರ್ವಹಣೆ ಉತ್ತಮ ಮಟ್ಟದಲ್ಲಿ ಇಲ್ಲ. ಅಭಿವೃದ್ಧಿಗೊಂಡ ಹಲವು ಕೆರೆಗಳಿಗೆ ಕೈಗಾರಿಕೆ ತ್ಯಾಜ್ಯ ಹಾಗೂ ಒಳಚರಂಡಿ ನೀರು ಹರಿಯುತ್ತಿದೆ. ಇದೆಲ್ಲವೂ ಇಂಗಿ ಅಂತರ್ಜಲ ತಲುಪಿದರೆ ಅತ್ಯಂತ ಕೆಟ್ಟ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ.ವಿ. ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT